ಚನ್ನಪಟ್ಟಣ: ನಗರದ 31ನೇ ವಾರ್ಡ್ ವ್ಯಾಪ್ತಿಯ ಕೆಎಚ್‌ಬಿ ಬಡಾವಣೆಯಲ್ಲಿ ರಸ್ತೆ ಬದಿಯಲ್ಲಿರುವ ಯುಜಿಡಿ ಛೇಂಬರ್ ಮುಚ್ಚಳವಿಲ್ಲದೇ ತೆರೆದುಕೊಂಡಿದ್ದು, ಯಾರಾದರೂ ಬಿದ್ದು, ಅನಾಹುತವಾಗುವ ಮುನ್ನ ಇದಕ್ಕೆ ಮುಚ್ಚಳ ಅಳವಡಿಸುವ ಅಗತ್ಯವಿದೆ.
ಹತ್ತಿರದಲ್ಲೇ ಇರುವ ಉದ್ಯಾನವನಕ್ಕೆ ವಾಯುವಿಹಾರಕ್ಕೆ ಹಿರಿಯರು ಹಾಗೂ ಆಟವಾಡಲು ಮಕ್ಕಳು ಆಗಮಿಸುತ್ತಾರೆ. ಆಟಆಡಲು ಬರುವ ಮಕ್ಕಳು ಮುಚ್ಚಳವಿಲ್ಲದ ಛೇಂಬರ್‌ಗೆ ಬಿದ್ದರೆ ಭಾರಿ ಅನಾಹುತವಾಗುವ ಸಾಧ್ಯತೆ ಇದೆ. ಇದಲ್ಲದೇ ಇದೀಗ ಮಳೆಗಾಲ ಆರಂಭಗೊಂಡಿದ್ದು, ಮಳೆ ಬಂದು ರಸ್ತೆಯಲ್ಲಿ ನೀರು ನಿಂತಲ್ಲಿ ಛೇಂಬರ್ ಕಾಣದೇ ಬೈಕ್ ಸವಾರು ಹಾಗೂ ಪಾದಚಾರಿಗಳು ಛೇಂಬರ್‌ಗೆ ಬೀಳುವ ಸಂಭವವಿದೆ.
ಮುಚ್ಚಳವಿಲ್ಲದೇ ತೆರೆದಿರುವ ಛೇಂಬರ್‌ಗೆ ಯಾರಾದರೂ ಬಿದ್ದು, ಕೈಕಾಲು ಮುರಿದುಕೊಳ್ಳುವ ಮುನ್ನ ನಗರಸಭೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಛೇಂಬರ್‌ಗೆ ಮುಚ್ಚಳ (ಕ್ಯಾಪ್) ಅನ್ನು ಅಳವಡಿಸುವ ಕೆಲಸ ಮಾಡಬೇಕು ಎಂದು ಬಡಾವಣೆಯ ನಾಗರಿಕರು ಆಗ್ರಹಿಸಿದ್ದಾರೆ.