ಕನ್ನಡಪ್ರಭ ವಾರ್ತೆ ಹಾಸನ
ಅಕ್ಟೋಬರ್ 9ರಂದು ಬಾಗಿಲು ತೆರೆಯುವ ಮೂಲಕ ಆರಂಭವಾದ ಹಾಸನಾಂಬ ದೇವಿಯ ದರ್ಶನವು ದೀಪಾವಳಿಯ ಮರುದಿನ, ಗುರುವಾರ ಶಾಸ್ತ್ರೋಕ್ತವಾಗಿ ಕೊನೆಗೊಂಡಿತು. ಗಣ್ಯರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮಧ್ಯಾಹ್ನ 1.05ಕ್ಕೆ ಗರ್ಭಗುಡಿಯ ಬಾಗಿಲು ಮುಚ್ಚಿ, ಬೀಗ ಹಾಕುವ ಮೂಲಕ 2025ರ ಹಾಸನಾಂಬ ಉತ್ಸವಕ್ಕೆ ತೆರೆ ಎಳೆಯಲಾಯಿತು.ಸಂಪ್ರದಾಯದಂತೆ ಬೆಳಗ್ಗೆ ಪೂಜೆ, ನೈವೇದ್ಯ ನೆರವೇರಿಸಿದ ಅರ್ಚಕರು, ನಂದಾದೀಪ ಹಚ್ಚಿಟ್ಟರು. ಹೀಗಾಗಿ, ಸಾರ್ವಜನಿಕರಿಗೆ ದರ್ಶನ ಬಂದ್ ಮಾಡಲಾಗಿತ್ತು. ಬಳಿಕ, ಗರ್ಭಗುಡಿಯ ಬಾಗಿಲು ಹಾಕುವ ವೇಳೆ ಕೆಲ ಸಮಯ, ನೆರೆದಿದ್ದ ಕರ್ತವ್ಯನಿರತ ಸಿಬ್ಬಂದಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಬಳಿಕ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ದೇವಾಲಯದ ಬಾಗಿಲು ಮುಚ್ಚಿ ಮುದ್ರೆ ಹಾಕಿ, ಸೀಲ್ ಹಾಕಲಾಯಿತು. ಕೀಲಿ ಕೈಯನ್ನು ದೇವಾಲಯದ ಆಡಳಿತಾಧಿಕಾರಿಗೆ ಹಸ್ತಾಂತರಿಸಲಾಯಿತು. ಬಳಿಕ, ಹಾಸನಾಂಬೆಯ ಒಡವೆಗಳನ್ನು ಮುಖ್ಯ ಅರ್ಚಕರು ತಲೆ ಮೇಲೆ ಹೊತ್ತುಕೊಂಡು, ದೇವಾಲಯದ ಸುತ್ತ ಮಂಗಳವಾದ್ಯದೊಡನೆ ಮೆರವಣಿಗೆ ನಡೆಸಿದರು. ನಂತರ, ಮೂಲ ಸ್ಥಾನದಲ್ಲಿ ಇಡಲಾಯಿತು.26 ಲಕ್ಷ ಭಕ್ತರ ಭೇಟಿ:
ಈ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಈ ಬಾರಿ ಹಾಸನಾಂಬ ಉತ್ಸವದಲ್ಲಿ ದಾಖಲೆ ಪ್ರಮಾಣದಲ್ಲಿ, ಸುಮಾರು 26.13 ಲಕ್ಷ ಭಕ್ತರು ದೇವರ ದರ್ಶನ ಪಡೆದಿದ್ದಾರೆ. 82 ಲಕ್ಷ ಟಿಕೆಟ್ ಮತ್ತು ಲಡ್ಡು ಪ್ರಸಾದ ಮಾರಾಟದಿಂದ ₹21.82 ಕೋಟಿ ಆದಾಯ ಬಂದಿದೆ. ಹುಂಡಿ ಎಣಿಕೆ ಸೇರಿ ಅಂದಾಜು ₹25 ಕೋಟಿ ಆದಾಯ ಬರುವ ನಿರೀಕ್ಷೆ ಇದೆ. ಹುಂಡಿ ಎಣಿಕೆ ಕಾರ್ಯ ಶುಕ್ರವಾರ ನಡೆಯಲಿದೆ. ಕಳೆದ ವರ್ಷ 17.47 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದರು. ಟಿಕೆಟ್ ಮತ್ತು ಲಾಡು ಪ್ರಸಾದ ಮಾರಾಟದಿಂದ 9.68 ಕೋಟಿ ಆದಾಯ ಬಂದಿತ್ತು ಎಂದರು.ಶೇ.98ರಷ್ಟು ಭಕ್ತರು ಹಾಸನಾಂಬ ದೇವಿಯ ದರ್ಶನ ಮಾಡಿಕೊಂಡು ಹೋಗಿದ್ದಾರೆ. ಸಂಸದರು, ಶಾಸಕರು, ವಿಧಾನ ಪರಿಷತ್ತು ಸದಸ್ಯರು, ಮಾಜಿ ಶಾಸಕರು ಸೇರಿ ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಕಳೆದ, ಶುಕ್ರವಾರದಂದು 3 ಲಕ್ಷದ 62 ಸಾವಿರ ಭಕ್ತರು ಬಂದು, ದರ್ಶನ ಮಾಡಿದ್ದು ವಿಶೇಷ. ಈ ವರ್ಷ ಅತ್ಯಂತ ಸುಗಮವಾಗಿ ದರ್ಶನ ನಡೆದಿದೆ ಎಂದು ತಿಳಿಸಿದರು.ಕೆಂಡ ಹಾಯ್ದ ಡೀಸಿ ಲತಾ:ಹಾಸನಾಂಬೆ ದೇವಿಯ ದರ್ಶನ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಮುಂಜಾನೆ ನಡೆದ ಕೆಂಡೋತ್ಸವದಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ ಕೆಂಡ ಹಾಯ್ದು ತಮ್ಮ ಭಕ್ತಿ ಪ್ರದರ್ಶಿಸಿದರು. ಸಿದ್ದೇಶ್ವರ ಜಾತ್ರೆ ಭಕ್ತಿ, ಭಾವನಾಭರಿತ ವಾತಾವರಣದಲ್ಲಿ ಅದ್ಧೂರಿಯಾಗಿ ನೆರವೇರಿತು. ಬೆಳಗಿನ ಜಾವದಿಂದಲೇ ದೇವಾಲಯದ ಆವರಣದಲ್ಲಿ ಭಕ್ತರ ದೊಡ್ಡ ಜನಸಂದಣಿ ಕಂಡು ಬಂತು. ಭಕ್ತರು ಕೆಂಡದ ಮೇಲೆ ನಡೆದು, ತಾಯಿಯ ಕೃಪೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ, ಜಿಲ್ಲಾಧಿಕಾರಿ ಕೂಡ ಕೆಂಡ ಹಾಯ್ದರು.
ಈ ವೈಭವಶಾಲಿ ಕೆಂಡೋತ್ಸವವನ್ನು ನೋಡುವ ಸಲುವಾಗಿ ಸಾವಿರಾರು ಭಕ್ತರು ಹಾಸನಾಂಬೆ ದೇವಾಲಯಕ್ಕೆ ಆಗಮಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.