ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸೋಮವಾರ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಲ್ಲಿನ ಆಸ್ಪತ್ರೆಗೆ ಬಹು ಮುಖ್ಯ ವಿಭಾಗಗಳಿಗೆ ಅಗತ್ಯವಿರುವ ವೈದ್ಯರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ. ಶಸ್ತ್ರಚಿಕಿತ್ಸಾ ಕೊಠಡಿ ಪ್ರಾರಂಭವಾದರೆ ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ಜಿಲ್ಲಾ ಕೇಂದ್ರ ಅಥವಾ ಬೇರೆಡೆಗೆ ತೆರಳುವ ಅಗತ್ಯವಿಲ್ಲ. ಶೀಘ್ರದಲ್ಲಿಯೇ ಅರಿವಳಿಕೆ ತಜ್ಞರನ್ನು ಕೂಡ ನೇಮಕ ಮಾಡಲಾಗುವುದು ಎಂದರು.ಆಸ್ಪತ್ರೆಗೆ ನೇಮಕಗೊಂಡ ವೈದ್ಯರನ್ನು ಇಲ್ಲಿಯೇ ಉಳಿಸಿಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿ ಆಗಿರಬೇಕು. ವೈದ್ಯರೂ ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇಂತಹ ಸಂದರ್ಭ ಯಾವುದೋ ಅನವಶ್ಯಕ ಕಾರಣಗಳನ್ನು ನೀಡಿ, ಉಡಾಫೆಯ ಮಾತನಾಡುವುದನ್ನು ನಿಲ್ಲಿಸಬೇಕು. ಅನಗತ್ಯ ಗೊಂದಲ ಸೃಷ್ಠಿ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಇದುವರೆಗೆ ಆಸ್ಪತ್ರೆಯಲ್ಲಿ ಇದ್ದ ವ್ಯವಸ್ಥೆ ಮುಂದಿನ ದಿನಗಳಲ್ಲಿ ಬದಲಾಗಲಿದೆ. ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ಸಾರ್ವಜನಿಕರಿಗೆ ಉತ್ತಮ ಸೇವೆ ದೊರಕುವಂತಾಗಬೇಕು. ನೂತನವಾಗಿ ನೇಮಕಗೊಂಡ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ಸಾರ್ವಜನಿಕರು ಮೆಚ್ಚುವ ರೀತಿಯಲ್ಲಿ ಸೇವೆ ಮಾಡಬೇಕೆಂದು ಹೇಳಿದರು.
ಮುಂದಿನ ಒಂದು ವಾರದಲ್ಲಿ ರಾಜ್ಯದಲ್ಲಿ ವೈದ್ಯರ ನೇಮಕಾತಿಗಾಗಿ ಕೌನ್ಸೆಲಿಂಗ್ ನಡೆಯಲಿದ್ದು, ಕೊಡಗು ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲೆಗೆ ಭೇಟಿ ನೀಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ತಿಳಿಸಿದ್ದಾರೆ. ಸೋಮವಾರಪೇಟೆ ಆಸ್ಪತ್ರೆಗೂ ವೈದ್ಯರ ನೇಮಕವಾಗಲಿದೆ ಎಂದರು.
ವೈದ್ಯರಿಗೆ ಸೂಚನೆ:
ಸಾರ್ವಜನಿಕರು ಆಸ್ಪತ್ರೆಯ ಪ್ರಯೋಗಾಲಯದಲ್ಲಿಯೇ ರಕ್ತ ಪರೀಕ್ಷೆ ಮಾಡಲು ವೈದ್ಯರು ಸೂಚಿಸಬೇಕು. ಆಸ್ಪತ್ರೆಯ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಯಾರೂ ಖಾಸಗಿ ಪ್ರಯೋಗಾಲಯ ನಡೆಸಬಾರದು ಎಂದು ಸರ್ಕಾರದ ಆದೇಶ ಇದೆ. ವೈದ್ಯರು ಕೂಡ ಕಮೀಷನ್ ಆಸೆಗಾಗಿ ದುಂಬಾಲು ಬೀಳಬಾರದು ಎಂದು ಶಾಸಕರು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಇಂದೂಧರ್, ಆಡಳಿತ ವೈದ್ಯಾಧಿಕಾರಿಗಳು,ಆ ರೋಗ್ಯ ರಕ್ಷಾ ಸಮಿತಿಯ ಪದಾಧಿಕಾರಿಗಳು ಇದ್ದರು.