ಕನ್ನಡಪ್ರಭ ವಾರ್ತೆ ಕಲಬುರಗಿದಿನದಿಂದ ದಿನಕ್ಕೆ ಮೊಬೈಲ್ ಕಳವಿನ ಪ್ರಕರಣ ಹೆಚ್ಚುತ್ತಿರೋದು ಮನಗಂಡಿರುವ ನಗರ ಖಾಕಿಪಡೆ ಕಳೆದು ಹೋಗಿರುವ ಮೊಬೈಲ್‌ಗಳ ಪತ್ತೆಗೆಂದೇ ಆರಂಭಿಸಿರುವ ಆಪರೇಷನ್ ಭರವಸೆ ಕಳೆದು ಹೋದ ಮೊಬೈಲ್ ಮತ್ತೆ ಮಾಲೀಕರ ಕೈ ಸೇರುವಂತೆ ಮಾಡುತ್ತಿದೆ. ಹೀಗಾಗಿ ಸಾರ್ವಜನಿಕರು ಪೊಲೀಸ್ ವ್ಯವ್ಥೆಯಲ್ಲಿ ಮರಳಿ ವಿಶ್ವಾಸ ಇಡುವಂತಾಗಿದೆ.ಕಲಬುರಗಿ ನಗರ ಪೊಲೀಸರು ನಡೆಸಿದ ಬೃಹತ್ ಆಪರೇಷನ್ ಭರವಸೆ ಕಾರ್ಯಾಚರಣೆಯಡಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮತ್ತು ಕಳ್ಳತನವಾಗಿದ್ದ ಬಹುಕೋಟಿ ಮೊತ್ತದ 3,616 ಮೊಬೈಲ್‌ಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿ, ಅವುಗಳ ಮೂಲ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
ಪೊಲೀಸ್ ಕಮಿಷನರ್ ಡಾ. ಶರಣಪ್ಪ ಢಗೆ ಅವರು ಕಳವಾದ ಮೊಬೈಲ್‌ಗಳನ್ನು ಮಾಲೀಕರಿಗೆ ಹಸ್ತಾಂತರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರ್ವಜನಿಕರು ಇ-ಲಾಸ್ಟ್ ಸಿಸ್ಟಮ್ ಮತ್ತು ಕೇಂದ್ರ ಸರ್ಕಾರದ CEIR Portalನಲ್ಲಿ ದಾಖಲಿಸಿದ್ದ ದೂರುಗಳ ಆಧಾರದ ಮೇಲೆ ಸೈಬರ್ ಕ್ರೈಮ್ ತಾಂತ್ರಿಕ ತಂಡವು ಮೊಬೈಲ್‌ಗಳನ್ನು ಟ್ರೇಸ್ ಮಾಡಿದೆ ಎಂದರು.ಕೇವಲ 2 ತಿಂಗಳ ಅವಧಿಯಲ್ಲಿ ಕರ್ನಾಟಕ ಮಾತ್ರವಲ್ಲದೆ ನೆರೆರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಹುಡುಕಾಟ ನಡೆಸಿ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಚೌಕ್ ಪೊಲೀಸ್ ಠಾಣೆ (47 ಮೊಬೈಲ್) ಸೆನ್, ಸರ್ಬನ್ ಠಾಣೆಗಳಲ್ಲಿ ತಲಾ 38 ಸೇರಿದಂತೆ ಎಲ್ಲ 11 ಠಾಣೆಗಳ ವ್ಯಪ್ತಿಯಲ್ಲಿ ಕಳವಾದ 300 ಮೊಬೈಲ್ ಪತ್ತೆ ಹಚ್ಚಲಾಗಿದೆ.ಕಳವಾದ ಮೊಬೈಲ್‌ಗಳ ಪತ್ತೆಯಲ್ಲಿ ಕಲಬುರಗಿ ವ್ಯಾಪ್ತಿಯಲ್ಲಿ ಪ್ರತಿಶತ ಪತ್ತೆ ಪ್ರಮಾಣ ಹೆಚ್ಚಿದೆ. ಶೇ.31 ರಷ್ಟಿದ್ದ ಈ ಪತ್ತೆ ದರ ಇದೀಗ ಶೇ. 61 ಕ್ಕೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿಗಳ ಇನ್ನಷ್ಟು ಚುರುಕು ತನಖೆಯಿಂದ ಶೇ.90 ರಷ್ಟು ಮೊಬೈಲ್ ಪತ್ತೆ ಕೆಲಸವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೊಬೈಲ್ ಕಳವಾದರೆ ಹೀಗೆ ಮಾಡಿ:ತಕ್ಷಣವೇ ನಿಮ್ಮ ಹತ್ತಿರದ ಪೊಲೀಸ್ ಠಾಣೆ ಅಥವಾ KSP ಆಪ್ ಮೂಲಕ ಇ-ಲಾಸ್ಟ್ ದೂರು ನೀಡಿ ಸ್ವೀಕೃತಿ ಪಡೆದುಕೊಳ್ಳಿ. CEIR ವೆಬ್‌ಸೈಟ್ ಗೆ ಭೇಟಿ ನೀಡಿ ''''''''Block Stolen/Lost Mobile'''''''' ಆಯ್ಕೆ ಬಳಸಿ ನಿಮ್ಮ ಐಎಂಇಐ (IMEI) ಸಂಖ್ಯೆಯನ್ನು ಬ್ಲಾಕ್ ಮಾಡಿ. ಇದರಿಂದ ನಿಮ್ಮ ಫೋನ್ ದುರುಪಯೋಗವಾಗುವುದು ತಪ್ಪುತ್ತದೆ ಮತ್ತು ಪೊಲೀಸರು ಅದನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ.