ಅಂಬೇಡ್ಕರ್‌ ಹಾಸ್ಟೆಲ್‌ನಲ್ಲಿ ನರ್ಸಿಂಗ್‌ ವಿದ್ಯಾರ್ಥಿ ಸಾವು

KannadaprabhaNewsNetwork |  
Published : Nov 07, 2026, 01:30 AM IST
ಅಂಬೇಡ್ಕರ್‌ 1 | Kannada Prabha

ಸಾರಾಂಶ

ಕಲಬುರಗಿಯ ರಾಜಾಪುರ ಬಡಾವಣೆ ಬಳಿಯಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ವಿದ್ಯಾರ್ಥಿಯೊಬ್ಬ ವಸತಿ ನಿಲಯದ 4ನೇ ಮಹಡಿಯಿಂದ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ಶುಕ್ರವಾರ ನಸುಕಿನ ಜಾವದಲ್ಲಿ ಈ ದಾರುಣ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿಯ ರಾಜಾಪುರ ಬಡಾವಣೆ ಬಳಿಯಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ವಿದ್ಯಾರ್ಥಿಯೊಬ್ಬ ವಸತಿ ನಿಲಯದ 4ನೇ ಮಹಡಿಯಿಂದ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ಶುಕ್ರವಾರ ನಸುಕಿನ ಜಾವದಲ್ಲಿ ಈ ದಾರುಣ ಘಟನೆ ನಡೆದಿದೆ.ಮೃತ ವಿದ್ಯಾರ್ಥಿಯನ್ನು ಚಿತ್ತಾಪುರ ತಾಲೂಕಿನ ಕುಂದನೂರು ಗ್ರಾಮದ ಮುಜಾಹೀದ್ ಪಟೇಲ್ (25) ಎಂದು ಗುರುತಿಸಲಾಗಿದೆ. ಈತ ಕಲಬುರಗಿಯ ಕಾಲೇಜೊಂದರಲ್ಲಿ ಬಿಎಸ್‌ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದನು. ತಡರಾತ್ರಿ ಹಾಸ್ಟೆಲ್‌ನ 4ನೇ ಮಹಡಿಯಿಂದ ಕೆಳಗೆ ಬಿದ್ದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿವೆ. ಮೃತ ಮುಜಾಹಿದ್ ರಾತ್ರಿ ತನ್ನ ಸ್ನೇಹಿತರೊಂದಿಗೆ ವಸತಿ ನಿಲಯದಲ್ಲಿ ಮದ್ಯಪಾನ ಮಾಡಿದ್ದ ಎನ್ನಲಾಗಿದ್ದು, ಕುಡಿದ ಮತ್ತಿನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾನೆಯೇ ಅಥವಾ ಮದ್ಯ ಸೇವನೆಯ ಅಮಲಿನಲ್ಲಿ ನಡೆದ ಗಲಾಟೆಯಿಂದ ಯಾರಾದರೂ ತಳ್ಳಿ ಕೃತ್ಯ ಎಸಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಈ ಸಂಬಂಧ ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.*ಅಂಬೇಡ್ಕರ್‌ ಹಾಸ್ಟೆಲ್‌ನಲ್ಲಿ 2ನೇ ಘಟನೆ: ಇದೇ ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ಕೆಲವೇ ದಿನಗಳ ಹಿಂದಷ್ಟೇ (ಅ.29 ರಂದು) ಸುಮೀತ್ ಎಂಬ ಡಿಪ್ಲೊಮಾ ವಿದ್ಯಾರ್ಥಿಯ ಮೇಲೆ ಹಿರಿಯ ವಿದ್ಯಾರ್ಥಿಗಳು ಮದ್ಯದ ಪಾರ್ಟಿ ನಡೆಸಿ, ಹಣಕ್ಕಾಗಿ ಬೆತ್ತಲೆಗೊಳಿಸಿ ಕ್ರೂರವಾಗಿ ರ್‍ಯಾಗಿಂಗ್ ಮತ್ತು ಹಲ್ಲೆ ನಡೆಸಿದ್ದ ಘಟನೆ ವರದಿಯಾಗಿತ್ತು. ಆ ಘಟನೆ ಬೆನ್ನಲ್ಲೇ ಈಗ ಮತ್ತೊಬ್ಬ ವಿದ್ಯಾರ್ಥಿಯ ಅನುಮಾನಾಸ್ಪದ ಸಾವು ಸಂಭವಿಸಿರುವುದು ಹಾಸ್ಟೆಲ್‌ನಲ್ಲಿ ಭದ್ರತೆ ಮತ್ತು ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.ಮುಜಾಹೀದ್ ಪಟೇಲ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಪುರ ಠಾಣೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಶುಕ್ರವಾರ ನಸುಕಿನ ಜಾವ ಘಟನೆ ನಡೆದ ತಕ್ಷಣ ಬ್ರಹ್ಮಪುರ ಠಾಣೆಯ ಪೊಲೀಸರು ಹಿರಿಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತದೇಹವನ್ನು ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಹಾಗೂ ಬೆರಳಚ್ಚು ತಜ್ಞರು ಸ್ಥಳದಿಂದ ಸಾಕ್ಷ್ಯಗಳ ಸಂಗ್ರಹಿಸಿದ್ದಾರೆ.

*ಆತ್ಮಹತ್ಯೆಯೋ? ಕೊಲೆಯೋ?: ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಘಟನೆ ನಡೆದ ರಾತ್ರಿ ವಸತಿ ನಿಲಯದಲ್ಲಿ ಮದ್ಯದ ಪಾರ್ಟಿ ನಡೆದಿತ್ತು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಮೃತ ಮುಜಾಹೀದ್ ಜತೆಗೆ ಪಾರ್ಟಿಯಲ್ಲಿದ್ದ ಇತರ ವಿದ್ಯಾರ್ಥಿಗಳು ಯಾರು? ಮತ್ತು ಯಾರ ನಡುವೆಯಾದರೂ ಗಲಾಟೆ ನಡೆದಿತ್ತೇ? ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.*ಸ್ನೇಹಿತರ ವಿಚಾರಣೆ: ಘಟನೆಯ ವೇಳೆ ಹಾಸ್ಟೆಲ್‌ನಲ್ಲಿದ್ದ ಹಾಗೂ ಮುಜಾಹೀದ್‌ನ ಕೊಠಡಿಯಲ್ಲಿದ್ದ ಸಹಪಾಠಿಗಳು ಮತ್ತು ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಮದ್ಯದ ನಶೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾನೆಯೇ ಅಥವಾ ಯಾರಾದರೂ ಬೇಕೆಂದೇ ತಳ್ಳಿದ್ದಾರೆಯೇ ಎಂಬ ಅನುಮಾನವನ್ನು ಬಗೆಹರಿಸಲು ಅವರ ಹೇಳಿಕೆಗಳು ಮುಖ್ಯವಾಗಿವೆ.*ಹಾಸ್ಟೆಲ್‌ನ ಭದ್ರತೆಯ ಲೋಪದ ತನಿಖೆ: ಇದೇ ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ಅ.29 ರಂದು ವಿದ್ಯಾರ್ಥಿ ಸುಮೀತ್ ಮೇಲೆ ಐವರು ಹಿರಿಯ ವಿದ್ಯಾರ್ಥಿಗಳು ಮದ್ಯ ತರಲು ನಿರಾಕರಿಸಿದ್ದಕ್ಕೆ ಮತ್ತು ಹಣಕ್ಕಾಗಿ ಬೆತ್ತಲೆಗೊಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ರ್‍ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿ ರೋಷನ್, ಶರಣು, ಲಕ್ಷ್ಮಣ್, ರಾಜಕುಮಾರ್ ಸಹಿತ ಐವರ ವಿರುದ್ಧ ಈಗಾಗಲೇ ಕೇಸ್ ದಾಖಲಾಗಿದೆ. ಈ ಹಳೇ ಪ್ರಕರಣಕ್ಕೂ ಮತ್ತು ಮುಜಾಹೀದ್ ಸಾವಿಗೂ ಏನಾದರೂ ಲಿಂಕ್ ಇದೆಯೇ? ಅಥವಾ ಹಾಸ್ಟೆಲ್‌ನಲ್ಲಿ ಪದೇ ಪದೇ ನಡೆಯುತ್ತಿರುವ ಇಂತಹ ಮದ್ಯದ ಪಾರ್ಟಿಗಳು ಹಾಗೂ ಭದ್ರತಾ ಲೋಪಕ್ಕೆ ವಾರ್ಡನ್ ಬೇಜವಾಬ್ದಾರಿತನ ಕಾರಣವೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಪೊಲೀಸರು ಸದ್ಯಕ್ಕೆ ಇದೊಂದು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ಪೂರ್ಣ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಏನೆಂಬುದು ಅಧಿಕೃತವಾಗಿ ಹೊರಬೀಳಲಿದೆ.ಕಲ್ಬುರ್ಗಿ ನಗರದ ಅಂಬೇಡ್ಕರ್ ವಸತಿ ನಿಲಯದಲ್ಲಿ ವಿದ್ಯಾರ್ಥಿಯ ಅನುಮಾನಸ್ಪದ ಸಾವಿನ ಬಗ್ಗೆ ಆತಂಕ ಹೊರಹಾಕಿರುವ ಕರ್ನಾಟಕ ವಿದ್ಯಾರ್ಥಿ ಸಂಘಟನೆಯವರು ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವ ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.

ಅಂಬೇಡ್ಕರ್‌ ಹಾಸ್ಟೆಲ್‌ನಲ್ಲಿನ ವಿದ್ಯಾರ್ಥಿ ಸಾವಿನ ಘಟನೆಯ ಬಗ್ಗೆ ಪೊಲೀಸ್‌ ಅಧಿಕಾರಿಗಳ ತಂಡ ಅದಾಗಲೇ ತನಿಖೆಗೆ ಮುಂದಾಗಿದೆ. ಹಾಸ್ಟೆಲ್‌ನಲ್ಲಿನ ಎಲ್ಲ ಸಂಗತಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ವಿದ್ಯಾರ್ಥಿಯ ಸಾವಿನ ಕುರಿತಂತೆ ಕುಟುಂಬದವರ ಹೇಳಿಕೆ ಪಡೆಯಲಾಗುತ್ತದೆ. ಅವರ ದೂರಿನಂತೆ ತನಿಖೆ ನಿಷ್ಪಕ್ಷಪಾತವಾಗಿ ನಡೆಸಲಾಗುತ್ತದೆ ಎಂದು ಕಲಬುರಗಿ ನಗರ ಪೊಲೀಸ್‌ ಆಯುಕ್ತ ಡಾ. ಶರಣಪ್ಪ ಢಗೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ