ಶಿರೂರು ದುರಂತ : ಚಾಲಕ, ಲಾರಿ ಪತ್ತೆಗೆ ಟಗ್ ಬೋಟ್ ಮೂಲಕ ಇನ್ನು 3 ಜನರ ಪತ್ತೆಗೆ ಕಾರ್ಯಾಚರಣೆ

KannadaprabhaNewsNetwork |  
Published : Jul 28, 2024, 02:13 AM ISTUpdated : Jul 28, 2024, 10:59 AM IST
ಜಗನ್ನಾಥ ಕುಟುಂಬಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಸಾಂತ್ವನ ಹೇಳಿದರು. | Kannada Prabha

ಸಾರಾಂಶ

ಗುಡ್ಡ ಕುಸಿತವಾಗಿ  12 ದಿನ ಕಳೆದಿದೆ.  ರಾಜ್ಯ ಹಾಗೂ ಕೇಂದ್ರ ಸರ್ಕಾರ, ಜಿಲ್ಲಾಡಳಿತದ ನೆರವಿನಿಂದ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌, ಸೇನೆ, ಕೋಸ್ಟ್ ಗಾರ್ಡ್, ನೇವಿ ಹಾಗೂ ಇತರ ಸಂಸ್ಥೆಗಳ ಮೂಲಕ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಇದುವರೆಗೂ 8 ಶವಗಳು ದೊರೆತಿವೆ. ಇನ್ನು 3 ಜನರ ಪತ್ತೆ ಆಗಬೇಕಿದೆ.

ಅಂಕೋಲಾ: ಶಿರೂರು ಬಳಿ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದವರು ಹಾಗೂ ಲಾರಿ ಪತ್ತೆಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಟಗ್‌ ಬೋಟ್‌ ಮೂಲಕ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಸುದ್ದಿಗಾರರ ಜತೆ ಮಾತನಾಡಿದ ಅವರು, ವಾಹನ ಹಾಗೂ ಇತರ ಶವಗಳ ಪತ್ತೆಗೆ ನೀರಿನ ಒಳಗೆ ನುಗ್ಗಿ ಸಂಶೋಧಿಸಬಲ್ಲ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಟಗ್ ಬೋಟ್ ಉಪಕರಣವನ್ನು ತರಿಸಲಾಗುತ್ತಿದೆ. ಇದು ಭಾನುವಾರ ಕಾರ್ಯಾಚರಣೆ ನಡೆಸಲಿದೆ. ಇದರ ಮೂಲಕ ಬಹುಶಃ ಒಳಗೆ ಸಿಲುಕಿರುವ ಎಲ್ಲ ಅವಶೇಷಗಳು ಸಿಗುವ ಲಕ್ಷಣಗಳಿವೆ ಎಂದರು.

ಗುಡ್ಡ ಕುಸಿತವಾಗಿ ಶನಿವಾರಕ್ಕೆ 12 ದಿನ ಕಳೆದಿದೆ. ಅದರೆ ಕಳೆದ ಹಲವಾರು ದಿನಗಳಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ, ಜಿಲ್ಲಾಡಳಿತದ ನೆರವಿನಿಂದ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌, ಸೇನೆ, ಕೋಸ್ಟ್ ಗಾರ್ಡ್, ನೇವಿ ಹಾಗೂ ಇತರ ಸಂಸ್ಥೆಗಳ ಮೂಲಕ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಇದುವರೆಗೂ 8 ಶವಗಳು ದೊರೆತಿವೆ. ಇನ್ನು 3 ಜನರ ಪತ್ತೆ ಆಗಬೇಕಿದೆ ಎಂದರು.

ಕಾರ್ಯಾಚರಣೆಗೆ ತೊಂದರೆ: ದುರಂತ ಸಂಭವಿಸಿದ ದಿನದಿಂದಲೂ ಇಲ್ಲಿಯವರೆಗೆ ನಿರಂತರವಾಗಿ ಮಳೆ ಸುರಿಯುತ್ತಲೇ ಇದೆ. ಆ ಕಾರಣದಿಂದಾಗಿ ನೀರಿನ ಒಳಗೆ ಸಿಲುಕಿರುವ ಮೆಟಲ್ ಅಂಶಗಳ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಇದರಿಂದಾಗಿ ಬೂಮ್ ಯಂತ್ರಕ್ಕೂ ಸರಿಯಾದ ಶೋಧ ನಡೆಸಲು ಸಾಧ್ಯವಾಗುತ್ತಿಲ್ಲ ಎಂದರು.

ಅವೈಜ್ಞಾನಿಕ ಕಾಮಗಾರಿ: ಗುಡ್ಡ ಕುಸಿತ ದುರ್ಘಟನೆ ನಡೆಯಲು ಐಆರ್‌ಬಿಯ ಅವೈಜ್ಞಾನಿಕ ಕಾಮಗಾರಿಯೇ ಪ್ರಮುಖ ಕಾರಣ ಎಂದು ಆರೋಪಿಸಿದ ಕಾಗೇರಿ, ಇದುವರೆಗೂ ಎನ್ಎಚ್ಎಐನಿಂದ ಪರಿಹಾರ ಬರದೇ ಇರುವ ಕಾರಣಕ್ಕೆ ಇನ್ನೂ ಗುಡ್ಡದ ಮೇಲೆ ಜನ ವಾಸವಾಗಿದ್ದಾರೆ. ಇನ್ನು ಮುಂದೆ ಕಾಮಗಾರಿ ಸಮಯದಲ್ಲಿ ಯಾವ ರೀತಿಯ ಮಾರ್ಗಸೂಚಿ ಅನುಸರಿಸಬೇಕೋ ಅವುಗಳನ್ನು ಪಾಲಿಸಲು ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುತ್ತೇವೆ ಎಂದರು.

ರೂಪಾಲಿ ನಾಯ್ಕ ಸಾಂತ್ವನ: ಇದೇ ಸಂದರ್ಭದಲ್ಲಿ ದುರಂತದಿಂದ ನೀರುಪಾಲಾಗಿದ್ದ ಜಗನ್ನಾಥ ಅವರ ಮನೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿದರು. ಮಾಜಿ ಶಾಸಕಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಜಗನ್ನಾಥ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಪ್ರಮುಖರಾದ ಭಾಸ್ಕರ ನಾರ್ವೆಕರ್, ನಾಗರಾಜ್ ನಾಯಕ, ಜಗದೀಶ್ ನಾಯಕ್ ಮೊಗಟಾ, ಸಂಜಯ್ ನಾಯ್ಕ ಪರ್ಭತ ನಾಯ್ಕ, ನಿಲೇಶ ನಾಯ್ಕ, ಗಣೇಶ ನಾಯ್ಕ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ