ಮಾರಕ ಡೆಂಘೀ ಭಯವಿರಲಿ, ಇಲ್ಲಿ ಸ್ಚಚ್ಛತೆಯೇ ಮರೀಚಿಕೆ!

KannadaprabhaNewsNetwork |  
Published : Jul 28, 2024, 02:13 AM IST
ರಸ್ತೆ ಮೇಲೆ ಹರಿಯುತ್ತಿರುವ ಒಳಚರಂಡಿ ತ್ಯಾಜ್ಯ . | Kannada Prabha

ಸಾರಾಂಶ

ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರರವರ ಸ್ವಕ್ಷೇತ್ರ ಎಂಬ ಹೆಗ್ಗಳಿಕೆಯ ಶಿಕಾರಿಪುರ ಪಟ್ಟಣದ ದೇವರಾಜ್ ಅರಸ್ ನಗರದಲ್ಲಿ ನಿತ್ಯ ಒಳಚರಂಡಿಯ ಕಲ್ಮಶಯುಕ್ತ ಎಲ್ಲ ತ್ಯಾಜ್ಯ ರಸ್ತೆ ಮೇಲೆ ಹರಿಯುತ್ತಿದ್ದು, ಸ್ವಚ್ಛತೆ ಮರೀಚಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಎಲ್ಲೆಡೆ ಡೆಂಘೀ, ಮಲೇರಿಯಾದಿಂದ ಜನ ಸಮುದಾಯ ತತ್ತರಿಸುತ್ತಿದ್ದು, ಮಾರಣಾಂತಿಕ ಕಾಯಿಲೆಯನ್ನು ಹತೋಟಿಗೆ ತರುವಲ್ಲಿ ಆರೋಗ್ಯ ಇಲಾಖೆ ಇನ್ನಿಲ್ಲದ ಕಸರತ್ತು ನಡೆಸುತ್ತಿರುವಾಗಲೇ ಪಟ್ಟಣದ ದೇವರಾಜ್ ಅರಸ್ ನಗರದಲ್ಲಿ ಮಾತ್ರ ಸ್ವಚ್ಛತೆ ಮರೀಚಿಕೆಯಾಗಿದೆ.

ಬಡಾವಣೆಯಲ್ಲಿ ಕಳೆದ ತಿಂಗಳ ಅವಧಿಯಿಂದ ನಿತ್ಯ ಒಳಚರಂಡಿಯ ಕಲ್ಮಶಯುಕ್ತ ಎಲ್ಲ ತ್ಯಾಜ್ಯ ರಸ್ತೆ ಮೇಲೆ ಹರಿಯುತ್ತಿದ್ದು, ಸ್ವಚ್ಛತೆಯ ಜವಾಬ್ದಾರಿ ಹೊತ್ತಿರುವ ಪುರಸಭೆಯ ಅಧಿಕಾರಿಗಳು ಮಾತ್ರ ಇತ್ತ ಕಡೆ ಸುಳಿಯದೆ, ಮಾರಕ ಕಾಯಿಲೆ ಹರಡಲು ಪರೋಕ್ಷವಾಗಿ ಸಹಕರಿಸುತ್ತಿರುವಂತಿದ್ದು, ಜನರ ಹಿಡಿಶಾಪಕ್ಕೆ ಗುರಿ ಯಾಗಿದ್ದಾರೆ.

ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರರವರ ಸ್ವಕ್ಷೇತ್ರ ಎಂಬ ಹೆಗ್ಗಳಿಕೆಯ ಶಿಕಾರಿಪುರ ಪಟ್ಟಣದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿ ಯಲ್ಲಿ ಕಾಂಕ್ರೀಟ್ ರಸ್ತೆ, ವಿದ್ಯುತ್, ಕುಡಿಯಲು ನೀರು, ಒಳಚರಂಡಿ ಸಹಿತ ಸಕಲ ಮೂಲ ಸೌಲಭ್ಯವನ್ನು ಕಲ್ಪಿಸಿದ್ದು, ಅಧಿಕಾರಿ ವರ್ಗದ ತಾತ್ಸರ ಮನೋಭಾವ ದಿಂದ, ನಿರ್ವಹಣೆ ವ್ಯವಸ್ಥೆ ಲೋಪದಿಂದ ಸಹಸ್ರಾರು ಜನತೆ ವಾಸವಾಗಿರುವ ದೇವರಾಜ್ ಅರಸ್ ನಗರದಲ್ಲಿನ ಮಸೀದಿ ಸಮೀಪದಲ್ಲಿ ಕಳೆದ ತಿಂಗಳಿಂದ ಒಳಚರಂಡಿಯ ಕಲ್ಮಶಯುಕ್ತ ತ್ಯಾಜ್ಯವು ರಸ್ತೆ ಮೇಲೆ ನಿರಂತರವಾಗಿ ಹರಿಯುತ್ತಿದೆ. ನಿತ್ಯ ಶಾಲಾ ಕಾಲೇಜಿಗೆ ತೆರಳುವ ಮಕ್ಕಳ ಸಹಿತ ಪ್ರತಿಯೊಬ್ಬರೂ ಮೂಗು ಮುಚ್ಚಿಕೊಂಡು, ತುಳಿದುಕೊಂಡೆ ಹೋಗುವ ದುಸ್ಥಿತಿ ನಿರ್ಮಾಣವಾಗಿದ್ದರೂ ಸ್ವಚ್ಛತೆಯ ಹೊಣೆಗಾರಿಕೆಯನ್ನು ನಿರ್ವಹಿಸಲಾಗದ ಪುರಸಭೆ ಅಧಿಕಾರಿಗಳಮಾತ್ರ ಇತ್ತ ಮುಖ ಮಾಡಿಲ್ಲ.

ಈ ಕೂಡಲೇ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದ ಅಧಿಕಾರಿಗಳು ತುರ್ತು ಗಮನಹರಿಸುವಲ್ಲಿ ನಿರ್ಲಕ್ಷಿಸಿದಲ್ಲಿ ಮಾರಕ ಕಾಯಿಲೆಗಳು ಉಲ್ಭಣವಾಗಲು ದೊಡ್ಡ ಕೊಡುಗೆಯನ್ನು ನೀಡಲು ಸಿದ್ಧವಾಗಬೇಕಾಗಿದೆ.

ಇನ್ನು, ಈಗಾಗಲೇ ಹಲವು ಬಾರಿ ಪುರಸಭೆ ಮುಖ್ಯಾಧಿಕಾರಿಗಳ ಗಮನ ಸೆಳೆಯಲಾಗಿದ್ದು, ಕೆಲ ಸಿಬ್ಬಂದಿ ಕಾಟಾಚಾರಕ್ಕೆ ಧಾವಿಸಿ ಸಮಸ್ಯೆ ಪರಿಹರಿಸದೆ ವಾಪಾಸಾಗಿದ್ದಾರೆ. ಸಂಸದರು, ಶಾಸಕರು ಇತ್ತ ಕಡೆ ಗಮನಹರಿಸಿ ಸ್ಥಳೀಯರನ್ನು ಪಾರು ಮಾಡಬೇಕಾಗಿದೆ ಎನ್ನುತ್ತಾರೆ ಸ್ಥಳೀಯ ಪುರಸಭಾ ಸದಸ್ಯ ಪ್ರಶಾಂತ ಜೀನಳ್ಳಿ.

ಹಲವು ಬಾರಿ ದೂರನಿತ್ತರೂ ಅಧಿಕಾರಿಗಳು ಮಾತ್ರ ದೂರ!

ಇನ್ನು, ಈ ಭಾಗದ ಒಳಚರಂಡಿ ಕಾಮಗಾರಿಯನ್ನು ನಿರ್ವಹಿಸಿದ ಜಿಪಿಆರ್ ಕಂಪನಿಯಿಂದ ಪುರಸಭೆಗೆ ಹಸ್ತಾಂತರವಾಗಿಲ್ಲ. ಸಂಬಂಧಿಸಿದ ಕಂಪನಿ ಸಿಬ್ಬಂದಿ ಪರಿಶೀಲಿಸಿ ಕ್ರಮ ಕೈಗೊಳ್ಳದೆ ಜವಾಬ್ದಾರಿ ವಹಿಸಿಕೊಂಡ ಪುರಸಭೆ ಅಧಿಕಾರಿಗಳೂ ಇತ್ತ ತಲೆಹಾಕದೆ ಸ್ಥಳೀಯರ ಗೋಳು ಹೇಳತೀರದಾಗಿದೆ. ಕೆಲ ಮನೆಗೆ ನುಗ್ಗುತ್ತಿದ್ದ ತ್ಯಾಜ್ಯದಿಂದ ಕಂಗೆಟ್ಟ ನಿವಾಸಿಗಳ ದುಸ್ಥಿತಿ ಬಗ್ಗೆ ಕನಿಷ್ಠ ಮಾನವೀಯತೆ ನೆಲೆಗಟ್ಟಿನಲ್ಲಿ ಪರಿಹಾರ ಕಲ್ಪಿಸಬೇಕಾದ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಮಾತ್ರ ಅಕ್ಷ್ಯಮ್ಯವಾಗಿದ್ದು, ಈ ಹಿಂದೆ ಈ ಬಗ್ಗೆ ದೂರನಿತ್ತರೂ ಅಧಿಕಾರಿಗಳು ಮಾತ್ರ ದೂರವೇ ಉಳಿದಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ