ಕನ್ನಡಪ್ರಭ ವಾರ್ತೆ ಉಡುಪಿಕಾಶ್ಮೀರದ ಪಹಲ್ಗಾಮ್‌ಗೆ ತೆರಳಿದ್ದ ಪ್ರವಾಸಿಗರಲ್ಲಿ ಹಿಂದುಗಳನ್ನು ಗುರುತಿಸಿ ಅಮಾನುಷವಾಗಿ ಹತ್ಯೆ ಮಾಡಿ ಮಾಡಿದ ಭಯೋತ್ಪಾದಕರ ಕೃತ್ಯಕ್ಕೆ, ಪ್ರತಿಕಾರವಾಗಿ ಭಾರತೀಯ ಸೇನೆ ‘ಆಪರೇಶನ್ ಸಿಂದೂರ್’ ನಡೆಸಿ ಉಗ್ರರ ನೆಲೆಗಳನ್ನು ಹುಡಿಗಟ್ಟಿದ ಬಗ್ಗೆ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಉಡುಪಿಯಲ್ಲಿ ಸಂಭ್ರಮಾಚರಿಸಿತು.
ನಗರದ ಚಿತ್ತರಂಜನ್ ಸರ್ಕಲ್ ನಿಂದ 20 ಅಡಿ ಉದ್ದ 14 ಅಡಿ ಅಗಲದ ಬೃಹತ್ ತ್ರಿವರ್ಣ ಧ್ವಜ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ಮಹಿಳೆಯರು ತ್ರಿವರ್ಣ ಧ್ವಜಕ್ಕೆ ಪುಷ್ಪಾರ್ಚನೆ ನಡೆಸಿ ತಮ್ಮ ಸಂತಸ ವ್ಯಕ್ತಪಡಿಸಿದರು. ನಿತ್ಯಾನಂದ ಒಳಕಾಡು ಮೆರವಣಿಗೆಯುದ್ದಕ್ಕೂ ತಮಟೆ ಬಾರಿಸಿ ಸಂಭ್ರಮ ಹೆಚ್ಚಿಸಿದರು.ಈ ಸಂದರ್ಭ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಹಿರಿಯರೊಬ್ಬರು, ಧರ್ಮ ಕೇಳಿ ಹಿಂದುಗಳನ್ನು ಕೊಂದ ಉಗ್ರರ ಮೇಲೆ ಕೇಂದ್ರ ಸರ್ಕಾರದ ದಿಟ್ಟ ಕ್ರಮದಿಂದ ಸಂತೋಷವಾಗಿದೆ, ಅಮಾಯಕ ಹೆಣ್ಣು ಮಕ್ಕಳನ್ನು ವಿಧವೆಯನ್ನಾಗಿ ಮಾಡಿ, ಜೀವಮಾನವಿಡೀ ಕೊರಗುವಂತೆ ಮಾಡಿದ ದುರಳನ್ನು ಹೊಡೆದುರುಳಿಸಿದ ಸೇನೆಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಮಹಿಳೆಯೊಬ್ಬರು ಭಾವುಕರಾಗಿ ನುಡಿದರು. ಅಗತ್ಯವಿದ್ದಲ್ಲಿ ದೇಶದ ಜೊತೆ ನಿಲ್ಲಲು ಸದಾ ಕಾಲ ಸಿದ್ಧವಿದ್ದೇವೆ ಎಂದು ಯುವಕರು ಹೆಮ್ಮೆಯಿಂದ ಹೇಳಿದರು.ಈ ವೇಳೆ ಮಿತ್ರ ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳು, ಸಮಿತಿಯ ಪ್ರಮುಖರಾದ ವಿನಾಯಕ್ ಹೆಗ್ಡೆ, ಸುಧಾಕರ್, ರಾಜೇಶ್ ಶೇಟ್, ತಾರಾನಾಥ್ ಮೇಸ್ತ ಮೊದಲಾದವರು ಉಪಸ್ಥಿತರಿದ್ದರು. ನಂತರ ಸಾರ್ವಜನಿಕರಿಗೆ ಸಹಿತಿಂಡಿ ಹಂಚಲಾಯಿತು..........................
ಸೇನೆಯನ್ನು ಪ್ರಶ್ನಿಸುವಂತಿಲ್ಲ...ಈ ಸಂದರ್ಭ ಮಾತನಾಡಿದ ನಿತ್ಯಾನಂದ ಒಳಕಾಡು,
ಭಾರತೀಯ ಸೇನೆಯ ಪರಾಕ್ರಮವನ್ನು ಯಾರು ಪ್ರಶ್ನಿಸುವಂತಿಲ್ಲ. ಈ ರಾಷ್ಟ್ರದ ಮೇಲೆ ದಂಡೆತ್ತಿ ಬರುವವರಿಗೆ ಉತ್ತರ ನೀಡಲು ನಾವು ಸಿದ್ದ ಎಂಬ ಸಂದೇಶ ರವಾನಿಸಲಾಗಿದೆ. ಆಪರೇಶನ್ ಸಿಂದೂರ್ ಮೂಲಕ ಭಯೋತ್ಪಾದಕರಿಗೆ ಖಡಕ್ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ನೀಡಿದೆ. ಸೇನೆಯೊಂದಿಗೆ ಭಾರತೀಯರಾದ ನಾವೆಲ್ಲರೂ ನಿಲ್ಲುತ್ತೇವೆ ಎಂದರು.