ಹುಬ್ಬಳ್ಳಿ: ಭಾರತ ಕಲೆಯನ್ನು ಪೋಷಿಸುವ ರಾಷ್ಟ್ರವಾಗಿದೆ. ವಿಶ್ವಕ್ಕೆ ಸಂಸ್ಕೃತಿ ಪಾಠ ಹೇಳಿಕೊಟ್ಟ ದೇಶ ನಮ್ಮದು. ನಾವು ಪ್ರೀತಿ, ಸಹನೆ, ವಾತ್ಸಲ್ಯ ಕರುಣೆಯುಳ್ಳವರು. ಶಾಂತಿಪ್ರಿಯರು, ಹಾಗಂತ ಕೆಣಕಿದರೆ ಸುಮ್ಮನೆ ಬಿಡುವುದಿಲ್ಲ ಎನ್ನುವುದಕ್ಕೆ ಆಪರೇಶನ್ ಸಿಂದೂರ ಸಾಕ್ಷಿಯಾಗಿದೆ ಎಂದು ಅಖಿಲ ಭಾರತ ಆಕಾಶವಾಣಿಯ ಎ ಗ್ರೇಡ್ ನಾಟಕ ಕಲಾವಿದ ಡಾ. ಶಶಿಧರ ನರೇಂದ್ರ ಹೇಳಿದರು.
ಸೋಫಿಯಾ ಖುರೇಷಿ, ವ್ಯೂಮಿಕಾ, ವೈಭವ ಸೂರ್ಯವಂಶಿ, ಡಿ. ಗುಕೇಶ ಅವರ ಸಾಧನೆಗೆ ಇಡೀ ವಿಶ್ವವೇ ಶ್ಲಾಘಿಸುತ್ತಿದೆ. ಮನಸ್ಸು ಮಾಡಿದರೆ ಯಾವುದೇ ಸಾಧನೆ ಅಸಾಧ್ಯವಲ್ಲ. ನಮ್ಮ ಬದುಕನ್ನು ಸುಸಂಸ್ಕೃತ ವಾತಾವರಣದಲ್ಲಿ ನಿರ್ಮಾಣ ಮಾಡಿಕೊಳ್ಳಬೇಕು. ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು. ಇಂತಹ ಸಂಸ್ಕಾರ ಕಲಿಯಲು ಯುವಜನೋತ್ಸವ ಸಹಾಯಕವಾಗಲಿದೆ. ಸಾಂಸ್ಕೃತಿಕತೆಯಲ್ಲಿ ಭಾರತ ವಿಶ್ವದಲ್ಲೇ ಅಗ್ರಗಣ್ಯ ಸ್ಥಾನದಲ್ಲಿದೆ ಎಂದರು.
ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಸಹನೆ, ತಾಳ್ಮೆಯನ್ನು ಮನೆಯಲ್ಲಿ ಹೇಳಿಕೊಡಬೇಕು. ಸಂಸ್ಕಾರ ಕಲಿಸದೇ ಹೋದರೆ ದುರ್ಘಟನೆಗಳು ಸಂಭವಿಸುತ್ತವೆ. ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ದೊರೆಯುತ್ತವೆ. ಅವುಗಳನ್ನು ರಿಯಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರುಅಧ್ಯಕ್ಷತೆ ವಹಿಸಿದ್ದ ಕಾನೂನು ವಿವಿ ಕುಲಪತಿ ಡಾ. ಸಿ. ಬಸವರಾಜು ಮಾತನಾಡಿ, ಇಂದು ಸಮಾಜ ಒಡೆದು ಹೋಗುತ್ತಿದೆ. ಉತ್ತಮ ಸಮಾಜ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಭಾರತೀಯ ಸಂಸ್ಕೃತಿಯನ್ನು ಬೇರೆ ಬೇರೆ ರಾಷ್ಟ್ರಗಳು ಪಾಲಿಸುತ್ತಿವೆ. ಭರತನಾಟ್ಯ, ಸುಗಮ ಸಂಗೀತ, ನಾಟಕಗಳನ್ನು ಬೇರೆ ರಾಷ್ಟ್ರಗಳು ಅಳವಡಿಸಿಕೊಂಡಿವೆ. ಭಾರತದ ಕಲೆ ವಿಶ್ವದೆಲ್ಲೆಡೆ ವ್ಯಾಪಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿ ಆಡಳಿತಾಂಗ ಕುಲಸಚಿವೆ ಗೀತಾ ಈ. ಕೌಲಗಿ, ಹಣಕಾಸು ಅಧಿಕಾರಿ ಸಂಜೀವಕುಮಾರ ಸಿಂಗ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಗಿರೀಶ್ ಕೆ.ಸಿ, ಪ್ರಾಧ್ಯಾಪಕರು, ಸಿಬ್ಬಂದಿ, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಚನ್ನಮ್ಮ ಮಠದ ನಿರೂಪಿಸಿದರು. ಪ್ರಮತಿ ಪ್ರಾರ್ಥಿಸಿದರು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ರೀಮಾ ಎಂ. ಸ್ವಾಗತಿಸಿದರು. ಭೂಮಿಕಾ ತಂಡಗಳನ್ನು ಪರಿಚಯಿಸಿದರು. ಹರ್ಷಿತಾ ವಂದಿಸಿದರು.