ಕ್ಷಿಪಣಿಗಳ ದಾಳಿಯ ಮಾಹಿತಿ ನೀಡುವ ರಾಡರ್ ವ್ಯವಸ್ಥೆಯನ್ನೇ ಪುಡಿಪುಡಿ ಮಾಡಿದ ಸೈನ್ಯದ ಧೈರ್ಯವನ್ನು ದೇಶದ 140 ಕೋಟಿ ಪ್ರಜೆಗಳು ಹೆಮ್ಮೆಪಡುವಂತಾಗಿದೆ.
ಚಿಕ್ಕಬಳ್ಳಾಪುರ : ಪಹಲ್ಗಾಮ್ ನಲ್ಲಿ ಹಿಂದೂಗಳನ್ನೆ ಹುಡುಕಿ ಕೊಂದು ಅವರ ಪತ್ನಿಯರನ್ನ ವಿಧವೆಯರನ್ನಾಗಿ ಮಾಡಿದ ಕಾರಣ ಹೆಣ್ಣು ಮಕ್ಕಳ ಹಣೆ ಬೊಟ್ಟಿನ ಸಿಂದೂರ ಭಾಗ್ಯ ಕಳೆದಿದ್ದಕ್ಕಾಗಿ ಅದೆ ಹೆಸರಿನಲ್ಲಿ ಪ್ರಧಾನಿ ಮೋದಿಯವರು ಆಪರೇಶನ್ ಸಿಂದೂರ ಮೂಲಕ ಉಗ್ರರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಸೇನೆಗೆ ಪರಮಾಧಿಕಾರ ನೀಡಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.
ನಗರ ಹೊರವಲಯ ಎಸ್‌ಜೆಸಿಐಟಿ ಆವರಣದ ಬಿಜಿಎಸ್ ಆಡಿಟೋರಿಯಂನಲ್ಲಿ ಶನಿವಾರ ನಡೆದ ಬಿಜಿಎಸ್ ಕಾಲೇಜುಗಳ ಪದವಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತದ ಕ್ಷಿಪಣಿಗಳು ಪಾಕಿಸ್ತಾನದ ಒಳಗ್ಗೆ ನುಗ್ಗಿ ಕರಾಚಿ, ರಾವಲ್ಪಿಂಡಿ ಬಲೂಚಿ ನಗರದಗಳ ಮೇಲೆ ದಾಳಿ ಮಾಡಿ ಉಗ್ರರ ತಾಣಗಳನ್ನ ದ್ವಂಸ ಮಾಡಿವೆ ಎಂದರು.
ದಾಳಿಗೆ ಕಾಂಗ್ರೆಸ್ ಬೆಂಬಲ
ಕ್ಷಿಪಣಿಗಳ ದಾಳಿಯ ಮಾಹಿತಿ ನೀಡುವ ರಾಡರ್ ವ್ಯವಸ್ಥೆಯನ್ನೇ ಪುಡಿಪುಡಿ ಮಾಡಿದ ಸೈನ್ಯದ ಧೈರ್ಯವನ್ನು ದೇಶದ 140 ಕೋಟಿ ಪ್ರಜೆಗಳು ಹೆಮ್ಮೆಪಡುವಂತಾಗಿದೆ ಎಂದರು. ಪಾಕಿಸ್ತಾನದ ಉಗ್ರರ ಮೇಲೆ ಭಾರತ ನಡೆಸುತ್ತಿರುವ ಸಿಂದೂರ ಆಪರೇಶನ್ ಬಗ್ಗೆ ಪ್ರಶಂಶೆ ವ್ಯಕ್ತಪಡಿಸಿ, ಉಗ್ರರನ್ನ ಸದೆಬಡಿಯಲು ದೇಶ ಎಲ್ಲರೂ ಒಂದಾಗಬೇಕು. ರಾಜಕೀಯೇತರ ಬೆಂಬಲವನ್ನ ಸೂಚಿಸಬೇಕು. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವೂ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದು ಶ್ಲಾಘಿಸಿದರು.
ಮೊನ್ನೆ ಬೆಂಗಳೂರಿನ ಹಲಸೂರಲ್ಲಿ ನಡೆದ ಮಾಕ್ ಡ್ರಿಲ್ ಲ್ಲಿ ಗೃಹಮಂತ್ರಿಗಳು ಭಾಗವಹಿಸಿ ಬೆಂಬಲ ಸೂಚಿಸಿದರು. ಭಾರತೀಯರನ್ನ ಕಾಲುಕೆರೆದು ಜಗಳಕ್ಕೆ ನಿಂತಿರುವ ಪಾಕಿಸ್ತಾನಿಗಳಿಗೆ ತಕ್ಕ ಶಾಸ್ತಿ ಭಾರತೀಯ ಸೇನೆ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ದಿಟ್ಟವಾಗಿ ನಿಂತು ಸಮರವನ್ನ ಮುನ್ನಡೆಸುತಿದ್ದಾರೆ. ಮುಂದೆ ಭಾರತದ ಮೇಲೆ ಯುದ್ದ ಮಾಡಬೇಕೆಂಬ ಆಲೋಚನೆಯನ್ನೂ ಮಾಡಬಾರದು. ಆ ರೀತಿ ಪಾಕ್‌ಗೆ ಭಾರತೀಯ ಸೇನೆ ಪಾಠಕಲಿಸುತ್ತಿದೆ ಎಂದರು.
ಹುತಾತ್ಮ ಯೋಧಗೆ ಶ್ರದ್ಧಾಂಜಲಿ
ಪಾಕಿಸ್ತಾನ- ಪಂಜಾಬ್ ಗಡಿಯಲ್ಲಿ ಬುಧವಾರ ರಾತ್ರಿ ನಡೆದ ದಾಳಿಯ ಸಂದರ್ಭದಲ್ಲಿ ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗೋರಂಟ್ಲ ತಾಲೂಕಿನ ಕಲ್ಲಿಕೊಂಡ ಗ್ರಾಮದ ಯೋಧ ಮುರಳಿ ನಾಯಕ್ ಪಾಕಿಗಳ ಗುಂಡಿಗೆ ಬಲಿಯಾಗಿ ಹುತಾತ್ಮರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಪೋಷಕರಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಕಂಬನಿ ಮಿಡಿದರು.