ಆಪರೇಷನ್‌ ಸಿಂಧೂರ್‌ನಿಂದ ದೇಶದ ಸೈನ್ಯದ ಬಗ್ಗೆ ಹೆಮ್ಮೆ: ರಮೇಶ್ ಕಾಂಚನ್‌

KannadaprabhaNewsNetwork | Published : May 8, 2025 12:33 AM

ಪಾಕ್ ಉಗ್ರರ ನೆಲದ ಮೇಲೆ ಭಾರತೀಯ ಸೈನ್ಯದ ಕಾರ್ಯಾಚರಣೆ ಪ್ರತಿಯೊಬ್ಬರು ಹೆಮ್ಮೆಪಡುವಂತಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಅಮಾಯಕ ಭಾರತೀಯ ಪ್ರವಾಸಿಗರ ಹತ್ಯಾಕಾಂಡ ನಡೆಸಿರುವ ಪಾಕಿಸ್ತಾನ ಪ್ರಯೋಜಿತ ಉಗ್ರರಿಗೆ ಹಾಗೂ ಬೆಂಬಲಿಗರಿಗೆ ಭಾರತದ ಸೈನ್ಯವು ಮಂಗಳವಾರ ತಡ ರಾತ್ರಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸುವ ಮೂಲಕ ತಕ್ಕ ಉತ್ತರ ನೀಡಿದ್ದು ಭಾರತೀಯ ಸೈನ್ಯದ ಕಾರ್ಯಾಚರಣೆ ಪ್ರತಿಯೊಬ್ಬರು ಹೆಮ್ಮೆಪಡುವಂತಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಪಾಕ್ ನ ಒಟ್ಟು 9 ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿ ನಡೆಸಿರುವ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಿಂದಾಗಿ ಪಹಲ್ಗಾಮ್ ದಾಳಿಯಲ್ಲಿ ಹತ್ಯೆಯಾದವರ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಉಗ್ರರ ವಿರುದ್ದ ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ಕಾರ್ಯಾಚರಣೆಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ಸೂಚಿಸುವುದರೊಂದಿಗೆ ಭಾರತೀಯರೆಲ್ಲರೂ ಒಂದು ಎಂಬ ಸಂದೇಶವನ್ನು ಜಗತ್ತಿಗೆ ಹಾಗೂ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ತೋರಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಸೈನ್ಯದ ಕಾರ್ಯಾಚರಣೆ ಬಗ್ಗೆ ನಮಗೆ ಯಾವಾಗಲೂ ಹೆಮ್ಮೆ ಇದೆ. ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ಜವಾಹರ್‌ಲಾಲ್ ನೆಹರು ಅವರ ಅವಧಿಯಲ್ಲಿ ಪಾಕಿಸ್ತಾನ ಮತ್ತು ಚೀನಾ ವಿರುದ್ಧ ನಡೆದ ಯುದ್ದದಲ್ಲೂ ಕೂಡ ನಮ್ಮ ಸೈನ್ಯವು ಹೀಗೆ ಕಾರ್ಯಾಚರಣೆ ನಡೆಸಿದೆ. ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದೊಂದಿಗಿದೆ ಎಂದು ಅವರು ನುಡಿದಿದ್ದಾರೆ.ಆಪರೇಶನ್ ಸಿಂಧೂರ ಕಾರ್ಯಾಚರಣೆಯು ನಮ್ಮ ದೇಶದ ಮಿಲಿಟರಿಯ ಶಕ್ತಿಯನ್ನು ಮಾತ್ರವಲ್ಲದೆ ನಮ್ಮ ನೈತಿಕ ಸಂಯಮವನ್ನೂ ಪ್ರತಿಬಿಂಬಿಸುತ್ತದೆ. ಭಾರತೀಯ ಪಡೆಗಳು ತಮ್ಮ ಶೌರ್ಯ ಮತ್ತು ಧೈರ್ಯವನ್ನು ಪ್ರದರ್ಶಿಸುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿವೆ. ಭಾರತೀಯ ಸಶಸ್ತ್ರ ಪಡೆಗಳು ನಿಖರತೆ, ಜಾಗರೂಕತೆ ಮತ್ತು ಸೂಕ್ಷ್ಮತೆಯಿಂದ ಕಾರ್ಯ ನಿರ್ವಹಿಸಿವೆ. ನಮ್ಮ ಸೈನ್ಯದ ಸೈನಿಕರು ಮತ್ತು ಅಧಿಕಾರಿಗಳು ನಿಜಕ್ಕೂ ಅಬಿನಂದರ್ಹಾರು ಎಂದು ರಮೇಶ್‌ ಕಾಂಚನ್ ಪ್ರಕಟಣೆಯಲ್ಲಿ ಹೇಳಿದ್ದಾರೆ.