ಚನ್ನಪಟ್ಟಣದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆಗೆ ಚಾಲನೆ

KannadaprabhaNewsNetwork |  
Published : Mar 01, 2026, 02:00 AM IST
ಪೊಟೋ೨೮ಸಿಪಿಟಿ೧: ಪುಂಡಾನೆ ಸೆರೆ ಕಾರ್ಯಾಚರಣೆಗೆ ಬಂದಿರುವ ಆನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ. | Kannada Prabha

ಸಾರಾಂಶ

ಡಿಎಫ್‌ಒ ರಾಮಕೃಷ್ಣಪ್ಪ ಹಾಗೂ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ಆರಂಭಗೊಂಡಿದ್ದು, ಮೂರು ಜನ ವೈದ್ಯರು, ಆರು ಮಾವುತರು, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಸುಮಾರು ೮೦ಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ ಜಿಲ್ಲೆಯ ತೆಂಗಿನಕಲ್ಲು, ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ದಾಂಗುಡಿ ಇಡುತ್ತಿರುವ ಒಂದು ಮಖ್ನಾ ಮತ್ತು ಒಂಟಿ ಸಲಗವನ್ನು ಸೆರೆ ಹಿಡಿಯಲು ಅನುಮತಿ ದೊರೆತಿದ್ದು, ಆರು ಪಳಗಿದ ಆನೆಗಳೊಂದಿಗೆ ಪುಂಡಾನೆಗಳ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.

ಡಿಎಫ್‌ಒ ರಾಮಕೃಷ್ಣಪ್ಪ ಹಾಗೂ ವಲಯ ಅರಣ್ಯಾಧಿಕಾರಿ ಮಲ್ಲೇಶ್ ನೇತೃತ್ವದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ಆರಂಭಗೊಂಡಿದ್ದು, ಶನಿವಾರ ಬೆಳಗ್ಗೆ ಪಳಗಿದ ಆನೆಗಳಿಗೆ ಪೂಜೆ ಸಲ್ಲಿಸಿದ ನಂತರ ಕಾರ್ಯಾಚರಣೆ ಆರಂಭಿಸಲಾಗಿದೆ.

ಆರು ಪಳಗಿದ ಆನೆಗಳು:

ಈ ಬಾರಿಯ ಪುಂಡಾನೆ ಸೆರೆ ಕಾರ್ಯಾಚರಣೆಗೆ ದುಬಾರೆ ಆನೆ ಶಿಬಿರದಿಂದ ಆರು ಸಾಕಾನೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪಳಗಿದ ಆನೆಗಳಾದ ಸುಗ್ರೀವ, ಈಶ್ವರ, ಕಂಜನ್, ಹರ್ಷ, ಧನಂಜಯ ಮತ್ತು ಅಯ್ಯಪ್ಪ ಆನೆಗಳು ಆಗಮಿಸಿದ್ದು, ಮೊದಲ ದಿನ ಈಶ್ವರ ಮತ್ತು ಸುಗ್ರೀವ ಆನೆಗಳ ಮುಂದಾಳತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

೮೦ಕ್ಕೂ ಹೆಚ್ಚು ಸಿಬ್ಬಂದಿ ಭಾಗಿ:

ಡಿಎಫ್‌ಒ ರಾಮಕೃಷ್ಣಪ್ಪ ಹಾಗೂ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ಆರಂಭಗೊಂಡಿದ್ದು, ಮೂರು ಜನ ವೈದ್ಯರು, ಆರು ಮಾವುತರು, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಸುಮಾರು ೮೦ಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ನಾಲ್ಕನೇ ಕಾರ್ಯಾಚರಣೆ:

ಕಳೆದ ನಾಲ್ಕು ವರ್ಷದಲ್ಲಿ ಪುಂಡಾನೆಗಳನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಲು ಮೂರು ಬಾರಿ ಕಾರ್ಯಾಚರಣೆ ನಡೆಸಲಾಗಿದ್ದು, ಐದು ಆನೆಗಳನ್ನು ಸೆರೆ ಹಿಡಿಯಲಾಗಿದೆ. ಇದು ನಾಲ್ಕನೇ ಕಾರ್ಯಾಚರಣೆಯಾಗಿದೆ. ಪುಂಡಾನೆಗಳ ಉಪಟಳ ವಿಪರೀತವಾದ ಹಿನ್ನೆಲೆಯಲ್ಲಿ ೨೦೨೨ರ ಆಗಸ್ಟ್‌ನಲ್ಲಿ ಕಾರ್ಯಾಚರಣೆ ನಡೆಸಿ ಎರಡು ಪುಂಡಾನೆಗಳನ್ನು ಸೆರೆ ಹಿಡಿಯಲಾಗಿತ್ತು. ಅನಂತರ ೨೦೨೩ರ ಜನವರಿಯಲ್ಲಿ ಮತ್ತೆ ಕಾರ್ಯಾಚರಣೆ ನಡೆಸಿ ಒಂದು ಪುಂಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಇನ್ನು ೨೦೨೪ರ ಡಿಸೆಂಬರ್‌ನಲ್ಲಿ ಕಾರ್ಯಾಚರಣೆ ನಡೆಸಿ ಎರಡು ಪುಂಡಾನೆಗಳನ್ನು ಸೆರೆ ಹಿಡಿಯಲಾಗಿತ್ತು.

ಪ್ರತಿಭಟನೆ ನಡೆಸಿದ್ದ ರೈತರು:

ತಾಲೂಕಿನಲ್ಲಿ ಪುಂಡಾನೆಗಳ ಉಪಟಳ ವಿಪರೀತವಾದ ಹಿನ್ನೆಲೆ ಕೆಲ ದಿನಗಳ ಹಿಂದೆ ತಾಲೂಕಿನ ಬಿ.ವಿ.ಹಳ್ಳಿ ಸಮೀಪ ರೈತರು ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಚನ್ನಪಟ್ಟಣ- ಕಬ್ಬಾಳು ರಸ್ತೆಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಫೆ.೬ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ರೈತರ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ರೈತರು ಆಗ್ರಹಿಸಿದ್ದರು.

ಮೊದಲ ದಿನ ಸಿಗದ ಯಶಸ್ಸು:

ಇನ್ನು ಮೊದಲ ದಿನದ ಪುಂಡಾನೆ ಸೆರೆ ಕಾರ್ಯಾಚರಣೆಗೆ ಯಶಸ್ಸು ಸಿಕ್ಕಿಲ್ಲ. ಪುಂಡಾನೆಗಳ ಸೆರೆ ಕಾರ್ಯಾಚರಣೆಗೆ ತೆರಳಿದ್ದ ಆನೆಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮೊದಲ ದಿನ ಬರಿಗೈಯಲ್ಲಿ ಆಗಮಿಸಿದ್ದಾರೆ. ಮೊದಲ ದಿನ ತಾಲೂಕಿನ ಬಿ.ವಿ.ಹಳ್ಳಿ ವ್ಯಾಪ್ತಿಯಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ನಡೆಸಲಾಯಿತು. ಆದರೆ, ಹನ್ನೊಂದು ಆನೆಗಳು ಗುಂಪಾಗಿ ಒಂದೆಡೆಯಿಂದ ಇನ್ನೊಂದು ಕಡೆಗೆ ಸಾಗುತ್ತಿದ್ದ ಹಿನ್ನೆಲೆಯಲ್ಲಿ ಪುಂಡಾನೆಯನ್ನು ಸೆರೆಹಿಡಿಯಲು ಆಗಿಲ್ಲ. ಇದರ ಜತೆಗೆ ಸಂಜೆಯಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿ ಆನೆ ಕ್ಯಾಂಪ್‌ಗೆ ಹಿಂದಿರುಗಲಾಗಿದೆ.

ಭಾನುವಾರ ಕಾಡಾನೆಗಳು ಬೀಡುಬಿಟ್ಟಿರುವ ಜಾಗ ಗುರುತಿಸಿದ ನಂತರ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರ್ಮಲಾನಂದನಾಥ ಶ್ರೀಗಳ ಮುತ್ತಿನ ಪಲ್ಲಕ್ಕಿ ಉತ್ಸವ
ಭಾರತೀಯ ವಿಜ್ಞಾನಿಗಳ ಕೊಡುಗೆ ಗೌರವಿಸಿ: ಮಜ್ಜಿಗೆಪುರ ಕೆ.ಶಿವರಾಮು