ಕನ್ನಡಪ್ರಭ ವಾರ್ತೆ ಮಡಿಕೇರಿ
ಕಳೆದ ಕೆಲವು ದಿನಗಳಿಂದ ಇಲ್ಲಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಕಾಫಿ ಫಸಲು ನಾಶಪಡಿಸುವುದರೊಂದಿಗೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಒತ್ತಾಯ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ವಿರಾಜಪೇಟೆ ವಲಯ ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹಾಗೂ ಎಸಿಎಫ್ ಗೋಪಾಲ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶಿವರಾಂ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಪಟಾಕಿ ಸಿಡಿಸಿ ಆನೆಗಳನ್ನು ಅಟ್ಟಿಸಲು ಮುಂದಾದರು. ಈ ವೇಳೆ ಕೆಲ ಆನೆಗಳು ಸಿಬ್ಬಂದಿಗಳ ಮೇಲೆ ದಾಳಿಗೂ ಮುಂದಾದ ಪ್ರಸಂಗ ಕಂಡುಬಂತು.9 ಮರಿ ಸೇರಿದಂತೆ ಸುಮಾರು 30 ಕ್ಕೂ ಅಧಿಕ ಕಾಡಾನೆಗಳನ್ನು ವಾಪಸ್ ಅರಣ್ಯಕ್ಕೆ ಅಟ್ಟಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.