ಕನ್ನಡಪ್ರಭ ವಾರ್ತೆ ಖಾನಾಪುರ
ಸಂರಕ್ಷಿತ ಭೀಮಗಡ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಪರಿಸರ ಸೂಕ್ಷ್ಮ ವಲಯದಲ್ಲಿ ಭಂಡೂರಿ ಹಳ್ಳ ತಿರುವು ಕಾಮಗಾರಿಗಳನ್ನು ಆರಂಭಿಸಿ ಪರಿಸರಕ್ಕೆ ಹಾನಿಯುನ್ನುಂಟು ಮಾಡುವ ಕೆಲಸಕ್ಕೆ ಸರ್ಕಾರ ಕೈಹಾಕಿದೆ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ಮಾನವ ಹಕ್ಕುಗಳ ಹೋರಾಟಗಾರ ದಿಲೀಪ ಕಾಮತ ಕಿಡಿಕಾರಿದರು.ಕರ್ನಾಟಕ ಸರ್ಕಾರ ತಾಲೂಕಿನ ನೇರಸಾ ಗ್ರಾಮದ ಬಳಿ ನೀರಾವರಿ ನಿಗಮದ ಮೂಲಕ ನಡೆಸಲು ಉದ್ದೇಶಿಸಿರುವ ಭಂಡೂರಿ ಹಳ್ಳ ತಿರುವು ಕಾಮಗಾರಿ ವಿರೋಧಿಸಿ ಪಟ್ಟಣದ ಲೋಕಮಾನ್ಯ ಸಭಾಗೃಹದಲ್ಲಿ ಬುಧವಾರ ಜನಾಂದೋಲನ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಈ ಕಾಮಗಾರಿಯಿಂದ ತಾಲೂಕಿನ ಅರಣ್ಯ ಸಂಪತ್ತಿಗೆ ಧಕ್ಕೆ ಉಂಟಾಗುವ ಸಂಭವವಿದೆ. ಇಲ್ಲಿಯ ಜನರ ಪಾಲಿಗೆ ಈ ಯೋಜನೆ ಮಾರಕವಾಗಿದೆ. ಭಂಡೂರಿ ಹಳ್ಳದ ನೀರು ತಾಲೂಕಿನ ಜನರ ಬಳಕೆಗೆ ಅಥವಾ ಉಪಯೋಗಕ್ಕೆ ಸಿಗುವ ಯಾವುದೇ ಪ್ರಸ್ತಾವನೆ ಈ ಯೋಜನೆಯಲ್ಲಿಲ್ಲ. ಕಾರಣ ಇದನ್ನು ಈಗಿನಿಂದಲೇ ತಾಲೂಕಿನ ಪ್ರತಿಯೊಬ್ಬರೂ ಬಲವಾಗಿ ವಿರೋಧಿಸಬೇಕು ಎಂದು ಕರೆ ನೀಡಿದರು.ಉತ್ತರ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚುತ್ತಿದೆ. ಇತ್ತೀದಿನ ವರ್ಷಗಳಲ್ಲಿ ಮಳೆಯ ಅನಿಶ್ಚಿತತೆ ಕಾಡುತ್ತಿದೆ. ಪರಿಸರದ ಅಸಮತೋಲನದಿಂದಾಗಿ ಹವಾಮಾನ ವೈಪರಿತ್ಯ ಉಂಟಾಗುತ್ತಿದೆ. ಇದಕ್ಕೆಲ್ಲ ಕಾರಣ ಅರಣ್ಯ ನಾಶ ಮತ್ತು ಅಭಿವೃದ್ಧಿ ಹೆಸರಲ್ಲಿ ಮರಗಳ ಮಾರಣಹೋಮ. ನಮ್ಮ ಮುಂದಿನ ಪೀಳಿಗೆ ನೆಮ್ಮದಿಯಿಂದ ಉಸಿರಾಡಲು ವನ್ಯಸಂಪತ್ತನ್ನು ಉಳಿಸಿ-ಬೆಳೆಸುವ ಅಗತ್ಯವಿದೆ. ಕಾಡಿದ್ದರೇ ನಾಡು, ಮರಗಳಿದ್ದರೆ ಮಳೆ, ಮಳೆ ಸುರಿದರೆ ಬೆಳೆ ಎಂಬ ಸತ್ಯವನ್ನು ನಾವೆಲ್ಲರೂ ಅರಿಯಬೇಕು. ಇಂದು ಜಲಮೂಲಗಳನ್ನು ಜೀವಂತವಾಗಿಡುವ, ವನ್ಯಸಂಪತ್ತನ್ನು ಸಮೃದ್ಧವಾಗಿರುವಂತೆ ನೋಡಿಕೊಳ್ಳುವ ಮತ್ತು ವನ್ಯಜೀವಿಗಳಿಗೆ ಆಶ್ರಯ ನೀಡುತ್ತಿರುವ ಅರಣ್ಯವನ್ನು ಉಳಿಸುವ ನಿಟ್ಟಿನಲ್ಲಿ ಜನಾಂದೋಲನ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮಾಜಿ ಸಚಿವ ಶಶಿಕಾಂತ ನಾಯಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪಿಪಿಟಿ ಮೂಲಕ ಭಂಡೂರಿ ಹಳ್ಖ ತಿರುವು ಯೋಜನೆ ಬಗ್ಗೆ ಜನತೆಗೆ ಮಾಹಿತಿ ನೀಡಲಾಯಿತು.ಸಭೆಯಲ್ಲಿ ಪರಿಸರ ಹೋರಾಟಗಾರರಾದ ಶಿವಾಜಿ ಕಾಗಣಿಕರ, ಕ್ಯಾಪ್ಟನ್ ನಿತೀನ ಧೋಂಡ, ಶಾರದಾ ಗೋಪಾಲ, ಗೀತಾ ಸಾಹೂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈಶ್ವರ ಘಾಡಿ, ಮಹಾಂತೇಶ ರಾಹೂತ, ಬಿಜೆಪಿ ಮುಖಂಡ ಸಂಜಯ ಕುಬಲ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಮುರಳಿಧರ ಪಾಟೀಲ, ಕರವೇ ಮುಖಂಡ ದಶರಥ ಬನೋಶಿ, ಎಂಇಎಸ್ ಮುಖಂಡ ಅಪ್ಪಾಸಾಹೇಬ ದಳವಿ, ಶಿವಸೇನಾ ಮುಖಂಡ ಕೆ.ಪಿ ಪಾಟೀಲ, ಪತ್ರಕರ್ತ ಜಗದೀಶ ಹೊಸಮನಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಧಾರ್ಮಿಕ ಮುಖಂಡರು, ಪರಿಸರಪ್ರೇಮಿಗಳು ಭಾಗವಹಿಸಿದ್ದರು. ಸುಜೀತ ಮುಳಗುಂದ ಕಾರ್ಯಕ್ರಮ ನಿರ್ವಹಿಸಿದರು. ಸಭೆಯ ಮಾಹಿತಿ ಪಡೆದು ಲೋಕಮಾನ್ಯ ಸಭಾಗೃಹಕ್ಕೆ ಆಗಮಿಸಿದ ತಹಸೀಲ್ದಾರ್ ದುಂಡಪ್ಪ ಕೋಮಾರ ಅವರಿಗೆ ಸಭೆಯಲ್ಲಿದ್ದ ಪ್ರಮುಖರು ಮಹದಾಯಿ ತಿರುವು ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ಕೂಡಲೇ ನಿಲ್ಲಿಸಲು ಆಗ್ರಹಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಇನ್ಸಪೆಕ್ಟರ್ ಲಾಲ್‌ಸಾಬ್ ಗೌಂಡಿ, ಜಗದೀಶ ಹುಬ್ಬಳ್ಳಿ, ಚನ್ನಬಸವ ಬಬಲಿ ಹಾಗೂ ಇತರರಿದ್ದರು. ಅಪರೂಪದ ಅರಣ್ಯ ಉಳಿಸಲು ಪಣ ತೊಡಲು ಮನವಿಭಂಡೂರಿ ಹಳ್ಳ ತಿರುವು ಕಾಮಗಾರಿಯ ಮೂಲಕ ತಾಲೂಕಿನ ಅರಣ್ಯದಲ್ಲಿರುವ ಹಲ್ತಾರಾ, ಕಳಸಾ ಮತ್ತು ಭಂಡೂರಿ ನಾಲೆಗಳ ಮೇಲೆ ಆಣೆಕಟ್ಟು ನಿರ್ಮಿಸಿ ಮಹದಾಯಿ ನದಿಯ ನೀರನ್ನು ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ತಿರುಗಿಸುವ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದ್ದು, ಇದಕ್ಕೆ ಪೂರಕವಾಗಿ ಪ್ರಸ್ತುತ ನೇರಸಾ ಗ್ರಾಮದ ಬಳಿ ಪೈಪ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ. ಭೂಮಿಯಲ್ಲಿ ಪೈಪ್‌ಲೈನ್ ಅಳವಡಿಸಿ ಭಂಡೂರಿ ಹಳ್ಳದ ನೀರನ್ನು ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ಭೂಗತ ಪೈಪ್‌ಗಳ ಮೂಲಕ ಸಾಗಿಸುವ ಪ್ರಯತ್ನ ಸದ್ದಿಲ್ಲದೇ ಆರಂಭವಾಗಿದೆ. ಪೈಪ್‌ಲೈನ್ ಮಾರ್ಗಕ್ಕಾಗಿ ಈಗಾಗಲೇ ಕರಂಬಳ, ಮಂತುರ್ಗಾ, ಅಸೋಗಾ, ನೇರಸಾ, ರುಮೇವಾಡಿ ಮತ್ತಿತರ ಗ್ರಾಮಗಳ ರೈತರಿಗೆ ಭೂಸ್ವಾಧೀನದ ನೋಟಿಸ್ ನೀಡಲಾಗಿದೆ. ಸಭೆಯಲ್ಲಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಸರ್ಕಾರ ಸದ್ದಿಲ್ಲದೇ ನಡೆಸಿರುವ ಪ್ರಮುಖ ಬೆಳವಣಿಗೆಗಳ ಬಗ್ಗೆ ಸಭಿಕರ ಗಮನ ಸೆಳೆಯಲಾಗಿದೆ. ಸ್ಥಳೀಯ ಜನರು ಎಚ್ಚೆತ್ತುಕೊಂಡು ಕಾಮಗಾರಿಗೆ ವಿರೋಧ ವ್ಯಕ್ತಪಡಿಸುವ ಮೂಲಕ ಇಲ್ಲಿಯ ಅಪರೂಪದ ಅರಣ್ಯವನ್ನು ಉಳಿಸಲು ಪಣ ತೊಡಬೇಕು ಎಂದು ಮನವಿ ಮಾಡಲಾಯಿತು.
ಖಾನಾಪುರ ತಾಲೂಕಿನ ಕೆಲವು ಗ್ರಾಮಗಳ ರೈತರಿಗೆ ಕರ್ನಾಟಕ ಸರ್ಕಾರ ಭೂಮಿಸ್ವಾಧೀನದ ನೋಟೀಸ್ ಜಾರಿ ಮಾಡಿದೆ. ಭಂಡೂರಿ ಹಳ್ಳದ ನೀರನ್ನು ದೊಡ್ಡ ಪೈಪ್ ಮೂಲಕ ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ಪೂರೈಸಲು ರೈತರ ಫಲವತ್ತಾದ ಭೂಮಿಯನ್ನು ಕಬಳಿಸುವ ಯೋಜನೆ ಇದಾಗಿದೆ. ಈ ಯೋಜನೆಯಿಂದ ಖಾನಾಪುರದ ರೈತರು ತಮ್ಮ ಫಲವತ್ತಾದ ಭೂಮಿ ಕಳೆದುಕೊಳ್ಳಲಿದ್ದಾರೆ. ಅಲ್ಲದೆ ಈ ನೀರಿನ ಮೇಲೆ ಬದುಕುವ ನಮ್ಮ ಭಾಗದ ಅರಣ್ಯವು ನಾಶವಾಗಲಿದೆ. ಭವಿಷ್ಯದಲ್ಲಿ ಖಾನಾಪುರ ತಾಲೂಕು ಮಳೆ ಕೊರತೆಯನ್ನು ಎದುರಿಸಲಿದೆ. ಖಾನಾಪುರದ ಮಳೆ, ನೀರು, ಕೃಷಿ, ಭೂಮಿ ಮತ್ತು ರೈತರನ್ನು ರಕ್ಷಿಸಲು ನಾವೆಲ್ಲರೂ ಸೇರಿ ಈಗಿನಿಂದಲೇ ಸಂಘಟಿತರಾಗಿ ಪರಿಸರ ಸಂರಕ್ಷಣೆಗೆ ಶಾಶ್ವತ ಮಾರ್ಗೋಪಾಯ ಕಂಡುಕೊಳ್ಳಬೇಕಾಗಿದೆ.-ಕ್ಯಾ.ನಿತೀನ ಧೋಂಡ,
ಪರಿಸರ ಹೋರಾಟಗಾರ.ಖಾನಾಪುರ ತಾಲೂಕಿನವರಲ್ಲದ, ಇಲ್ಲಿ ವಾಸಿಸದ, ಈ ತಾಲೂಕಿಗೆ ಸಂಬಂಧಪಡದ ಕೆಲವರು ಪರಿಸರ ಹೋರಾಟಗಾರರೆಂದು ಹೇಳಿಕೊಂಡು ಬುಧವಾರ ಸಭೆ ನಡೆಸಿದ್ದಾರೆ. ಸಾವಿರಾರು ರುಪಾಯಿ ಖರ್ಚು ಮಾಡಿ ಸಭೆ ನಡೆಸುವ ಮೂಲಕ ತಾಲೂಕಿನ ಜನರ ಮೇಲೆ ತಮ್ಮ ಪೂರ್ವನಿಯೋಜಿತ ನಿರ್ಣಯಗಳನ್ನು ಬಲವಂತವಾಗಿ ಹೇರಿದ್ದಾರೆ. ಸ್ವಾರ್ಥದ ಉದ್ದೇಶದಿಂದ ತಮ್ಮ ಬೇಳೆ ಬೆಯಿಸಿಕೊಳ್ಳುವ ಕೆಲಸಕ್ಕೆ ಸಭೆಯ ಆಯೋಜಕರು ಕೈ ಹಾಕಿದ್ದಾರೆ. ಪರಿಸರ ಸಂರಕ್ಷಣೆ ಹೆಸರಲ್ಲಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಾವೇ ಬರೆದುತಂದ ನಿರ್ಣಯದ ಮೇಲೆ ಸಹಿ ಹಾಕಿಸಿಕೊಳ್ಳುವ ಇವರ ಕೆಲಸದ ಹಿಂದೆ ಬಹುದೊಡ್ಡ ಪಿತೂರಿ ಅಡಗಿದೆ. ಇವರ ಹೋರಾಟಕ್ಕೆ ಬೆಂಬಲ ನೀಡುವ ಬಗ್ಗೆ ತಾಲೂಕಿನ ಜನರು ಹತ್ತು ಬಾರಿ ವಿಚಾರ ಮಾಡಬೇಕು.-ದಶರಥ ಬನೋಶಿ,
ಕರವೇ ಮುಖಂಡ, ಖಾನಾಪುರ.