ಪ್ರತಿಪಕ್ಷಗಳಿಗೆ ಬೇರೆ ಕೆಲಸ ಇಲ್ಲ: ಬೋಸರಾಜು ಟೀಕೆ

KannadaprabhaNewsNetwork |  
Published : Jun 27, 2025, 12:49 AM IST
ಸಚಿವ ಎನ್.ಎಸ್. ಬೋಸರಾಜು ಇತ್ತೀಚಿನ ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ | Kannada Prabha

ಸಾರಾಂಶ

ಯಾರೋ ಒಂದಿಬ್ಬರು ಶಾಸಕರು ಹೇಳಿದ್ದನ್ನೇ ಮುಂದಿಟ್ಟುಕೊಂಡು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಎಲ್ಲ ಶಾಸಕರು ಸಮಾಧಾನದಿಂದಿದ್ದರೂ ಒಂದಿಬ್ಬರಿಗೆ ಮಾತ್ರ ತೊಂದರೆ ಎಂದರೆ ಅದು ಸ್ಥಳೀಯ ಸಮಸ್ಯೆ ಅಷ್ಟೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್‌ ಎಸ್‌. ಬೋಸರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಯಾರೋ ಒಂದಿಬ್ಬರು ಶಾಸಕರು ಹೇಳಿದ್ದನ್ನೇ ಮುಂದಿಟ್ಟುಕೊಂಡು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಎಲ್ಲಾ ಶಾಸಕರು ಸಮಾಧಾನದಿಂದಿದ್ದರೂ ಒಂದಿಬ್ಬರಿಗೆ ಮಾತ್ರ ತೊಂದರೆ ಎಂದರೆ ಅದು ಸ್ಥಳೀಯ ಸಮಸ್ಯೆ ಅಷ್ಟೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಎನ್.ಎಸ್. ಬೋಸರಾಜು ಹೇಳಿದ್ದಾರೆ.

ಅನುದಾನ ಹಂಚಿಕೆ ಸೇರಿದಂತೆ ಸರ್ಕಾರದಲ್ಲಿ ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯುತ್ತಿದ್ದು, ಒಂದಿಬ್ಬರು ಶಾಸಕರು ಹೇಳಿದ್ದನ್ನೇ ಸತ್ಯ ಎಂದು ಆರೋಪ ಮಾಡುತ್ತಿರುವ ಪ್ರತಿಪಕ್ಷಗಳಿಗೆ ಮಾಡಲು ಬೇರೆ ಕೆಲಸ ಇಲ್ಲ ಎಂದು ಕೊಡಗು ಜಿಲ್ಲಾ ಉಸ್ತುವಾರಿಯೂ ಆಗಿರುವ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಇತ್ತೀಚಿನ ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಮೇಲೆ ವಿನಾ ಕಾರಣ ಆರೋಪ:

ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಹಾರಂಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುದಾನ ಹಂಚಿಕೆ, ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಒಂದಿಬ್ಬರು ಶಾಸಕರು ಮಾತನಾಡಿದ್ದಾರೆ. ಉಳಿದೆಲ್ಲಾ ಶಾಸಕರಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ. ಹೀಗಿರುವಾಗ ಸರ್ಕಾರದ ಮೇಲೆ ವಿನಾ ಕಾರಣ ಆರೋಪ ಮಾಡಲಾಗುತ್ತಿದೆ. ಸರ್ಕಾರದಲ್ಲಿ ಸಾಕಷ್ಟು ಹಣ ಇದ್ದು, ಯೋಜನೆಗಳ ಅನುಷ್ಠಾನಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದರು.

ವಸತಿ ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಚಿವರಿಂದ ಸಮಸ್ಯೆಯಾಗಿದೆ ಎಂದು ಅವರು ಹೇಳಿಲ್ಲ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಗುತ್ತಿರುವುದನ್ನು ಹೇಳಿದ್ದಾರೆ. ಮುಖ್ಯಮಂತ್ರಿಯವರು ಬಿ.ಆರ್.ಪಾಟೀಲ್ ಅವರನ್ನು ಕರೆಸಿ ಮಾತನಾಡಿದ್ದಾರೆ. ಸಮಸ್ಯೆ ಇತ್ಯರ್ಥವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ನ ರಾಜು ಕಾಗೆ ಅವರ ಆರೋಪದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಸಚಿವರು, ರಾಜು ಕಾಗೆ ಅವರು ಭಾವನಾತ್ಮಕ ವ್ಯಕ್ತಿ. ಸ್ಥಳೀಯವಾಗಿ ಆಗಿರುವ ಸಮಸ್ಯೆಯನ್ನು ಅವರು ಹೇಳಿಕೊಂಡಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಕಡೆ ಕೆಲಸ ಆಗುತ್ತಿದ್ದರೂ ಅವರ ಕ್ಷೇತ್ರದಲ್ಲಿ ಆಗುತ್ತಿಲ್ಲ ಎಂದಾದರೆ ಅದು ಅಧಿಕಾರಿಗಳ ನಿರ್ಲಕ್ಷದಿಂದ ಆಗಿರಬಹುದು.

ಈ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ ಎಂದರು.

ಹಣದ ಕೊರತೆ ಇಲ್ಲ:

ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ವಾರ್ಷಿಕ 90 ಸಾವಿರ ಕೋಟಿ ರು.. ಸಬ್ಸಿಡಿ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ಹಾಕಲಾಗುತ್ತಿದೆ. ಕ್ಷೇತ್ರಗಳ ಅಭಿವೃದ್ಧಿಗೆ ಎಂದು 8,000 ಕೋಟಿ ರೂ. ತೆಗೆದಿರಿಸಲಾಗಿದ್ದು, ಈಗಾಗಲೇ ಮಾರ್ಗಸೂಚಿಗಳನ್ನು ರಚಿಸಿ ಆ ಅನುದಾನವನ್ನು ಶಾಸಕರಿಗೆ ಹಂಚಿಕೆ ಮಾಡಲು ಸಿದ್ಧತೆ ನಡೆಯುತ್ತಿದೆ ಎಂದು ತಿಳಿಸಿದರು.

ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಈ ಭಾಗಕ್ಕೆ 483 ಕೋಟಿ ರುಪಾಯಿಗಳ ಕಾಮಗಾರಿಗೆ ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ. ಇದರಲ್ಲಿ 50 ಕೋಟಿ ರು.. ಅನ್ನು ಕೊಡಗು ಜಿಲ್ಲೆಯ 2 ತಾಲೂಕುಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಕಾವೇರಿ ನೀರಾವರಿ ನಿಗಮದಿಂದ 150 ಕೋಟಿ ರು.. ಅನುದಾನ ಬಂದಿದೆ. ಸರ್ಕಾರಿ ನೌಕರರಿಗೆ ಸಮರ್ಪಕವಾಗಿ ವೇತನ ನೀಡಲಾಗುತ್ತಿದೆ. ಬೊಕ್ಕಸದಲ್ಲಿ ಹಣ ಇಲ್ಲದಿದ್ದರೆ ಇವೆಲ್ಲವೂ ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದರು.

ಪ್ರತಿಪಕ್ಷಗಳ ವಿರುದ್ಧ ಕಿಡಿ ಕಾರಿದ ಸಚಿವರು, ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಚರ್ಚೆ ಮಾಡಲು ಬೇರೆ ವಿಷಯ ಲಭ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರದ ಬಗ್ಗೆ ಸುಖಾ ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಆರೋಪಗಳಿಗೆ ಕೆಲಸದ ಮೂಲಕ ನಾವು ಉತ್ತರ ನೀಡುತ್ತಿದ್ದೇವೆ ಎಂದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ