ಬಿಎಸ್‌ವೈ ಕೆಲಸಗಳಿಗೆ ವಿರೋಧ ಪಕ್ಷದಿಂದ ಬಾಗಿನ

KannadaprabhaNewsNetwork |  
Published : Aug 28, 2026, 01:45 AM IST
ಪೋಟೋ: 27ಎಸ್‌ಎಂಜಿಕೆಪಿ08ಶಿರಾಳಕೊಪ್ಪ ಹೋಬಳಿಯ ಸುಣ್ಣದಕೊಪ್ಪ ಗ್ರಾಮದಲ್ಲಿ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಪಾಲ್ಗೊಂಡಿದ್ದರು.  | Kannada Prabha

ಸಾರಾಂಶ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ ರೈತರಿಗೆ ಅನುಕೂಲವಾಗುವ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಆದರೆ ಯಡಿಯೂರಪ್ಪ ಮಾಡಿದ ಕೆಲಸಗಳಿಗೆ ಇದೀಗ ವಿರೋಧ ಪಕ್ಷದವರು ಬಾಗಿನ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದರು.

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ ರೈತರಿಗೆ ಅನುಕೂಲವಾಗುವ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಆದರೆ ಯಡಿಯೂರಪ್ಪ ಮಾಡಿದ ಕೆಲಸಗಳಿಗೆ ಇದೀಗ ವಿರೋಧ ಪಕ್ಷದವರು ಬಾಗಿನ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದರು.ಸುಣ್ಣದಕೊಪ್ಪ ಗ್ರಾಮದಲ್ಲಿ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ರಾಜಕೀಯ ಮಾಡುವ ಬದಲು ಜನರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ರೈತರು ಹಾಗೂ ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯ ಎಂದರು.ಕೋಗಿಲೆ ಮೊಟ್ಟೆ ಇಟ್ಟರೆ ಕಾಗೆ ಕಾವು ಕೊಡುವಂತೆ, ಯಡಿಯೂರಪ್ಪ ನೀರಾವರಿ ಮಾಡಿದರೆ ವಿರೋಧ ಪಕ್ಷದವರು ಅದಕ್ಕೆ ಬಾಗಿನ ನೀಡುತ್ತಿದ್ದಾರೆ ಎಂದು ಹಾಸ್ಯಮಿಶ್ರಿತವಾಗಿ ಹೇಳಿದ ವಿಜಯೇಂದ್ರ, ಹಿಂದಿನ ಸರ್ಕಾರ ಕೈಗೊಂಡ ಅಭಿವೃದ್ಧಿ ಹಾಗೂ ನೀರಾವರಿ ಯೋಜನೆಗಳ ಶ್ರೇಯಸ್ಸನ್ನು ಪಡೆದುಕೊಳ್ಳಲು ಕೆಲವರು ಮುಂದಾಗಿದ್ದಾರೆ ಎಂದು ಟೀಕಿಸಿದರು.ತಾಲೂಕಿನಲ್ಲಿ 290 ಕೆರೆಗಳಿಗೆ 850 ಕೋಟಿ ರು. ವೆಚ್ಚದಲ್ಲಿ ನೀರಾವರಿ ಕಲ್ಪಿಸಲಾಗಿದೆ. 220 ಕೆ.ವಿ. ವಿದ್ಯುತ್ ಉಪಕೇಂದ್ರ ನಿರ್ಮಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲೂ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಅಕ್ಕಪಕ್ಕದ ತಾಲೂಕು ಹಾಗೂ ಜಿಲ್ಲೆಗಳ ವಿದ್ಯಾರ್ಥಿಗಳು ಶಿಕಾರಿಪುರ, ಶಿರಾಳಕೊಪ್ಪಕ್ಕೆ ಶಿಕ್ಷಣ ಪಡೆಯಲು ಬರುತ್ತಿರುವುದೇ ಇದಕ್ಕೆ ಸಾಕ್ಷಿ. 250 ಹಾಸಿಗೆಗಳ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣವಾಗಿರುವುದು ಕ್ಷೇತ್ರದ ಅಭಿವೃದ್ಧಿಗೆ ಸಾಕ್ಷಿ ಎಂದು ಹೇಳಿದರು.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೀರಾವರಿ, ಕುಡಿಯುವ ನೀರು ಹಾಗೂ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು. ರೈತರ ಜಮೀನುಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿದ್ದರು ಎಂದು ವಿಜಯೇಂದ್ರ ಹೇಳಿದರು.ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಮಾತನಾಡಿ, ಯಡಿಯೂರಪ್ಪ ಅವರು ಸೈಕಲ್, ಭಾಗ್ಯಲಕ್ಷ್ಮಿ ಸಹಿತ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಯಡಿಯೂರಪ್ಪ ಅವರ ರಾಜಕೀಯ ಬೆಳವಣಿಗೆಯಲ್ಲಿ ಶಿಕಾರಿಪುರ ತಾಲೂಕಿನ ತಾಯಂದಿರ ಪಾತ್ರ ಮಹತ್ವದ್ದು. ಮಹಿಳೆಯರು ಸಂಘಟನೆಯ ಶಕ್ತಿಯಾಗಿದ್ದಾರೆ ಎಂದರು.ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ರಸ್ತೆ ನಿರ್ಮಿಸಿಕೊಡುವಂತೆ ಮಹಿಳೆಯರು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ವಿಜಯೇಂದ್ರ, ತಕ್ಷಣವೇ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ರಸ್ತೆ ನಿರ್ಮಿಸಲು ಸೂಚಿಸಿದರು. ಬಳಿಕ ಪ್ರಗತಿ ಸಂಜೀವಿನಿ ಮಹಿಳಾ ಒಕ್ಕೂಟ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೊಂದಿಗೆ ಸಂವಾದ ನಡೆಸಿದರು.ತಾಲೂಕು ಬಿಜೆಪಿ ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ, ರೈತ ಮೋರ್ಚಾ ಅಧ್ಯಕ್ಷ ಯೋಗಿಶಪ್ಪ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಳವಳ್ಳಿ ಚಂದ್ರು ಸಹಿತ ಸ್ಥಳೀಯ ಮುಖಂಡರು, ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

------ಪೋಟೋ--------

27ಎಸ್‌ಎಂಜಿಕೆಪಿ08

ಶಿರಾಳಕೊಪ್ಪ ಹೋಬಳಿಯ ಸುಣ್ಣದಕೊಪ್ಪ ಗ್ರಾಮದಲ್ಲಿ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಪಾಲ್ಗೊಂಡಿದ್ದರು. ಕೆ.ಎಸ್. ಗುರುಮೂರ್ತಿ, ಹನುಮಂತಪ್ಪ, ಯೋಗಿಶಪ್ಪ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಭಟನೆಗೆ ಸೀಮಿತವಾದ ಹನೂರು ಬಂದ್‌
ಶೂಟೌಟ್ ಖಂಡಿಸಿ ಹನೂರಿನಲ್ಲಿ ಪ್ರತಿಭಟನೆ