ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ರೈತರ ಫಲವತ್ತಾದ ನೀರಾವರಿ ಭೂಮಿಯನ್ನು ಕೆಐಎಡಿಬಿ ವಶಕ್ಕೆ ಪಡೆಯಬಾರದು ಎಂದು ರೈತ ಪರ ಹೋರಾಟ ಸಮಿತಿಯು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರನ್ನು ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ 2823 ಎಕರೆ ಜಮೀನು ಭೂ ಸ್ವಾಧೀನಪಡಿಸಿಕೊಂಡು ಕರ್ನಾಟಕ ಕೈಗಾರಿಕಾ ಪ್ರದೇಶಿಕ ಮಂಡಳಿಗೆ ನೀಡಿ ಕೈಗಾರಿಕೆಗಳನ್ನು ಸ್ದಾಪನೆ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಶೇ.80 ಭಾಗ ರೈತರ ಒಪ್ಪಿಗೆಈ ಬಗ್ಗೆ ನೋಟಿಸ್ ಪಡೆದವರ ಪೈಕಿ ಶೇ. 80 ಭಾಗದ ರೈತರು ಕೆಐಎಡಿಬಿ, ಕಚೇರಿಗೆ ತೆರಳಿ ನಮ್ಮ ಜಮೀನು ನಾವು ನೀಡುತ್ತೇವೆ. ನಮಗೆ ಉತ್ತಮ ಬೆಲೆ ನೀಡಬೇಕು, ನಮ್ಮ ಮಕ್ಕಳಿಗೆ ಮನೆಗೊಂದು ಉದ್ಯೊಗ ನೀಡಬೇಕು, ಭೂ ಪರಿಹಾರ ಒಂದೇ ಕಂತಿನಲ್ಲಿ ಜಮಾ ಮಾಡಬೇಕೆಂದು ಕೋರಿ ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ಸಂಘದ ಮುಖಂಡ ಭಕ್ತರಹಳ್ಳಿ ಪ್ರತೀಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುಗಾದಿ ಬಳಿಕ ಕ್ರಮ: ಸಚಿವಈ ಸಮಸ್ಯೆಗೆ ಸ್ಪಂಧಿಸಿದ ಮಾನ್ಯ ಕೈಗಾರಿಕಾ ಇಲಾಖೆಯ ಸಚಿವ ಎಂ.ಬಿ.ಪಾಟೀಲ್ ನಾವು ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ನೀಡುವುದಿಲ್ಲ. ನಿನ್ನ ಭೂಮಿ ನಿನ್ನ ಹಕ್ಕು,ನಾವು ತ್ವರಿತಗತಿಯಲ್ಲಿ ಈ ಪ್ರಾಜೆಕ್ಟನ್ನು ಪ್ರಾರಂಭ ಮಾಡುತ್ತೇವೆ. ರೈತರಿಗೆ ಉತ್ತಮ ಬೆಲೆ ನೀಡುತ್ತೇವೆ. ಯುಗಾದಿ ಹಬ್ಬ ಕಳೆದರೆ ತಕ್ಷಣ ಕಾರ್ಯಪ್ರವೃತ್ತರಾಗುತ್ತೇವೆಂದು ತಿಳಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸೀರು ಸೇನೆಯ ಬಸವಪಟ್ಟಣ ಪ್ರಭು, ಆಂಜಿಪ್ಪ, ರಾಮದಾಸ್, ಯೋಗನಂದಬಾಬು, ಚೆನ್ನಪ್ಪ,ನಡುಪಿನಾಯಕನಹಳ್ಳಿ ಸುಬ್ರಮಣಿ, ವಾಸುದೇವ ಮೂರ್ತಿ ಮತ್ತಿತರರು ಇದ್ದರು.