ಟಾಟಾ ಪವರ್ ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ನೀಡಲು ವಿರೋಧ
ನಗರದ ಕೆಇಬಿ ಸಮುದಾಯ ಭವನದಲ್ಲಿ ನಡೆದ ವಿವಿಧ ಸಂಘಟನೆಗಳ ಸಭೆಯಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ಟಾಟಾ ಪವರ್ ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ನೀಡುವ ಪ್ರಸ್ತಾವನೆ ತಿರಸ್ಕರಿಸಲಾಯಿತು ಹಾಗೂ ಖಾಸಗೀಕರಣದ ವಿರುದ್ಧ ಹೋರಾಟ ಮಾಡಲು ಸರ್ವಾನುಮತದಿಂದ ತೀರ್ಮಾನ ಅಂಗೀಕರಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಹಲವು ಸಂಘಟನೆಗಳ ಮುಖಂಡರು, ಖಾಸಗೀಕರಣದಿಂದ ಸಾಮಾನ್ಯ ಸಾರ್ವಜನಿಕರಿಗೆ ಹಾಗೂ ರೈತರಿಗೆ ತೊಂದರೆ ಆಗಲಿದ್ದು, ರೈತರ ಹಿತಾಸಕ್ತಿ ಮತ್ತು ಸಾರ್ವಜನಿಕ ವಿದ್ಯುತ್ ಸೇವೆಗಳ ರಕ್ಷಣೆಯೇ ನಮ್ಮ ಪ್ರಮುಖ ಉದ್ದೇಶವಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಟಾಟಾ ಪವರ್ ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ನೀಡುವ ಪ್ರಸ್ತಾವನೆಯ ಬಗ್ಗೆ ನಮ್ಮ ತೀವ್ರ ವಿರೋಧ ಈ ಮೂಲಕ ದಾಖಲಿಸುತ್ತೇವೆ ಎಂದರು.ಕೋಲಾರ ವಲಯದ ಏಪ್ರಿಲ್-೨೦೨೬ರ ಡಿಸಿಬಿ ಅಂಕಿ-ಅಂಶಗಳ ಪ್ರಕಾರ ಒಟ್ಟು ೧೪,೩೪,೦೩೦ ಗ್ರಾಹಕರು ಇದ್ದು, ಮಾಸಿಕ ಒಟ್ಟು ಆದಾಯ ಬೇಡಿಕೆ ೪೩೮.೮೯ ಕೋಟಿ ಆಗಿದೆ.
ಟಾಟಾ ಪವರ್ ಕಂಪನಿಯು ಲಾಭದಾಯಕ ಗ್ರಾಹಕರನ್ನು ಮಾತ್ರ ಆಯ್ಕೆ ಮಾಡಿಕೊಂಡು ಸೇವೆ ನೀಡಲು ಅವಕಾಶ ದೊರೆತರೆ, ಬೆಸ್ಕಾಂ ಸಂಸ್ಥೆಯ ಆರ್ಥಿಕ ಸ್ಥಿತಿ ಹದಗೆಡುವ ಅಪಾಯವಿದೆ ಎಂದರು.
ವಿದ್ಯುತ್ ಕ್ಷೇತ್ರದಲ್ಲಿ ಅಸಮಾನ ಸ್ಪರ್ಧೆ ಉಂಟಾಗಿ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತದೆ, ಬೆಸ್ಕಾಂನ ಆರ್ಥಿಕ ಸಾಮರ್ಥ್ಯ ಕುಸಿದರೆ ರೈತರು ಹಾಗೂ ಸಾಮಾನ್ಯ ಗ್ರಾಹಕರು ನೇರವಾಗಿ ತೊಂದರೆಗೆ ಒಳಗಾಗುತ್ತಾರೆ ಎಂದರು.
ಬೆಸ್ಕಾಂ ಖಾಸಗೀಕರಣ ವಿರೋಧಿಸಿ ಅನಿವಾರ್ಯ ಆದರೆ ಹೋರಾಟ ಮಾಡುವ ಹಾಗೂ ಇದೇ ತಿಂಗಳ ೨೧ ರ ಒಳಗೆ ಎಲ್ಲಾ ಸಂಸ್ಥೆಗಳು,ಸಂಘಟನೆ ಗಳು ತಮ್ಮ ಆಕ್ಷೇಪಣೆ ಸಲ್ಲಿಸಲು ತೀರ್ಮಾನ ಸಭೆ ಸರ್ವಾನುಮತದಿಂದ ಅಂಗೀಕರಿಸಿತು ಹಾಗೂ ಸಾಂಕೇತಿಕವಾಗಿ ನಗರದ ಡೂಂ ಲೈಟ್ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.