ಕಾರವಾರ: ಹೊನ್ನಾವರ ತಾಲೂಕಿನ ಕಾಸರಕೋಡು ಬಂದರಿಗೆ ರಸ್ತೆ, ಜಟ್ಟಿ ನಿರ್ಮಾಣ ಸಂಬಂಧ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮೀನುಗಾರರು ಬಂದರು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು.
ಸಭೆ ಆರಂಭವಾಗುತ್ತಿದ್ದಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಸರ್ವೆ ನಂಬರ್ ೩೦೩, ೨೦೪, ೩೦೫ ಕಂದಾಯ ಇಲಾಖೆಯ ಗ್ರಾಮ ನಕ್ಷೆ ನೋಡಲಾಗಿದೆ. ಇದು ಬ್ರಿಟಿಷ್ ಕಾಲದ ಸರ್ವೆಯಾಗಿದ್ದು, ಅದನ್ನೇ ದೇಶಾದ್ಯಂತ ಪರಿಗಣಿಸಲಾಗುತ್ತಿದೆ.೩೦೩ರಲ್ಲಿ ಜಿಲ್ಲಾಡಳಿತದಿಂದ ಆಶ್ರಯ ಮನೆ ನೀಡಲಾಗಿದೆ. ಆಸ್ಪತ್ರೆ ಮಂಜೂರಿಯಾಗಿದೆ. ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಷ್ಟು ಮನೆಗಳು ಬರುತ್ತವೆ ಎಂದು ಸರ್ವೆ ಮಾಡಬೇಕಾಗಿದೆ. ಸರ್ವೆಗೆ ವಿರೋಧ ಸ್ಥಳೀಯರಿಂದ ಇದೆ. ನಿಮಗೆ ಪರಿಹಾರ ಸಿಗುವುದಿಲ್ಲ ಎನ್ನುವ ನಿಮ್ಮ ಆತಂಕ ನಮಗೆ ಅರ್ಥವಾಗುತ್ತದೆ. ಈ ಸರ್ವೆಗೆ ಬಂದಾಗ ಗಲಾಟೆಯಾಗಿ ಪ್ರಕರಣ ದಾಖಲಾಗಿದೆ. ಇದನ್ನು ವಾಪಸ್ ಪಡೆಯಬೇಕು ಎನ್ನುವುದು ನಿಮ್ಮ ಆಗ್ರಹವಾಗಿದೆ. ಇದು ಕಾನೂನಾತ್ಮಕವಾಗಿ ನಡೆಯಬೇಕಿದ್ದು, ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ. ಜತೆಗೆ ಸರ್ಕಾರದಿಂದ ಮಂಜೂರಾದ ಮನೆಯೊಂದಿಗೆ ತಾತ್ಕಾಲಿಕವಾಗಿ ನಿರ್ಮಾಣ ಮಾಡಿಕೊಂಡ ಶೆಡ್, ಇತರೆ ಮನೆಯನ್ನೂ ಸರ್ವೆ ಮಾಡಿ ಪರಿಹಾರ ನೀಡಲಾಗುತ್ತದೆ. ನಿಮಗೆ ಸಮಾಧಾನ ಮಾಡಲು ಮಾತನಾಡುತ್ತಿಲ್ಲ ಎಂದರು.
ಸರ್ಕಾರದ ಯೋಜನೆಯಾದ ಕಾರಣ ಮನೆಗಳ ಸರ್ವೆ ನಡೆಸಲು ಜಿಲ್ಲಾಧಿಕಾರಿಯಾಗಿ ಅದೇಶವನ್ನೂ ನೀಡಲು ಕಾನೂನಾತ್ಮಕವಾಗಿ ಅವಕಾಶವಿದೆ. ಆದರೆ ನಮ್ಮ ಜನರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ನಿಮ್ಮಲ್ಲಿ ಸರ್ವೆಗೆ ಅವಕಾಶ ನೀಡಲು ಕೇಳುತ್ತಿದ್ದೇವೆ. ನಿಮಗೆ ಬೇರೆ ಯಾವುದೇ ಅನುಮಾನವಿದ್ದರೂ ಇಲ್ಲಿ ಪರಿಹರಿಸಿಕೊಳ್ಳಬಹುದು ಎಂದರು.ಪರಿಸರವಾದಿ ಮಹಾಬಲೇಶ್ವರ ಹೆಗಡೆ ಮಾತನಾಡಿ, ಅಧಿಕಾರಿಗಳ ಬಳಿ ಪತ್ರ ಬರೆದು ಕೇಳಿದರೆ ದಾಖಲೆ ಕೊಡುತ್ತಿಲ್ಲ. ೩೦೫ ಎಲ್ಲಿಯವರೆಗೆ ಬರುತ್ತದೆ ಎಂದು ಕೇಳಿದರೆ ಎಲ್ಲವೂ ನಮಗೆ ಬರುತ್ತದೆ. ನಾವು ಆ ಜಾಗವನ್ನು ಪಡೆಯುತ್ತೇವೆ ಎಂದು ಬಂದರು ಇಲಾಖೆಯ ಕ್ಯಾ. ಸ್ವಾಮಿ ಹೇಳಿದರು. ಇದರಿಂದ ಮೀನುಗಾರಿಗೆ ಆತಂಕವಾಯಿತು. ೯೩ ಎಕರೆ ಮೀಸಲು ಇಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಜಾಗ ಎಲ್ಲಿದೆ ಎಂದರೆ ತಿಳಿಸುತ್ತಿಲ್ಲ. ಕರಾವಳಿ ನಿಯಂತ್ರಣ ವಲಯದ ಕಾನೂನಿನ ಪ್ರಕಾರ ಹೈಟೆಡ್ ಪ್ರದೇಶದಲ್ಲಿ ಜಟ್ಟಿ ನಿರ್ಮಾಣ ಮಾಡಲು ಬರುವುದಿಲ್ಲ. ಆದರೆ ಅವರು ನಿರ್ಮಾಣ ಮಾಡುತ್ತಿರುವುದು ಅದೇ ಜಾಗದಲ್ಲಾಗಿದೆ. ೨೦೧೦ರಲ್ಲಿ ೩೦೫ ಸರ್ವೆ ನಂಬರ್ ಇರಲಿಲ್ಲ. ಆದರೆ ೨೦೧೫ರಲ್ಲಿ ಸರ್ವೆ ನಂಬರ್ ದಾಖಲಾಗಿದೆ. ಕರ್ನಾಟಕ ರೆವಿನ್ಯೂ ಆ್ಯಕ್ಟ್ ಪ್ರಕಾರ ತಪ್ಪು. ದಾಖಲೆ ಕೇಳಿದರೂ ನೀಡಿಲ್ಲ ಎಂದು ಆರೋಪಿಸಿದರು.
ಡಿಸಿ ಗಂಗೂಬಾಯಿ ಮಾತನಾಡಿ, ೩೦೫ ಸರ್ವೆ ನಂಬರ್ ಪ್ರದೇಶ ಶರಾವತಿ ನದಿ ಹರಿವಿನಿಂದ ಮುಳುಗಡೆಯಾಗಿತ್ತು. ಬಳಿಕ ನದಿಯ ಹರಿವು ಬದಲಾದಾಗ ಆ ಜಾಗ ಗೋಚರವಾಗಿದೆ. ೧೯೯೦ರಲ್ಲಿ ಕೆಲವು ಸರ್ವೆ ನಂಬರ್ ಶರಾವತಿ ನದಿಯಲ್ಲಿ ಮುಳುಗಡೆಯಾಗಿದೆ ಎಂದು ಆದೇಶ ಕೂಡಾ ಆಗಿತ್ತು. ಹೀಗಾಗಿ ಸರ್ವೆ ನಕ್ಷೆಯಲ್ಲಿ ೩೦೨ರ ವರೆಗೆ ಮಾತ್ರ ದಾಖಲಾಗಿತ್ತು. ಆಶ್ರಯ ಯೋಜನೆಯ ನಿರ್ಮಾಣವಾದ ಮನೆಗಳ ಜಾಗಕ್ಕೆ ೩೦೩, ೩೦೪ ಎಂದು ನೀಡಲಾಗಿತ್ತು. ಮುಳುಗಡೆಯಾದ ಜಾಗ ಗೋಚರವಾದಾಗ ಸರ್ವೆ ನಂಬರ್ ೩೦೫ ಎಂದು ದಾಖಲು ಮಾಡಲಾಗಿದೆ. ಈ ಮೂರು ನಂಬರ್ ಹೊಸದಾಗಿ ಬಂದಿದೆ. ಆ ಜಾಗವನ್ನೇ ಬಂದರು ಇಲಾಖೆಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಭಟ್ಕಳ ಉಪ ವಿಭಾಗಾಧಿಕಾರಿ ಡಾ. ನಯನ, ಬಂದರು ಇಲಾಖೆಯ ಕ್ಯಾ. ಸ್ವಾಮಿ ಇದ್ದರು.ಸಭೆಯಿಂದ ಹೊರನಡೆದ ಮೀನುಗಾರರು
ಸಭೆಯ ಕೊನೆಯಲ್ಲಿ ಮೀನುಗಾರರು ಬಂದರು, ಜಟ್ಟಿ ನಿರ್ಮಾಣಕ್ಕೆ, ಸರ್ವೆ ನಡೆಸಲು ವಿರೋಧ ವ್ಯಕ್ತಪಡಿಸಿದರು. ಆಗ ಮಾತನಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಆರು ತಿಂಗಳ ಒಳಗೆ ಪ್ರಾರಂಭಿಸುವಂತೆ ಸರ್ಕಾರದ ಆದೇಶವಿದೆ. ಈ ತಿಂಗಳಲ್ಲೇ ಸರ್ವೆ ಮಾಡಲಾಗುತ್ತದೆ. ನಾವು ಸರ್ಕಾರದ ಆದೇಶವನ್ನು ಪಾಲಿಸುತ್ತೇವೆ. ಸರ್ಕಾರದ ಪರಿಹಾರ ತೆಗೆದುಕೊಂಡು ಕಾಮಗಾರಿಗೆ ಅವಕಾಶ ನೀಡಬೇಕು. ಈಗಾಗಲೇ ೧೧ ವರ್ಷ ಹೋರಾಟ ನಡೆಸಿದ್ದೀರಿ. ಏನು ಪ್ರಯೋಜನವಾಗಿಲ್ಲ ಎನ್ನುತ್ತಿದ್ದಂತೆ ಮೀನುಗಾರರು ಸಭೆಯಿಂದ ಎದ್ದು ಹೊರನಡೆದರು.