ಕುಡಿವ ನೀರಿಗೆ ವಿರೋಧ: ಹೊಸದುರ್ಗ ಬಂದ್‌

KannadaprabhaNewsNetwork |  
Published : Jun 29, 2025, 01:33 AM IST
ದವ್ವವ | Kannada Prabha

ಸಾರಾಂಶ

ತಾಲೂಕಿನ 346 ಗ್ರಾಮಗಳಿಗೆ ಭದ್ರಾ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಮಾಡುವ ಬಹು ಗ್ರಾಮ ಯೋಜನೆಗೆ ದಾವಣಗೆರೆ ಜಿಲ್ಲೆಯ ರೈತರು ಹಾಗೂ ಜನ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸುತ್ತಿರುವುದರ ವಿರುದ್ದ ಶನಿವಾರ ಕರೆಯಲಾಗಿದ್ದ ಹೊಸದುರ್ಗ ಬಂದ್‌ ಸಂಪೂರ್ಣ ಯಶಸ್ವಿಯಾಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ತಾಲೂಕಿನ 346 ಗ್ರಾಮಗಳಿಗೆ ಭದ್ರಾ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಮಾಡುವ ಬಹು ಗ್ರಾಮ ಯೋಜನೆಗೆ ದಾವಣಗೆರೆ ಜಿಲ್ಲೆಯ ರೈತರು ಹಾಗೂ ಜನ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸುತ್ತಿರುವುದರ ವಿರುದ್ದ ಶನಿವಾರ ಕರೆಯಲಾಗಿದ್ದ ಹೊಸದುರ್ಗ ಬಂದ್‌ ಸಂಪೂರ್ಣ ಯಶಸ್ವಿಯಾಯಿತು.

ಬೆಳಿಗ್ಗೆಯಿಂದಲೇ ತರಕಾರಿ ಮಾರುಕಟ್ಟೆ ಬಂದ್‌ ಆಗಿತ್ತು. ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದವು. ಖಾಸಗಿ ಬಸ್‌ ಸೇರಿದಂತೆ ಆಟೋಗಳ ಸಂಚಾರ ವಿರಳವಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು ನಗರದ ಹೊರವಲಯದಲ್ಲಿ ಸಂಚರಿಸಿದವು.

ಪ್ರತಿಭಟನೆಗೆ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸೇರಿದಂತೆ ವಕೀಲರು, ವರ್ತಕರು, ಖಾಸಗಿ ಬಸ್‌ ಮಾಲೀಕರು, ಆಟೋ ಚಾಲಕರು ಹಾಗೂ ಮಾಲೀಕರು ಕಸಾಪ ಪದಾದಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಸಾರ್ವಜನಿಕರು ಸ್ವಪ್ರೇರಣೆಯಿಂದ ಬಂದ್‌ನಲ್ಲಿ ಭಾಗವಹಿಸುವ ಮೂಲಕ ಯಶಸ್ಸಿಗೆ ಕಾರಣರಾದರು.

ಕುಡಿಯುವ ನೀರಿಗೆ ಅಡ್ಡಿ ಪಡಿಸಿದರೆ ಪರಿಣಾಮ ನೆಟ್ಟಗಿರಲ್ಲ: ಗೋವಿಂದಪ್ಪ

ಪ್ರತಿಭಟನೆಯ ನೇತೃತ್ವವಹಿಸಿದ್ದ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಭಾರತೀಯ ವಿಜ್ಞಾನ ಸಂಸ್ಥೆ ಈಗಾಗಲೇ ಡ್ಯಾಂಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ಹೋರಾಟ ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ನಾವು ನಮ್ಮ ತಾಲೂಕಿನ ಜನತೆಗೆ ಕುಡಿಯುವ ನೀರು ಪೂರೈಸಲು ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ. ಕುಡಿಯುವ ನೀರಿಗೆ ಅಡ್ಡಿಪಡಿಸಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಸಿದರು.

ಕಡೂರು, ತರೀಕೆರೆ, ಅಜ್ಜಂಪುರ ಮತ್ತು ಹೊಸದುರ್ಗ ಪಟ್ಟಣ ಮತ್ತು ತಾಲೂಕಿನ ಎಲ್ಲಾ ಗ್ರಾಮಗಳಿಗೆ ಭದ್ರಾ ಜಲಾಶಯದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 1 ಟಿಎಂಸಿ ನೀರನ್ನು ಉಪಯೋಗಿಸಲು ಸರ್ಕಾರ ಅನುಮತಿ ನೀಡಿದ್ದು, ಈಗಾಗಲೇ, ಜಲಾಶಯದ ಸಮೀಪ 9 ಎಕರೆ ಭೂಮಿಯಲ್ಲಿ ಶುದ್ಧೀಕರಣ ಘಟಕದ ಕಾರ್ಯ ನಡೆಯುತ್ತಿದೆ. ಈಗಾಗಲೇ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಹೀಗಿರುವಾಗ ಕೆಲವು ಮುಖಂಡರು ಮತ್ತು ರೈತರು ಹೊಸದುರ್ಗಕ್ಕೆ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲವೆಂದು ಕ್ಯಾತೆ ತೆಗೆದಿದ್ದಾರೆ. ಈ ನಾಲೆಯಲ್ಲಿ ಬೇರೆ ಜಿಲ್ಲೆಗಳ ಜನರಿಗೆ ಕುಡಿಯಲು ನೀರು ಹೋಗುತ್ತಿದ್ದು, ನಮ್ಮನ್ನು ಪ್ರಶ್ನಿಸುವವರು, ಅವರನ್ನೇಕೆ ಪ್ರಶ್ನೆ ಮಾಡುತ್ತಿಲ್ಲ? ಬೇರೆ ಕಡೆಗೆ ನೀರು ಕೊಡುವಾಗ ಏಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆ ಈಗಾಗಲೇ ಡ್ಯಾಂಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ಹೋರಾಟ ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ನಾವು ನಮ್ಮ ತಾಲೂಕಿನ ಜನತೆಗೆ ಕುಡಿಯುವ ನೀರು ಪೂರೈಸಲು ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.

ಬಿಜೆಪಿ ಮುಖಂಡ ಎಸ್.ಲಿಂಗಮೂರ್ತಿ ಮಾತನಾಡಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 830 ಕೋಟಿ ರು. ಹಣ ಬಿಡುಗಡೆಯಾಗಿದ್ದು, ಈಗಾಗಲೇ ಕಾಮಗಾರಿಗೆ ಶೇ.80 ರಷ್ಟು ಸರ್ಕಾರದ ಹಣವನ್ನು ಯೋಜನೆಗೆ ವ್ಯಯಿಸಲಾಗಿದೆ. ಈ ಯೋಜನೆ ಮುಗಿಯುವ ಹಂತಕ್ಕೆ ಬಂದಿರುವ ಸಮಯದಲ್ಲಿ ವಿರೋಧಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀರಾವರಿ ಹೋರಾಟ ಸಮಿತಿಯ ಚಿಕ್ಕಪ್ಪನಹಳ್ಳಿ ಷಣ್ಮುಖ, ರಾಜೇಶ್ ಬುರುಡೆಕಟ್ಟೆ, ಕೆ.ಎಸ್.ಕಲ್ಮಠ, ಉದ್ಯಮಿ ಸದ್ಗುರು ಪ್ರದೀಪ್, ಹೆಬ್ಬಳ್ಳಿ ಮಲ್ಲಿಕಾರ್ಜುನ, ವಕೀಲರ ಸಂಘದ ಅಧ್ಯಕ್ಷ ರವಿಕುಮಾರ್, ಕೆ.ಅನಂತ್‌, ಕೊಂಡಾಪುರ ಮಂಜಣ್ಣ, ಜೆಡಿಎಸ್ ತಾಲೂಕ್ ಘಟಕದ ಅಧ್ಯಕ್ಷ ಗಣೇಶ್‌ ಮೂರ್ತಿ, ಕಾಂಗ್ರೆಸ್ ಮುಖಂಡರಾದ ಆಗ್ರೋ ಶಿವಣ್ಣ, ಗೋತಿಪ್ಪೇಶ್, ರೈತ ಮುಖಂಡರಾದ ಬೋರೇಶ್‌, ಚಿತ್ತಪ್ಪ, ಮಹೇಶ್ವರಪ್ಪ, ರಘು ನೀರಗುಂದ ಪುರಸಭಾ ಸದಸ್ಯರು, ಪಟ್ಟಣದ ವರ್ತಕರು, ರೈತ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಹಾಜರಿದ್ದರು .

-----------

ಸುಪ್ರೀಂ ಕೋರ್ಟ್ ಆದೇಶದಂತೆ ಕುಡಿಯುವ ನೀರಿಗೆ ಯಾರೂ ತಕರಾರು ಮಡುವಂತಿಲ್ಲ. ದಾವಣಗೆರೆ ಜಿಲ್ಲೆಯ ಕೆಲವು ನಿರುದ್ಯೋಗಿ ಮುಖಂಡರು ತಮ್ಮ ಅಸ್ಥಿತ್ವಕ್ಕಾಗಿ ಸುಖಾಸುಮ್ಮನೆ ತಕರಾರು ತೆಗೆದು ಯೋಜನೆಗೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ದಾವಣಗೆರೆ ಜಿಲ್ಲೆಯ ನಮ್ಮ ಪಕ್ಷದ ಕೆಲವರು ಯೋಜನೆಗೆ ಅಡ್ಡಿಪಡಿಸುತ್ತಿರುವುದರಿಂದ ಮಧ್ಯಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಭಾರಿ ಹಿನ್ನೆಡೆಯಾಗುವ ಸಾಧ್ಯತೆ ಇದೆ.

ಕೆ.ಎಸ್.ನವೀನ್.ವಿಧಾನಪರಿಷತ್ ಸದಸ್ಯ

PREV

Recommended Stories

ನಿವೃತ್ತಿ ಜೀವನ ಬವಣೆ ರಹಿತ ಉತ್ಸಾಹದಾಯಕವಾಗಿರಲಿ: ಡಾ.ಸಿದ್ದು ದಿವಾನ
ಪ್ರಿಯದರ್ಶಿನಿ ಕೋ-ಆಪರೇಟಿವ್‌ ಸೊಸೈಟಿ ಸಹಕಾರ ಸಪ್ತಾಹ ಸಮಾರೋಪ