ಕನ್ನಡಪ್ರಭ ವಾರ್ತೆ ಬೆಂಗಳೂರು
ಈದ್ ಮಿಲಾದ್ ಹೆಸರಲ್ಲಿ ಕೆಲ ಮುಸ್ಲಿಂ ಸಂಘಟನೆಗಳು, ಮುಖಂಡರು ವಿದೇಶಿ ಧರ್ಮಗುರುಗಳನ್ನು ಕರೆಸಿ ಇಸ್ಲಾಂ ಧರ್ಮ ಪ್ರಚಾರಕ್ಕೆ ಮುಂದಾಗಿದ್ದಾರೆ. ಇದಕ್ಕೆ ಯಾವುದೇ ಕಾರಣಕ್ಕೂ ಸರ್ಕಾರ ಅವಕಾಶ ನೀಡಬಾರದು ಎಂದು ಹಿಂದೂ ಪರ ಹೋರಾಟಗಾರರು, ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ಈ ಸಂಬಂಧ ಹಿಂದೂ ಪರ ಹೋರಾಟಗಾರ ತೇಸ್ ಗೌಡ ಮತ್ತಿತರರು ನಗರ ಪೊಲೀಸ್ ಆಯುಕ್ತರಿಗೆ ದೂರು ಕೂಡ ನೀಡಿದ್ದಾರೆ.
ನಿಯಮಾನುಸಾರ ಟೂರಿಸ್ಟ್ ವೀಸಾ ಪಡೆದು ಧರ್ಮ ಪ್ರಚಾರ ಮಾಡುವಂತಿಲ್ಲ. ಕಾರ್ಯಕ್ರಮದಲ್ಲಿ ಭಾಗಿ ಆಗಬಹುದೇ ಹೊರತು ಧರ್ಮಪ್ರಚಾರಕರು ಭಾಷಣ ಮಾಡುವಂತಿಲ್ಲ. ಆದರೆ, ಈ ಕಾರ್ಯಕ್ರಮಕ್ಕೆ ಟೂರಿಸ್ಟ್ ವೀಸಾ ಪಡೆದು ಬರುತ್ತಿರುವ ಅನೇಕ ಧರ್ಮಗುರುಗಳು, ಮುಖಂಡರಿಗೆ ಭಾಷಣ ಮಾಡಲು, ಧರ್ಮ ಪ್ರಚಾರ ಮಾಡಲು ಅನುಮತಿ ನೀಡಲಾಗಿದೆ. ಇದು ಕಾನೂನು ಬಾಹಿರ. ಈ ನೆಲದ ಕಾನೂನು ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ಇಂತಹ ಕಾರ್ಯಕ್ರಮದಲ್ಲಿ ಯಾವುದೇ ವಿದೇಶಿಗರು ಬಂದು ಭಾಷಣ, ಧರ್ಮ ಪ್ರಚಾರ ಮಾಡಲು ಅವಕಾಶವಿಲ್ಲ. ಇಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದೆ. ಮತ್ತೊಂದೆಡೆ ಈ ಸಮ್ಮೇಳನದ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಜಮೀರ್ ಅಹಮದ್ ಖಾನ್, ಈ ಕಾರ್ಯಕ್ರಮದಲ್ಲಿ ಯಾವುದೇ ಧರ್ಮಗುರುಗಳು ಭಾಗವಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
-ಬಾಕ್ಸ್-
ಭಾರತೀಯ ವೀಸಾ ನಿಯಮಗಳು ಹಾಗೂ ಫಾರಿನರ್ಸ್ ಆಕ್ಟ್ ಅನ್ವಯ ಭಾರತಕ್ಕೆ ಧರ್ಮಭೋಧನೆಗೆ ಧರ್ಮ ಪ್ರಚಾರಕ್ಕೆ ಅಡ್ಡ ಧಾರ್ಮಿಕ ಚಟುವಟಿಕೆಗಳಲ್ಲಿ ಯಾವುದೇ ವೀಸಾ ಪಡೆದರೂ ಭಾಗವಹಿಸುವಂತಿಲ್ಲ. ನಿಜಾಮುದ್ದೀನ್ ಜಮಾತ್ ಘಟನೆಯ ಬಳಿಕ ಬೆಂಗಳೂರು ನಗರದಲ್ಲಿ ಬೆಂಗಳೂರು ಪೊಲೀಸರು 19 ವಿದೇಶಿಯರನ್ನು ಬಂಧಿಸಿದ್ದಾರೆ.
ನಿಯಮ ಉಲ್ಲಂಘನೆ ಮಾಡಿದ್ರೆ ಕ್ರಮ: ಪರಂ
ನಗರದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ವಿದೇಶಿಗರು ಬಂದು ಧಾರ್ಮಿಕ ಪ್ರಚಾರ ಮಾಡೋದಕ್ಕೆ ನಮ್ಮ ಕಾನೂನಲ್ಲಿ ಅವಕಾಶ ಇಲ್ಲ. ಇದನ್ನ ನಿಯಂತ್ರಣ ಮಾಡಬೇಕು ಅಂತ ಆಯೋಜಕರಿಗೆ ಸೂಚಿಸಲಾಗಿದೆ. ಕಾರ್ಯಕ್ರಮದಲ್ಲಿ ಯಾವುದೇ ವಿದೇಶಿಗರ ಭಾಷಣಕ್ಕೆ ಅವಕಾಶ ನೀಡಬಾರದು ಅಂತ ತಿಳಿಸಲಾಗಿದೆ. ಕಾರ್ಯಕ್ರಮದಲ್ಲಿ ಏನಾದ್ರು ನಿಯಮಗಳ ಉಲ್ಲಂಘನೆ ಮಾಡಿದರೆ ನಿಗಾ ಇಡುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ.