ಹೊನ್ನಾವರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಅಂಚಿನ ಗೂಡಂಗಡಿಗಳನ್ನು ತೆರವುಗೊಳಿಸುವುದಕ್ಕೆ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದರು.
ಈ ವೇಳೆ ಪಪಂ ಮುಖ್ಯಾಧಿಕಾರಿ ಏಸು ಬೆಂಗಳೂರು, ಅಧ್ಯಕ್ಷ ನಾಗರಾಜ ಭಟ್, ಉಪಾಧ್ಯಕ್ಷ ಸುರೇಶ್ ಹೊನ್ನಾವರ ಗೂಡಂಗಡಿಕಾರರಿಗೆ ವಾಸ್ತವ ವಿಷಯ ತೆರೆದಿಟ್ಟರು. ಗೂಡಂಗಡಿ ಹೆಸರಲ್ಲಿ ಹೊರಗಿನವರು ಅಂಗಡಿ ಇಟ್ಟು ಬಾಡಿಗೆ ಕೊಡುತ್ತಿದ್ದಾರೆ. ಕೆಲವೆಡೆ ಹೆದ್ದಾರಿ ಅಂಚಿಗೆ ಅಂಗಡಿ ತಂದು ಸಂಚಾರಕ್ಕೆ ಅಡಚಣೆ ಆಗಿದೆ. ಇದರಿಂದ ಜನರು ದೂರಿದ್ದಾರೆ. ಇದು ನೈಜ ಅಂಗಡಿಕಾರರಿಗೂ ತೊಂದರೆ ಉಂಟಾಗಿದೆ. ಇದಕ್ಕಾಗಿ ಅಂಗಡಿ ತೆರವು ವಿಚಾರ ಪ್ರಸ್ತಾಪ ಆಗಿದೆ ಎಂದರು.
ನಂತರ ಗೂಡಂಗಡಿಕಾರ ಶ್ರೀರಾಮ ಹೊನ್ನಾವರ ಮಾಧ್ಯಮದವರೊಂದಿಗೆ ಮಾತನಾಡಿ, ಪಟ್ಟಣದಲ್ಲಿ ಟ್ರಾಫಿಕ್ ಆಗುತ್ತಿರುವುದಕ್ಕೆ ಗೂಡಂಗಡಿಕಾರರು ಮಾತ್ರ ಕಾರಣವಲ್ಲ. ದೊಡ್ಡ ದೊಡ್ಡ ಅಂಗಡಿ, ಮಳಿಗೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು ಕಾರಣ. ಬೀದಿ ಅಗಲವಾದರೆ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು.ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಂದೀಪ್ ಪೂಜಾರಿ ಮಾತನಾಡಿ, ಕೋಟಿಗಟ್ಟಲೆ ಹಣ ಇರುವವರ ದೊಡ್ಡ ಕಟ್ಟಡದ ಎದುರು ಅನೇಕ ಗೂಡಂಗಡಿಗಳಿದೆ. ಅಂಥವರ ಕೈವಾಡ ಇರುವ ಹಿನ್ನೆಲೆ ದಬ್ಬಾಳಿಕೆ ಮಾಡಿ ಗೂಡಂಗಡಿಕಾರರ ಅಂಗಡಿ ತೆರವುಗೊಳಿಸುವ ಸಾಧ್ಯತೆ ಇರುವುದರಿಂದ ನಾವು ಪ್ರಶ್ನಿಸಬೇಕಾದ ಅನಿರ್ವಾಯತೆ ಉದ್ಭವಿಸಿದೆ ಎಂದರು.
ಸೂಕ್ತ ಕ್ರಮ: ಐಆರ್‌ಬಿ ಅಧಿಕಾರಿಗಳಿಗೆ ಪತ್ರ ಬರೆದು ಅವರ ಜತೆ ಚರ್ಚೆ ನಡೆಸುತ್ತೇವೆ. ಪಟ್ಟಣದ ಒಳಗೆ ನಿಯಮಾವಳಿ ಪ್ರಕಾರ ಇಲ್ಲದಿರುವ ಗೂಡಂಗಡಿ ತೆರವುಗೊಳಿಸುತ್ತೇವೆ. ಪಟ್ಟಣದ ಟ್ರಾಫಿಕ್ ವ್ಯವಸ್ಥೆಗೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಪಂ ಅಧ್ಯಕ್ಷ ನಾಗರಾಜ ಭಟ್ ತಿಳಿಸಿದರು.
ಅಂಗಡಿ ಸರ್ವೆ: ರಸ್ತೆಬದಿ ಅಂಗಡಿ ಇಡುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಪೊಲೀಸ್ ಠಾಣೆಗೆ ದೂರು ಬಂದಿತ್ತು. ಈ ಬಗ್ಗೆ ಠಾಣೆಯಿಂದ ಪಪಂಗೆ ಪತ್ರ ನೀಡಿದ್ದರು. ನಿಯಮಾವಳಿ ಪ್ರಕಾರ ಇಲ್ಲದ ಹೊಸ ಅಂಗಡಿ ಸರ್ವೆ ನಡೆಸಿ ತೆರವುಗೊಳಿಸುವ ವಿಚಾರ ಇದೆ. ಈ ಬಗ್ಗೆ ಸದ್ಯದಲ್ಲೆ ಸಭೆ ನಡೆಸುತ್ತೇವೆ ಎಂದು ಪಪಂ ಮುಖ್ಯಾಧಿಕಾರಿ ಏಸು ಬೆಂಗಳೂರು ತಿಳಿಸಿದರು.