ಶಿರಹಟ್ಟಿ: ಈಡಿಗ ಮತ್ತು ಉಪ ಪಂಗಡಗಳ ಸರ್ವಾಂಗೀಣ ಅಭಿವೃದ್ಧಿಗೆ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ನಾನು ಸಿಎಂ ಆಗಿದ್ದಾಗ ಗುರುಗಳು ಮನವಿ ಸಲ್ಲಿಸಿದ್ದರು.ಅದರಂತೆ ಅಭಿವೃದ್ಧಿ ನಿಗಮ ಘೋಷಣೆ ಮಾಡಲಾಗಿತ್ತು. ಸಧ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಮುಖ್ಯಮಂತ್ರಿಗಳು ಕೂಡಲೇ ನಿಗಮಕ್ಕೆ ಧನಸಹಾಯ ನೀಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ತಾಲೂಕಿನ ಪರಸಾಪೂರ ಗ್ರಾಮದಲ್ಲಿ ತಾಲೂಕು ಆರ್ಯ ಈಡಿಗ ಸಂಘದ ವತಿಯಿಂದ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನೂತನ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಮೇಲು ಕೀಳು ಎಂಬ ಭಾವನೆಗೆ ಆಸ್ಪದ ನೀಡದೇ ಎಲ್ಲರೂ ಸಮಾನರು ಎಂಬ ಭಾವನೆ ಮೂಡಬೇಕು.ಇದನ್ನೇ ನಾರಾಯಣ ಗುರುಗಳು ಹೇಳಿದ್ದಾರೆ. ಸಮಾನತೆ ಸಾರುವಂತಹ ಪರಿಸ್ಥಿತಿ ಅಂದಿನ ಕಾಲದಲ್ಲಿ ಇತ್ತು. ನಾರಾಯಣ ಗುರುಗಳು ಉನ್ನತ ಆದರ್ಶವನ್ನು ಕೇವಲ ಮಾತುಗಳಲ್ಲಿ ಮಾತ್ರ ಅಲ್ಲ ಅದನ್ನು ಹೇಗೆ ಆಚರಣೆ ಮಾಡಬೇಕು ಎಂಬುದನ್ನು ತೋರಿಸಿದ್ದಾರೆ ಎಂದರು.
ಭಕ್ತಿ ಕ್ರಾಂತಿಗೆ ಹೆಸರಾದ ನಾರಾಯಣ ಗುರುಗಳು ಸಮಾಜದಲ್ಲಿ ಸಮಾನತೆ ನೆಲೆಸುವಂತೆ ಮಾಡಿದ್ದಾರೆ. ಸಮಾನತೆಯನ್ನು ಆ ಕಾಲದಲ್ಲಿ ಸಾಧಿಸುವುದು ಸುಲಭವಾಗಿದ್ದಿಲ್ಲ. ಜಗತ್ತಿನಲ್ಲಿ ಆಗದಂತಹ ಭಕ್ತಿಕ್ರಾಂತಿ ನಮ್ಮ ದೇಶದಲ್ಲಿ ಆಗಿದೆ. ಸಮಾನತೆ ಸಾರುವಂತಹ ಹಲವಾರು ಜನ ತಮ್ಮ ಪ್ರಾಣ ಬಿಡುವಂತಹ ಕಾಲವಿತ್ತು. ಇವತ್ತಿಗೂ ಸಹ ಅಲ್ಲಲ್ಲಿ ಅಸಮಾನತೆ, ಭೇದ- ಭಾವನೆ ಮೇಲು, ಕೀಳು ಅನ್ನುವ ಭಾವ ಹಾಗೂ ಕೆಲ ಸಮುದಾಯ ದೂರಿ ಇಡುವ ವ್ಯವಸ್ಥೆ ನೋಡಿದರೆ ಮನಸ್ಸಿಗೆ ನೋವೆನಿಸುತ್ತಿದೆ. ಇವತ್ತಿನ ೨೧ನೇ ಶತಮಾನದ ಆಧುನಿಕ ಕಲಿಯುಗದಲ್ಲೂ ಕೂಡ ಇಂತಹ ವ್ಯವಸ್ಥೆ ಕಂಡುಬರುತ್ತಿದ್ದು, ಮನಸ್ಸಿಗೆ ವ್ಯತೆ ಆಗುತ್ತಿದೆ ಎಂದರು.
ನಾರಾಯಣ ಗುರು ಮಹಾಸಂಸ್ಥಾನ ನಿಟ್ಟೂರ ಪೀಠದ ರೇಣುಕಾನಂದ ಸ್ವಾಮಿಗಳು ಮಾತನಾಡಿ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಸರ್ವ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಹಿಂದುಳಿದ ಮಠಗಳಿಗೆ ₹೧೯ ಕೋಟಿ ಅನುದಾನ ನೀಡಿದ್ದಾರೆ. ಹಿಂದುಳಿದ ಸಮಾಜ ಮೇಲೆ ಬರಲಿ ಎಂದು ಶ್ರಮಿಸಿದ್ದಾರೆ ಎಂದರು.
ಶಾಸಕ ಚಂದ್ರು ಲಮಾಣಿ ಮಾತನಾಡಿದರು. ಆರ್ಯ ಈಡಿಗ ಸಂಘದ ತಾಲೂಕಾಧ್ಯಕ್ಷ ಶ್ರೀಕಾಂತ ಈಳಗೇರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಸಿ.ಸಿ. ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, ಎಂ.ಎಸ್. ಕರಿಗೌಡ್ರ, ಜಾನು ಲಮಾಣಿ, ಭೀಮಸಿಂಗ್ ರಾಠೋಡ, ಸುಜಾತ ದೊಡ್ಡಮನಿ, ನಾಗರಾಜ ಎಸ್. ಗುತ್ತೇದಾರ, ವೆಂಕಟೇಶ ಈಡಿಗರು, ಪ್ರಕಾಶ ಬೊಮ್ಮನಹಳ್ಳಿ, ರವಿಕುಮಾರ ಹೊಸಪೇಟೆ, ಜಗದೀಶ ಈಳಗೇರ, ಚಂದ್ರಕಾಂತ ಹಾನಗಲ್, ಮಾರುತಿ ಈಳಗೇರ, ಫಕ್ಕೀರೇಶ ಈಳಗೇರ, ಯಮನಪ್ಪ ಈಳಗೇರ, ಪರಶುರಾಮ ಈಳಗೇರ, ಫಾಲಾಕ್ಷಪ್ಪ ಈಳಗೇರ, ಶರಣಪ್ಪ ಈಳಗೇರ, ಕಲ್ಲಪ್ಪ ಈಳಗೇರ, ಆಂಜನೇಯ ಈಳಗೇರ, ಹಾಲಪ್ಪ ಈಳಗೇರ ಇದ್ದರು.