ಜಿಲ್ಲೆಯ ಪ್ರವಾಸೋದ್ಯಮ ಮಾರ್ಗದರ್ಶಿಯ ವೆಬ್‌ಸೈಟ್ ಶೀಘ್ರ ಬಿಡುಗಡೆ: ವೆಂಕಟ್ ರಾಜಾ

KannadaprabhaNewsNetwork |  
Published : Oct 01, 2024, 01:39 AM IST
ಚಿತ್ರ : 30ಎಂಡಿಕೆ3 : ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿದರು.  | Kannada Prabha

ಸಾರಾಂಶ

ವಿವಿಧ ಪ್ರವಾಸಿ ಅಂಶಗಳನ್ನು ಒಳಗೊಂಡ ವೆಬ್‌ಸೈಟ್‌ ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ವಿಶ್ವ ಪ್ರವಾಸೋದ್ಯಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧಿಸಿದಂತೆ ಪ್ರಸಿದ್ಧ ದೇವಾಲಯಗಳು, ಪವಿತ್ರ ಸ್ಥಳಗಳು, ಹೋಟೆಲ್, ಹೋಂಸ್ಟೇ, ರೆಸಾರ್ಟ್, ಜಲಾಶಯ, ಜಲಪಾತ, ಪ್ರೇಕ್ಷಣೀಯ ಸ್ಥಳಗಳು ಹೀಗೆ ವಿವಿಧ ಪ್ರವಾಸಿ ಅಂಶಗಳನ್ನು ಒಳಗೊಂಡ ವೆಬ್‌ಸೈಟ್‌ನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರವಾಸೋದ್ಯಮ ಪಾಲುದಾರರ ಸಹಕಾರದಲ್ಲಿ ನಗರದ ಹೊರವಲಯದ ಆಕ್ಸಿರಿಚ್ ಹೋಟೆಲ್‌ನಲ್ಲಿ ಸೋಮವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯ ಪವಿತ್ರ ಸ್ಥಳವಾದ ತಲಕಾವೇರಿ, ಭಾಗಮಂಡಲ ಹಾಗೂ ಪ್ರವಾಸಿ ಸ್ಥಳವಾದ ಜಲಪಾತಗಳು, ಪ್ರೇಕ್ಷಣೀಯ ಸ್ಥಳಗಳು, ಹೋಟೆಲ್‌ಗಳು ರೆಸಾರ್ಟ್‌ಗಳು, ಸೇರಿದಂತೆ ಹಲವು ಸ್ಥಳಗಳ ಬಗ್ಗೆ ಮಾಹಿತಿ ನೀಡುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಡಿಸೆಂಬರ್‌ನೊಳಗೆ ವೆಬ್‌ಸೈಟ್‌ಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಕೊಡಗು ಜಿಲ್ಲೆಗೆ ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಪ್ರವಾಸಿಗರು ಆಗಮಿಸುತ್ತಾರೆ. ಅವರಿಗೆ ಸರಿಯಾದ ಮಾಹಿತಿ ನೀಡಿದಲ್ಲಿ ಅವರು ಮತ್ತೊಬ್ಬರಿಗೆ ತಿಳಿಸುತ್ತಾರೆ. ಈ ಬಗ್ಗೆ ಅಂತರ್ಜಾಲ ಮೂಲಕ ಮಾಹಿತಿ ಒದಗಿಸಲಾಗುವುದು.

ಜಿಲ್ಲೆಯ ಎಲ್ಲೆಡೆ ಪರಿಸರ ಪ್ರವಾಸೋದ್ಯಮ ನಿರ್ಮಾಣ ಮಾಡಬೇಕು. ಪ್ಲಾಸ್ಟಿಕ್ ಬಳಸದಂತೆ ಸಲಹೆ ಮಾಡಬೇಕು. ಜಿಲ್ಲೆಯ ಪವಿತ್ರ ಸ್ಥಳಗಳು ಸೇರಿದಂತೆ ಪ್ರವಾಸಿ ಸ್ಥಳಗಳಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ಇರಬೇಕು. ಊಟಿ ಹಾಗೂ ತಿರುಪತಿಯಲ್ಲಿ ಪ್ರವಾಸಿ ಹಾಗೂ ಪವಿತ್ರ ಸ್ಥಳದಲ್ಲಿನ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಬೇಕು. ಈ ಸಂಬಂಧ ಆಗಾಗ ಶಿಬಿರ ಏರ್ಪಡಿಸುವ ಮೂಲಕ ಮಾಹಿತಿ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಬಿ.ಆರ್.ನಾಗೇಂದ್ರ ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ವಾರಾಂತ್ಯದಲ್ಲಿ ಜಿಲ್ಲೆಗೆ 1 ಲಕ್ಷ ಜನರು ಭೇಟಿ ನೀಡುತ್ತಾರೆ. ಆದ್ದರಿಂದ ಪರಿಸರ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ಸಂಬಂಧ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ಮಾಡಿದರು.

ತಲಕಾವೇರಿ, ಭಾಗಮಂಡಲ ಕ್ಷೇತ್ರವನ್ನು ಪವಿತ್ರ ಸ್ಥಳವೆಂದು ಪ್ರಕಟಿಸಬೇಕು, ಆ ನಿಟ್ಟಿನಲ್ಲಿ ಪ್ರವಾಸಿಗರಿಗೆ ಮಾಹಿತಿ ದೊರೆಯಬೇಕು. ಪ್ರವಾಸಿಗರ ಜೊತೆ ಸೌಜನ್ಯದಿಂದ ನಡೆದುಕೊಂಡಲ್ಲಿ ಅವರು ಮತ್ತೊಬ್ಬರಿಗೆ ಕೊಡಗಿನ ಮಹತ್ವದ ಬಗ್ಗೆ ಹೇಳುತ್ತಾರೆ. ಆ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಕೋರಿದರು.

ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಮಾತನಾಡಿ ಕೊಡಗು ಜಿಲ್ಲೆಗೆ ಪ್ರತಿ ವರ್ಷ ಸುಮಾರು 47 ರಿಂದ 50 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಾವಿರಾರು ಮಂದಿಗೆ ಉದ್ಯೋಗವನ್ನು ಸೃಷ್ಟಿಸಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಯ ಕಲೆ, ಪರಂಪರೆ ಸಂಪ್ರದಾಯಗಳ ಜೊತೆ ಇಲ್ಲಿನ ಅತಿಥ್ಯಕ್ಕೆ ಪ್ರವಾಸಿಗರು ಹೆಚ್ಚು ಆಕರ್ಷಿತಾರಾಗುತ್ತಾರೆ. ಪ್ರವಾಸೋದ್ಯಮ ಇಲಾಖೆಯ ಅನುದಾನದಿಂದ ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ 2813.9 ಲಕ್ಷ ರು. ಗಳ ಅನುದಾನದಲ್ಲಿ ವಿವಿಧ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯ ನಿರ್ಮಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಅವರು ಸುಸ್ಥಿರ ಪ್ರವಾಸೋದ್ಯಮ ಮತ್ತು ಪ್ರವಾಸೋದ್ಯಮ ಕುರಿತ ಭಿತ್ತಿಪತ್ರ ಬಿಡುಗಡೆ ಮಾಡಿದರು. ‘ಶೂನ್ಯ ತ್ಯಾಜ್ಯ ಪ್ರವಾಸ ಜಾಗೃತಿ’ಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.

ಹೋಂಸ್ಟೇ ಪರವಾನಗಿ ಪತ್ರವನ್ನು ಜಿಲ್ಲಾಧಿಕಾರಿ ಅವರು ವಿತರಿಸಿದರು. ಸ್ವಚ್ಛತಾ ಗ್ರೀನ್ ಲೀಪ್ ರೇಟಿಂಗ್ ಪತ್ರವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ಮೈಸೂರಿನ ಫುಡ್ ಕ್ರಾಪ್ಟ್ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಎಸ್.ಕಣ್ಣನ್ ಅವರು ಜಿಲ್ಲೆಯ ಹೋಂ ಸ್ಟೇಗಳ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಗ್ರೀನ್ ಪಾರ್ಕ್ ಸಂಸ್ಥೆಯ ಎಚ್.ಆರ್.ಜಯರಾಮ್ ಅವರು ಪರಿಸರ ಮತ್ತು ಸುಸ್ಥಿರ ಪ್ರವಾಸ ಕುರಿತು ಮಾತನಾಡಿದರು.

ಟೂರ್ಸ್ ಮತ್ತು ಟ್ರಾವೆಲ್ ಅಸೋಷಿಯೇಷನ್‌ನ ಅಧ್ಯಕ್ಷರಾದ ಕುಪ್ಪಂಡ ವಸಂತ, ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷರಾದ ಅಂಬೆಕಲ್ಲು ನವೀನ್, ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್, ಪ್ರಮುಖರಾದ ಜಿ.ಚಿದ್ವಿಲಾಸ್, ಬಿ.ಜಿ.ಅನಂತಶಯನ, ಅನಿಲ್ ಎಚ್.ಟಿ., ಸಿ.ಜಿ.ಕುಶಾಲಪ್ಪ, ಸೋಮವಾರಪೇಟೆ ಹೋಂ ಸ್ಟೇ ಅಸೋಷಿಯೇಷನ್‌ನ ಅಧ್ಯಕ್ಷರಾದ ಸಿ.ಕೆ.ರೋಹಿತ್, ಹೋಂ ಸ್ಟೇ, ರೆಸಾರ್ಟ್ ಹಾಗೂ ಟ್ರಾವೆಲ್ ಅಸೋಸಿಯೇಷನ್ ಸದಸ್ಯರು ಇತರರು ಪಾಲ್ಗೊಂಡಿದ್ದರು.

ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಸ್ವಾಗತಿಸಿದರು. ಚೋಂದಮ್ಮ ಮತ್ತು ಸ್ವಪ್ನಾ ನಾಡಗೀತೆ ಹಾಡಿದರು. ಕೆ.ಜೆ.ದಿವಾಕರ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು