ಕನ್ನಡಪ್ರಭ ವಾರ್ತೆ ಮಂಡ್ಯ
ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರು ಗಗನಚುಕ್ಕಿ ಜಲಪಾತೋತ್ಸವಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮೈಷುಗರ್ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಡಿ.ಗಂಗಾಧರ್ ಆರೋಪಿಸಿದರು.ಗಗನಚುಕ್ಕಿ ಜಲಪಾತೋತ್ಸವ ಮಂಡ್ಯ ಜಿಲ್ಲೆಯ ಒಂದು ಹೆಮ್ಮೆ. ಜಲಪಾತೋತ್ಸವದಿಂದ ಪ್ರವಾಸಿ ತಾಣದ ಬಗ್ಗೆ ಸರ್ಕಾರದ ಗಮನಸೆಳೆದು ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ. ಆದರೂ ಜಲಪಾತೋತ್ಸವ ವಿರೋಧಿಸುತ್ತಿರುವುದು ಅಸೂಯೆಗೆ ಸಾಕ್ಷಿ ಎಂದು ಸುದ್ದಿಗೋಷ್ಠಿಯಲ್ಲಿ ದೂಷಿಸಿದರು.ಕಳೆದ ವರ್ಷ ಬರದ ಹಿನ್ನೆಲೆಯಲ್ಲಿ ಗಗನಚುಕ್ಕಿ ಜಲಪಾತೋತ್ಸವ ಆರಚಣೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಈ ವರುಣನ ಕೃಪೆಯಿಂದ ಕೆ.ಆರ್.ಎಸ್. ಜಲಾಶಯ ತುಂಬಿದ್ದು, ಆ ಹಿನ್ನೆಲೆಯಲ್ಲಿ ಗಗನಚುಕ್ಕಿ ಜಲಪಾತೋತ್ಸವಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಅದಕ್ಕೆ ಅಡ್ಡಿಪಡಿಸುವುದಾಗಿ ಹೇಳಿರುವ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.ಶಾಸಕ ನರೇಂದ್ರಸ್ವಾಮಿ ನೇತೃತ್ವದಲ್ಲಿ ಜಲಪಾತೋತ್ಸವಕ್ಕೆ ಸಿದ್ದತೆ ನಡೆಸುತ್ತಿರುವ ವೇಳೆ ಜನರಿಂದ ತಿರಸ್ಕೃತಗೊಂಡಿರುವ ಮಾಜಿ ಶಾಸಕರೊಬ್ಬರು ಜಲಪಾತೋತ್ಸವಕ್ಕೆ ಅಡ್ಡಿ ಪಡಿಸಿ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಹೇಳಿದ್ದಾರೆ. ಇದು ನಿಮಗೆ ಶೋಭೆ ತರುವುದಿಲ್ಲ ಎಂದು ಸೂಕ್ಷ್ಮವಾಗಿ ನುಡಿದರು.ನಾಡಿನ ಜನತೆ ಗಗನಚುಕ್ಕಿ ಜಲಪಾತೋತ್ಸವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಬಿಟ್ಟಿ ಪ್ರಚಾರಕ್ಕೆ ಇಂತಹ ಅಸೂಹೆ ಹೇಳಿಕೆಗಳನ್ನು ಬಿಡಿ. ಜಲಪಾತೋತ್ಸವಕ್ಕೆ ಅಡ್ಡಿಪಡಿಸುವುದರಿಂದ ತಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ ಎಂದು ತಿಳಿದುಕೊಂಡಿದ್ದರೆ ಅದು ನಿಮ್ಮ ಮೂರ್ಖತನ ಎಂದು ಲೇವಡಿ ಮಾಡಿದರು. ಕಡೇ ಭಾಗಕ್ಕೆ ನೀರು ತಲುಪಿಸುವ ಕೆಲಸ: ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯ ಕಡೇ ಭಾಗಕ್ಕೆ ನೀರು ಹರಿಸುತ್ತಿಲ್ಲ ಎಂದು ಖುದ್ದು ಶಾಸಕ ನರೇಂದ್ರಸ್ವಾಮಿ ಅವರೇ ಜಿಲ್ಲಾ ಪಂಚಾಯತ್‌ನಲ್ಲಿ ನೀರಾವರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೈತರ ಹಿತ ಕಾಯಲು ರಾಜ್ಯ ಸರ್ಕಾರ ಸದಾ ಸಿದ್ದವಿದೆ ಎಂದು ಹೇಳಿದರು.ತಮ್ಮ ವೈಯಕ್ತಿಕ ಹಿತಾಸಕ್ತಿಗೋಸ್ಕರ ಜಿಲ್ಲೆಯ ಹೆಮ್ಮೆಯ ಪ್ರತೀಕವಾಗಿರುವ ಜಲಪಾತೋತ್ಸವಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ತಮ್ಮ ಸ್ವಾರ್ಥಕ್ಕಾಗಿ ಅಗ್ಗದ ಪ್ರಚಾರ ಬಿಡಿ, ಒಳ್ಳೆಯ ಕೆಲಸಗಳಿಗೆ ಸಲಹೆ ಸಹಕಾರ ನೀಡಿ. ಅದನ್ನು ನಾವೂ ಸ್ವೀಕರಿಸುತ್ತೇವೆ. ಅದನ್ನು ಬಿಟ್ಟು ಈ ರೀತಿಯ ಉದ್ಧಟತನದ ಪ್ರದರ್ಶನ ಬೇಡ ಎಂದು ಸಲಹೆ ನೀಡಿದರು. ಈಗಾಗಲೇ ಕಳೆದೊಂದು ತಿಂಗಳಿಂದ ನಿರಂತರವಾಗಿ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಕೆರೆ ಕಟ್ಟೆಗಳನ್ನು ತುಂಬಿಸಲಾಗುತ್ತಿದೆ. ಮಾಜಿ ಶಾಸಕ ಡಾ.ಕೆ.ಅನ್ನದಾನಿ ಕೈಯಲ್ಲಿ ಹೇಳಿಸಿಕೊಂಡು ಮಾಡುವ ಪ್ರಮೇಯ ಬಂದಿಲ್ಲ. ಮಾಜಿ ಶಾಸಕ ಡಾ.ಕೆ.ಅನ್ನದಾನಿಗೆ ಯಾವ ನೈತಿಕತೆ ಇದೆ ಎಂದು ಹರಿಹಾಯ್ದರು. ವಿ.ಸಿ.ನಾಲೆ ಅಚ್ಚುಕಟ್ಟು ಪ್ರದೇಶದಲ್ಲಿ ನಾಲಾ ಆಧುನೀಕರಣ ನಡೆಯುತ್ತಿದೆ. ಸಂಪೂರ್ಣ ಕಾಮಗಾರಿಗೆ ಡಿಸೆಂಬರ್‌ವರೆಗೆ ಕಾಲಾವಕಾಶ ಬೇಕು. ರೈತರಿಗೆ ತೊಂದರೆಯಾಗಬಾರದು ಎಂದು ನಾಲೆಗಳಿಗೆ ನೀರು ಹರಿಸಲಾಗಿದೆ. ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದರು. ಖಾಸಗಿ ಕಾರ್ಖಾನೆಗಳು ತಮ್ಮ ವ್ಯಾಪ್ತಿಯ ಕಬ್ಬನ್ನು ಮಾತ್ರ ಅರೆಯಬೇಕು. ತಮ್ಮ ವ್ಯಾಪ್ತಿಯ ಕಬ್ಬನ್ನು ಉಳಿಸಿಕೊಂಡು ಮೈಷುಗರ್ ಕಬ್ಬನ್ನು ಕಟಾವು ಮಾಡಲು ಮುಂದಾಗಿರುವುದು ಸರಿಯಲ್ಲ. ಮೈಶುಗರ್ ಕಾರ್ಖಾನೆಯಲ್ಲಿ ೨.೫೦ ಲಕ್ಷ ಟನ್ ಕಬ್ಬು ಅರೆಯುತ್ತೇವೆ. ಈಗಾಗಲೇ ೬೧ ಸಾವಿರ ಟನ್ ಕಬ್ಬು ಅರೆಯಲಾಗಿದೆ. ಕಬ್ಬು ಕಟಾವಿನಲ್ಲಿ ಯಾವುದೇ ರಾಜಿ ಇಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ನಹೀಂ, ನಗರಸಭೆ ಸದಸ್ಯ ಶ್ರೀಧರ್, ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ, ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ವಿಜಯಕುಮಾರ್ ಹಾಗೂ ಚಂದಗಾಲು ಹೆಚ್.ಬಿ.ವಿಜಯ್ ಕುಮಾರ್ ಹಾಜರಿದ್ದರು.