ಕನ್ನಡಪ್ರಭ ವಾರ್ತೆ ಹುಕ್ಕೇರಿ
ಈ ಭಾಗದ ರೈತರ ಕಲ್ಪವೃಕ್ಷ ಎನಿಸಿರುವ ಹುಕ್ಕೇರಿ ತಾಲೂಕಿನ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಆಡಳಿತ ಮಂಡಳಿ ಲೀಜ್ ಮೇಲೆ ನೀಡಲು ಮುಂದಾಗಿದೆ ಎಂದು ಮಾಜಿ ಸಚಿವ ಎ.ಬಿ. ಪಾಟೀಲ, ಶಶಿಕಾಂತ ನಾಯಿಕ ಆರೋಪಿಸಿದರು.ಪಟ್ಟಣದಲ್ಲಿ ಗುರುವಾರ ರೈತರ ಸಭೆ ನಡೆಸಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿ ತತ್ವದಲ್ಲಿ ಸ್ಥಾಪನೆಯಾಗಿರುವ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪ್ರಸ್ತುತ ಆಡಳಿತ ಮಂಡಳಿ ದಿವಾಳಿ ಅಂಚಿನಲ್ಲಿ ತಂದು ನಿಲ್ಲಿಸಿದೆ ಎಂದು ದೂರಿದರು.
30 ವರ್ಷಗಳ ಹಿಂದೆ ಈ ಕಾರ್ಖಾನೆ ಆರ್ಥಿಕವಾಗಿ ಸದೃಢವಾಗಿತ್ತು. ಆದರೆ, ಈಗ ಈ ಕಾರ್ಖಾನೆಯ ನೌಕರರು, ಪೀಠೋಪಕರಣಗಳು, ಮೊಲ್ಯಾಸಿಸ್, ಕಾಂಪೋಸ್ಟ್ ಗೊಬ್ಬರಗಳು ಕತ್ತಿ ಕುಟುಂಬದ ಒಡೆತನದ ವಿಶ್ವರಾಜ ಶುಗರ್ಸ್ ಕಾರ್ಖಾನೆಗೆ ಬಳಸಿಕೊಳ್ಳಲಾಗುತ್ತಿದೆ. ಕಾರಣ ರೈತರು ಜಾಗೃತರಾಗಿ ಹೋರಾಟ ನಡೆಸಬೇಕು. ದಿ.ಅಪ್ಪಣಗೌಡ ಪಾಟೀಲರು ಸ್ಥಾಪಿಸಿದ ಹಿರಣ್ಯಕೇಶಿ ಕಾರ್ಖಾನೆಯನ್ನು ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.1995 ರಲ್ಲಿ ಕೇವಲ 70 ಕೋಟಿ ಸಾಲವಿದ್ದ ಕಾರ್ಖಾನೆ ಇಂದು 812 ಕೋಟಿ ಸಾಲದಿಂದ ತತ್ತರಿಸಿ ಕಬ್ಬು ಪೂರೈಸಿದ ರೈತರಿಗೆ ಬಿಲ್ ಪಾವತಿಸಲಾಗದ ಪರಿಸ್ಥಿತಿಯಲ್ಲಿದೆ. ಆಡಳಿತ ಮಂಡಳಿ ಸದಸ್ಯರು, ನೌಕರರು, ಕಾರ್ಖಾನೆಯ ಪ್ರತಿ ಕಟ್ಟಡಗಳ ಮೇಲೆ ಸಾಲ ತೆಗೆಯಲಾಗಿದೆ. ಕಾರ್ಖಾನೆಯ ಕಾಲೋನಿಗಳು ರಿಪೇರಿಯಿಲ್ಲದೆ ದನಗಳ ಕೊಟ್ಟಿಗೆಯಾಗಿವೆ ಎಂದು ಅವರು ಆಕ್ರೋಶ ಹೊರಹಾಕಿದರು.
ಇದೇ ತಿಂಗಳು ಸೆ.23 ರಂದು ನಡೆಯುವ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ರೈತರು ವಿರೋಧ ವ್ಯಕ್ತಪಡಿಸಿ ಹಿರಣ್ಯಕೇಶಿ ಕಾರ್ಖಾನೆ ಬಚಾವೋ ಆಂದೋಲನ ಮಾಡಬೇಕು. ಇದಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಮಹಾರಾಷ್ಟ್ರ ರೈತ ಸಂಘಟನೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಗಡ್ಡೆನ್ನವರ, ಮುಖಂಡರಾದ ವಿಜಯ ರವದಿ, ವಿರೂಪಾಕ್ಷಿ ಮರೆಣ್ಣವರ, ಸಿದ್ರಾಮ ಖೋತ, ಪ್ರಕಾಶ ಮೈಲಾಖೆ, ಕೆ.ಬಿ. ಪಾಟೀಲ, ರೇಖಾ ಚಿಕ್ಕೋಡಿ, ಆನಂದ ಝಿರಲಿ, ಭೀಮಗೌಡ ಅಮ್ಮಣಗಿ, ಸಲೀಂ ಕಳಾವಂತ, ಕುಮಾರ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.