ಗದಗ: ತಾಲೂಕಿನ ನಾಗಸಮುದ್ರ ಮತ್ತು ಹಿರೇಕೊಪ್ಪ ಗ್ರಾಮಗಳ ಸರಹದ್ದಿನ ಪಾಲಾ, ಬಾದಾಮಿ ರಾಜ್ಯ ಹೆದ್ದಾರಿಯ ನಿಷೇಧಿತ ಪ್ರದೇಶದಲ್ಲಿ ನಿಯಮಬಾಹಿರವಾಗಿ ಹನಿ ನೀರಾವರಿ ಯೋಜನೆಯ ಪೈಪ್‌ಲೈನ್ ಅಳವಡಿಸಲು ಅನುಮತಿ ನೀಡಿದ ಲೋಕೋಪಯೋಗಿ ಇಲಾಖೆಯ ವಿರುದ್ಧ ರೈತ ಸಂಘ ಹಾಗೂ ಕರವೇ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಇಲಾಖೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಈ ಅಕ್ರಮ ಕಾಮಗಾರಿ ನಿಲ್ಲಿಸದಿದ್ದರೆ ಗಂಭೀರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ ಸುಂಕದ ಮಾತನಾಡಿ, ಅಧಿಕಾರಿಗಳು ಗುತ್ತಿಗೆದಾರರ ಕೈಗೊಂಬೆಯಾಗಿದ್ದಾರೆ ಎಂದು ಖಂಡಿಸಿದರು. ಕರವೇ(ಶಿವರಾಮೇಗೌಡ್ರ ಬಣ) ಜಿಲ್ಲಾಧ್ಯಕ್ಷ ಮಂಜುನಾಥ ಪರ್ವತಗೌಡ್ರ ಮಾತನಾಡಿ, ರಸ್ತೆ ನಿಯಮಗಳನ್ನು ಗಾಳಿಗೆ ತೂರಿ ನೀಡಿರುವ ಅಕ್ರಮ ಅನುಮತಿಯನ್ನು ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ರಾಜು ಭಾಳಿಕಾಯಿ, ಹಿರಿಯರಾದ ಸಂಗಣ್ಣಾ ದಂಡಿನ, ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಮುಳ್ಳಾಳ ಸೇರಿದಂತೆ ಕುರ್ತಕೋಟಿ, ಬೆಂತೂರ, ಹರ್ತಿ, ಕಳಸಾಪೂರ, ಚಿಕ್ಕಹಂದಿಗೋಳ, ಬೆನಕೊಪ್ಪ, ನಾಗಸಮುದ್ರ, ಹಿರೇಕೊಪ್ಪ ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು.ನೇಕಾರರಿಂದ ಜಿಲ್ಲಾಧಿಕಾರಿಗೆ ಮನವಿ
ಗದಗ: ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ಮಾಡುವುದರಿಂದ ನೇಕಾರರ ಬದುಕು ಅವನತಿಯ ಅಂಚಿಗೆ ಸಾಗಲಿದ್ದು, ತಕ್ಷಣವೇ ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ರಾಜ್ಯ ನೇಕಾರ ಸೇವಾ ಸಂಘ ಹಾಗೂ ಗದಗ-ಬೆಟಗೇರಿಯ ನೇಕಾರರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ನೇಕಾರ ಮುಖಂಡರು ಮಾತನಾಡಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ನೇಕಾರ ಸಮುದಾಯ ಇಂದು ಪ್ರತಿಯೊಂದು ಸೌಲಭ್ಯಕ್ಕೂ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ವಲಯವನ್ನು ಖಾಸಗಿ ಟಾಟಾ ಕಂಪನಿಗಳಿಗೆ ಒಪ್ಪಿಸುತ್ತಿರುವುದಕ್ಕೆ ರಾಜ್ಯದ ನೇಕಾರರು, ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ವಿದ್ಯುತ್ ಖಾಸಗೀಕರಣದಿಂದ ನೇಕಾರರಿಗೆ ಆರ್ಥಿಕವಾಗಿ ಭಾರಿ ಹಿನ್ನಡೆಯಾಗಲಿದ್ದು, ಸರ್ಕಾರ ಈ ಪ್ರಕ್ರಿಯೆಯನ್ನು ಇಲ್ಲಿಗೇ ಮೊಟಕುಗೊಳಿಸಿ ನೇಕಾರರ ಹಿತ ಕಾಯಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ರಾಜು ದಡಿ, ರಮೇಶ್ ಹತ್ತಿಕಾಳ, ಮಾಧುಸ ಮೆರವಾಡೆ, ಕೃಷ್ಣಾ ಕೊಪ್ಪರದ, ಬಸವರಾಜ್ ಕರಿ, ದೇವರಾಜ ಐಲ, ಸೋಮು ಮೆರವಾಡೆ, ಕಾಶಿನಾಥ್ ಹೊಸಮನಿ, ಈರಣ್ಣ ಕೋಣ ಹಾಗೂ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಪದಾಧಿಕಾರಿಗಳು ಮತ್ತು ಅವಳಿ ನಗರದ ನೇಕಾರರು ಉಪಸ್ಥಿತರಿದ್ದರು.