ಭಟ್ಕಳ: ತಾಲೂಕಿನ ಹೆಬಳೆ ಗ್ರಾಪಂನ್ನು ಭಟ್ಕಳ ನಗರಸಭೆಗೆ ಸೇರಿಸುವ ರಾಜ್ಯ ಸಚಿವ ಸಂಪುಟದ ನಿರ್ಧಾರ ವಿರೋಧಿಸಿ ಸೋಮವಾರ ಹೆಬಳೆ ಗ್ರಾಮಸ್ಥರು, ಗ್ರಾಪಂ ಸದಸ್ಯರು ತಹಸೀಲ್ದಾರಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಭಟ್ಕಳ ಪುರಸಭೆಯನ್ನು ನಗರ ಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯಲ್ಲಿ ಹೆಬಳೆ ಗ್ರಾಪಂನ್ನು ಸೇರಿಸಲಾಗಿದೆ. ಹೆಬಳೆ ಗ್ರಾಪಂ ವ್ಯಾಪ್ತಿಯಲ್ಲಿ ಈಗಲೂ ಶೇ.50ಕ್ಕಿಂತ ಹೆಚ್ಚು ಕೃಷಿ ಜಮೀನನ್ನು ಹೊಂದಿದ್ದು, ಗ್ರಾಮಸ್ಥರು ಕೃಷಿ ಕೂಲಿ ಮತ್ತು ಮೀನುಗಾರಿಕಾ ಕಾರ್ಮಿಕರಾಗಿರುತ್ತಾರೆ. ಇದು ಪಟ್ಟಣದಿಂದ ಅಂದಾಜು 9 ಕಿ.ಮೀ. ದೂರದಲ್ಲಿದೆ. ನಗರಸಭೆಗೆ ಹೆಬಳೆ ಗ್ರಾಮವನ್ನು ಸೇರಿಸುವುದರಿಂದ ಸಾವಿರಾರು ವಿದ್ಯಾರ್ಥಿಗಳ ಗ್ರಾಮೀಣ ಕೃಪಾಂಕವೂ ರದ್ದಾಗಿ ಅವರ ಶಿಕ್ಷಣ ಮೇಲೆ ಪ್ರಭಾವ ಬೀರಲಿದೆ. ಬಡಕಾರ್ಮಿಕರ ಮನೆ ತೆರಿಗೆ ವಿದ್ಯುತ್, ನೀರು ಮತ್ತು ಇನ್ನಿತರ ಕರಗಳು ದುಪ್ಪಟ್ಟಾಗಿ ಬದುಕು ದುಸ್ಥರವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಭಟ್ಕಳ ಪುರಸಭೆಗೆ ಕೂದಳತೆಯ ದೂರದಲ್ಲಿರುವ ಗ್ರಾಪಂನ್ನು ಬಿಟ್ಟು ಹೆಬಳೆ ಗ್ರಾಪಂ ಸಾಮಾನ್ಯ ಸಭೆಯ ತೀರ್ಮಾನದ ವಿರುದ್ಧವಾಗಿ ಹಾಗೂ ಸ್ಥಳೀಯ ಜನಾಭಿಪ್ರಾಯದ ವಿರುದ್ಧವಾಗಿ ನಗರಸಭೆಗೆ ಸೇರಿಸಿರುವ ಪ್ರಸ್ತಾವನೆಗೆ ಸಾರ್ವಜನಿಕರ ವಿರೋಧವಿದೆ ಎಂದು ತಿಳಿಸಲಾಗಿದೆ. ಮನವಿಯನ್ನು ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹೆಬಳೆ ಗ್ರಾಪಂ ಸದಸ್ಯ ಹಾಗೂ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಡಿಗ, ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ , ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ, ಹೆಬಳೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಭಟ್ಕಳ ಹೆಬಳೆ ಗ್ರಾಪಂನ್ನು ಭಟ್ಕಳ ನಗರಸಭೆಗೆ ಸೇರ್ಪಡೆಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.