ಬೇಡ್ತಿ, ಅಘನಾಶಿನಿ ನದಿ ಜೋಡಣೆಗೆ ವಿರೋಧ

KannadaprabhaNewsNetwork |  
Published : Oct 17, 2025, 01:02 AM IST
16ಎಸ್.ಆರ್‌.ಎಸ್‌2ಪೊಟೋ1 (ಸಹಸ್ರಲಿಂಗ ಉಳಿಸಿ, ಶಾಲ್ಮಲಾ ಸಂರಕ್ಷಿಸಿ ರ್ಯಾಲಿ-ಜಾಗೃತಿ ಸಭೆಯಲ್ಲಿ ಪರಿಸರ ಬರಹಗಾರ ಶಿವಾನಂದ ಕಳವೆ ಮಾತನಾಡಿದರು.)16ಎಸ್.ಆರ್‌.ಎಸ್‌2ಪೊಟೋ2 (ಅಘನಾಶಿನಿ-ಬೇಡ್ತಿ ನದಿ ಯೋಜನೆ ವಿರೋಧಿಸಿ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಹಾಗೂ ಅರಣ್ಯ ಇಲಾಖೆಗೆ ಶಿವಾನಂದ ನಿಂಗಾಣಿ ಮೂಲಕ ಮನವಿ ಸಲ್ಲಿಸಲಾಯಿತು.)16ಎಸ್.ಆರ್.ಎಸ್‌3ಪೊಟೋ3 (ಅಘನಾಶಿನಿ-ಬೇಡ್ತಿ ನದಿ ಯೋಜನೆ ವಿರೋಧಿಸಿ ಸಭೆಯಲ್ಲಿ ಮಹಿಳೆಯರು ಪಾಲ್ಗೊಂಡರು.)16ಎಸ್.ಆರ್.ಎಸ್‌3ಪೊಟೋ4 (ಅಘನಾಶಿನಿ-ಬೇಡ್ತಿ ನದಿ ಯೋಜನೆ ವಿರೋಧಿಸಿ ಬೈಕ್‌ ರ‍್ಯಾಲಿ ನಡೆಯಿತು.) | Kannada Prabha

ಸಾರಾಂಶ

ಬೇಡ್ತಿ, ಅಘನಾಶಿನಿ ನದಿ ಜೋಡಣೆ ವಿರೋಧಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದಿಂದ ತಾಲೂಕಿನ ಸಹಸ್ರಲಿಂಗದಲ್ಲಿ ಹಮ್ಮಿಕೊಂಡ ಸಹಸ್ರಲಿಂಗ ಉಳಿಸಿ, ಶಾಲ್ಮಲಾ ಸಂರಕ್ಷಿಸಿ ರ್‍ಯಾಲಿ

  ಶಿರಸಿ :  ಬೇಡ್ತಿ, ಅಘನಾಶಿನಿ ನದಿ ಜೋಡಣೆ ವಿರೋಧಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದಿಂದ ತಾಲೂಕಿನ ಸಹಸ್ರಲಿಂಗದಲ್ಲಿ ಹಮ್ಮಿಕೊಂಡ ಸಹಸ್ರಲಿಂಗ ಉಳಿಸಿ, ಶಾಲ್ಮಲಾ ಸಂರಕ್ಷಿಸಿ ರ್‍ಯಾಲಿ-ಜಾಗೃತಿ ಸಭೆಯು ಜನಾಂದೋಲನವಾಗಿ ರೂಪಗೊಂಡು ಪರಿಸರ ಉಳಿಸಲು ಸರಸರ ಬನ್ನಿ, ಕೊಟ್ಟು ಕೊಟ್ಟು ಸಾಕಾಯ್ತು ಬಿಟ್ಟು ಬಿಡಿ ನಮ್ಮನ್ನು, ಪಶ್ಚಿಮ ಘಟ್ಟ ನಮ್ಮ ಉಸಿರು ಎಂಬ ಘೋಷಣೆ ಕೂಗಿ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ಶಾಲ್ಮಲಾ ವರದಾ ಜೋಡಣೆ ಬೇಡ, ಸಹಸ್ರಲಿಂಗ ಉಳಿಸಿ, ದೊಡ್ಡ ದೊಡ್ಡ ಯೋಜನೆ ಬೇಡ. ಇಲ್ಲಿಯ ನೀರು ಇಲ್ಲಿಯೇ ಬಳಸಿ, ನಮ್ಮ ನೀರು ನಮ್ಮ ಹಕ್ಕು, ಪಶ್ಚಿಮ ಘಟ್ಟ ಬದುಕಿನ ಉಸಿರು ಎಂಬ ಘೋಷವಾಕ್ಯದೊಂದಿಗೆ ಸೋಂದಾ, ಸದಾಶಿವಳ್ಳಿ, ಭೈರುಂಬೆ ಗ್ರಾಪಂ ವ್ಯಾಪ್ತಿಯಿಂದ ನೂರಾರು ಸಾರ್ವಜನಿಕರು ಬೈಕ್‌ ಮೇಲೆ ಹೊರಟು ಸಹಸ್ರಲಿಂಗದಲ್ಲಿ ನಡೆದ ಜಾಗೃತಿ ಸಭೆಯಲ್ಲಿ ಪಾಲ್ಗೊಂಡರು.

ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಬೇಡ್ತಿ-ಅಘನಾಶಿನಿ ನದಿ ಜೋಡಣೆ ವಿರೋಧಿಸಿ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ಜನಾಂದೋಲನ ರೂಪಿಸಲಾಗಿದೆ. ಬೆಂಗಳೂರಿನಲ್ಲಿ ಅಧಿಕಾರಿಗಳನ್ನು ಭೇಟಿಯಾದಾಗ ಯೋಜನೆ ತಯಾರಿ ನಡೆದಿದೆ ಎಂಬುದನ್ನು ಖಚಿತಪಡಿಸಿಕೊಂಡು ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ಮಠದಲ್ಲಿ ವಿಶೇಷ ಸಭೆ ನಡೆಸಲಾಗಿತ್ತು.‌ ಹೋರಾಟದ ಕುರಿತು ಅಲ್ಲಿ ಅಧಿಕೃತ ನಿರ್ಣಯ ತೆಗೆದುಕೊಂಡಿದ್ದೇವೆ. ಜನಸಂಪನ್ಮೂಲ ಇಲಾಖೆಯು ರೂಪಿಸಿದ ನೀತಿಯಿಂದ ಯಾರಿಗೂ ಉಪಯೋಗವಿಲ್ಲ. ಹಾವೇರಿ ಜಿಲ್ಲೆಯಲ್ಲಿ ಯೋಜನೆ ಬೇಕು ಎಂಬ ಸಭೆ ನಡೆದಿದೆ. ಅಘನಾಶಿನಿ-ವೇದಾವತಿ ನದಿ ಯೋಜನೆಗೂ ತಯಾರಿ ಆಗುತ್ತಿದೆ. ಯಲ್ಲಾಪುರ, ಶಿರಸಿ, ಬೇಡ್ತಿ, ವರದಾ, ಅಘನಾಶಿನಿ ಸಿದ್ದಾಪುರ ಭಾಗದಲ್ಲಿ ಎಲ್ಲಿ ಪೈಪ್ ಲೈನ್, ವಿದ್ಯುತ್ ಲೈನ್ ಬಗ್ಗೆ ಮಾಹಿತಿ ಇಲ್ಲ. ₹18 ಸಾವಿರ ಕೋಟಿ ಯೋಜನೆಗೆ ಹಣ ಬಿಡುಗಡೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅರಣ್ಯ ಇಲಾಖೆಯ ಒಪ್ಪಿಗೆ ಸಿಕ್ಕಿಲ್ಲ. ಈಗ ನಾವು ಆರಂಭಿಕ ಹಂತದಲ್ಲಿದ್ದೇವೆ.‌ ಸರ್ಕಾರದ ಮುಂದೆ ವೈಜ್ಞಾನಿಕ ಸಂಗತಿ ಮಂಡಿಸಬೇಕಾಗಿದೆ. ಆದ್ದರಿಂದ ವಿಜ್ಞಾನಿಗಳ ಸಮ್ಮೇಳನ ಮಾಡುತ್ತೇವೆ. ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಅರ್ಧದಷ್ಟು ಹಣ ನೀರಾವರಿ ಯೋಜನೆಗೆ ಮೀಸಲಿಡಲಾಗುತ್ತಿದೆ. ಎತ್ತಿನಹೊಳೆ ಯೋಜನೆಯಿಂದ ಯಾರಿಗೂ ಉಪಯೋಗವಾಗಿಲ್ಲ. ಕಳೆದ 50 ವರ್ಷಗಳಲ್ಲಿ ನೀರಾವರಿ ಯೋಜನೆಯಿಂದ ಆಗಿರುವ ಅನುಕೂಲವನ್ನು ನೀರಾವರಿ ಇಲಾಖೆಯ ಮುಖ್ಯಸ್ಥರು ಅಧಿಕೃತ ಪಟ್ಟಿ ಬಿಡುಗಡೆಗೊಳಿಸಬೇಕು ಎಂದು ಸವಾಲೆಸೆದರು.

ಪರಿಸರ ಬರಹಗಾರ ಶಿವಾನಂದ ಕಳವೆ ಮಾತನಾಡಿ, ಮಲೆನಾಡಿಗೆ ನೀರಾವರಿ ಯೋಜನೆ ಅಗತ್ಯವಿಲ್ಲ. ಕಾಡನ್ನು ಉಳಿಸುವುದಕ್ಕೆ ದೊಡ್ಡ ಕೊಡುಗೆ ನೀಡಿದ್ದೇವೆ. ಸರ್ಕಾರಕ್ಕೆ ಕಾಡು ಉಳಿಸುವ ಕಾಳಜಿಯಿಲ್ಲ. ನೀರು ತೆಗೆದುಕೊಂಡು ಹೋಗುವ ತರಾತುರಿಯಲ್ಲಿದೆ. ದೊಡ್ಡ ಮಾದರಿಯಲ್ಲಿ ಸರ್ಕಾರ ಹೆಚ್ಚು ಗಮನವಹಿಸುತ್ತದೆ. ಅದರಲ್ಲಿ ಲಾಭ ಹೆಚ್ಚಿದೆ. ಸರ್ಕಾರ ಕೆರೆ ಅಭಿವೃದ್ಧಿ ಬಗ್ಗೆ ಗಮನವಹಿಸುತ್ತಿಲ್ಲ. ಕಾಡು ಉಳಿಸಿಕೊಳ್ಳುವ ಜತೆ ನದಿ ಉಳಿಸಿಕೊಳ್ಳಬೇಕು. ಖಾಲಿ ಪೈಪ್ ಯೋಜನೆಗಳ ಬಗ್ಗೆ ಆಸಕ್ತಿ ವಹಿಸುತ್ತೇವೆ. ಹೋರಾಟ ನಿರಂತರವಾಗಿದ್ದು, ಜಿಲ್ಲೆಯ ಕೆರೆಯ ಪುನರುಜ್ಜೀವನ ಮಾಡಲು ಸರ್ಕಾರ ಲಕ್ಷ್ಯವಹಿಸಬೇಕು ಎಂದು ಆಗ್ರಹಿಸಿದರು.

ಅನಂತ ಭಟ್ಟ ಹುಳಗೋಳ ಸ್ವಾಗತಿಸಿ ಮಾತನಾಡಿದರು.

ಅಘನಾಶಿನಿ-ಬೇಡ್ತಿ ನದಿ ಯೋಜನೆ ವಿರೋಧಿಸಿ ರಾಜ್ಯ ಸರ್ಕಾರಕ್ಕೆ ಹಾಗೂ ಅರಣ್ಯ ಇಲಾಖೆಗೆ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದಿಂದ ಖಂಡನಾ ಮನವಿಯನ್ನು ಹುಲೇಕಲ್ ವಲಯಾರಣ್ಯಾಧಿಕಾರಿ ಶಿವಾನಂದ ನಿಂಗಾಣಿ ಅವರ ಮೂಲಕ ಮನವಿ ಸಲ್ಲಿಸಲಾಯಿತು.

ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ಅಧ್ಯಕ್ಷತೆ ವಹಿಸಿದ್ದರು. ವಿಷಯ ತಜ್ಞ ಕೇಶವ ಕೊರ್ಸೆ, ಸಮಿತಿಯ ಪ್ರಧಾನ ಸಂಚಾಲಕ ಆರ್.ಎಸ್.ಹೆಗಡೆ ಭೈರುಂಬೆ, ಸೋಂದಾ ಗ್ರಾಪಂ ಅಧ್ಯಕ್ಷ ರಾಮಣ್ಣ ಹೊಸಗದ್ದೆ, ಭೈರುಂಬೆ ಗ್ರಾಪಂ ಸದಸ್ಯ ನಾಗಪ್ಪ ಪಟಗಾರ ಗುಂಡಿಗದ್ದೆ, ಸದಸ್ಯ ಕಿರಣ ಭಟ್ಟ ಭೈರುಂಬೆ ಮತ್ತಿತರರು ಇದ್ದರು. ಪರಿಸರ ಗೀತೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭಿಸಲಾಯಿತು. ಸುರೇಶ ಹಕ್ಕಿಮನೆ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌
ನಟ ಯಶ್‌ಗೆ ಜಾರಿಯಾಗಿದ್ದ ಆದಾಯ ತೆರಿಗೆ ನೋಟಿಸ್‌ ರದ್ದು