ಮಂಗಳೂರು ವಿವಿ ಜೊತೆ ಕೊಡಗು ವಿವಿ ವಿಲೀನಕ್ಕೆ ವಿರೋಧ

KannadaprabhaNewsNetwork | Published : Feb 17, 2025 12:34 AM

ಸಾರಾಂಶ

ಕೊಡಗು ವಿಶ್ವವಿದ್ಯಾಲಯವನ್ನು ಮತ್ತೆ ಮಂಗಳೂರು ವಿವಿ ಜೊತೆ ವಿಲೀನಗೊಳಿಸುವ ಪ್ರಕ್ರಿಯೆ ಬಗ್ಗೆ ಸರ್ಕಾರ ಪುನರ್‌ ಪರಿಶೀಲನೆ ಅಗತ್ಯ ಎಂದು ಪ್ರಮುಖರು ಸರ್ಕಾರಕ್ಕೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕೊಡಗು ವಿಶ್ವವಿದ್ಯಾಲಯವನ್ನು ಮತ್ತೆ ಮಂಗಳೂರು ವಿವಿ ಜೊತೆ ವಿಲೀನ ಗೊಳಿಸುವ ಪ್ರಕ್ರಿಯೆ ಬಗ್ಗೆ ಸರ್ಕಾರ ಪುನರ್ ಪರಿಶೀಲನೆ ಅಗತ್ಯ ಎಂದು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸರ್ಕಾರಕ್ಕೆ ಆಗ್ರಹ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕೊಡಗು ವಿಶ್ವವಿದ್ಯಾಲಯ ಸೇರಿದಂತೆ ಒಂಬತ್ತು ವಿಶ್ವವಿದ್ಯಾಲಯಗಳನ್ನು ರದ್ದುಗೊಳಿಸುವ ಸರ್ಕಾರದ ಚಿಂತನೆಯ ಹಿನ್ನೆಲೆಯಲ್ಲಿ ಚಿಕ್ಕ ಅಳುವಾರ ಗ್ರಾಮದ ಅಳುವಾರದ ದೇವಾಲಯ ಸಮುದಾಯ ಭವನದಲ್ಲಿ ಕೊಡಗು ವಿಶ್ವ ವಿದ್ಯಾಲಯ ಹಿತರಕ್ಷಣಾ ಬಳಗದ ಅಧ್ಯಕ್ಷ ಕೆ.ಎಸ್.ಕೃಷ್ಣೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡಗು ವಿವಿ ಉಳಿಸಲು ಜಿಲ್ಲಾಮಟ್ಟದಲ್ಲಿ ಹೋರಾಟ ರೂಪಿಸಲು ನಿರ್ಣಯ ಕೈಗೊಳ್ಳಲಾಯಿತು.

ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮ ಪಂಚಾಯಿತಿಗಳ ಪ್ರತಿನಿಧಿಗಳು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸುದೀರ್ಘ ಚರ್ಚೆ ನಡೆಸಿ, ಯಾವುದೇ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಹೋರಾಟ ರೂಪಿಸಲಾಗುವುದು. ಸರ್ಕಾರ ಜಿಲ್ಲೆಯ ಮಧ್ಯಮ ವರ್ಗದ ಮಕ್ಕಳಿಗೆ ನೀಡಿದ ಸೌಲಭ್ಯ ಯಾವುದೇ ಸಂದರ್ಭದಲ್ಲಿಯೂ ವಂಚನೆಗೆ ಒಳಗಾಗಬಾರದು ಎನ್ನುವ ಆಕ್ರೋಶ ವ್ಯಕ್ತಗೊಂಡಿತು.

ಕೊಡಗು ವಿಶ್ವವಿದ್ಯಾಲಯದ ಮಾನ್ಯತೆ ಮಾನದಂಡಕ್ಕೆ ಅಡಚಣೆ ಉಂಟಾಗಬಾರದು. ವಿಶ್ವವಿದ್ಯಾಲಯ ರದ್ದುಗೊಳಿಸುವುದು ಕೊಡಗಿನ ಜನತೆಗೆ ಮಾಡುವ ಅನ್ಯಾಯವಾಗುತ್ತದೆ. ಪಕ್ಷಾತೀತವಾಗಿ ಹೋರಾಟ ನಡೆಸುವುದರೊಂದಿಗೆ ಕ್ಷೇತ್ರ ಶಾಸಕರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಸಭೆ ನಿರ್ಣಯ ಕೈಗೊಳ್ಳಲಾಯಿತು.

ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹೋರಾಟ ಸಮಿತಿಯೊಂದನ್ನು ರಚಿಸಲಾಯಿತು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಬೀದರ್ ಹೊರತುಪಡಿಸಿ 9 ನೂತನ ವಿವಿಗಳನ್ನು ಮುಚ್ಚಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ದುರದೃಷ್ಟಕರ. ಆದರೆ ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಪ್ರತ್ಯೇಕ ಮಾನದಂಡದಲ್ಲಿ ಕೊಡಗು ವಿಶ್ವ ವಿದ್ಯಾನಿಲಯ ಉಳಿಸಿ, ಮುಂದುವರಿಸಬೇಕು. ಕೊಡಗು ವಿವಿ ನಮ್ಮ ಆತ್ಮಗೌರವದ ಪ್ರಶ್ನೆಯಾಗಿದೆ ಎಂದರು.

ಸಮಾಜ ಸೇವಕ ನಾಪಂಡ ಮುತ್ತಪ್ಪ ಮಾತನಾಡಿ, ನೂತನ ವಿವಿಗಳಿಗೆ ಬಜೆಟ್‌ನಲ್ಲಿ ಯಾವುದೇ ಅನುದಾನ ಘೋಷಣೆ ಮಾಡಿಲ್ಲ. ಕೊಡಗು ವಿವಿಗೆ 3 ಕೋಟಿ ರು. ಅನುದಾನದ ಅಗತ್ಯತೆ ಇದೆ. ಬೀದರ್ ಬಿಟ್ಟು ಉಳಿದ 9 ವಿಶ್ವ ವಿದ್ಯಾನಿಲಯ ಮುಚ್ಚಲು ತೀರ್ಮಾನ ಕೈಗೊಂಡಿರುವುದು ದುರದೃಷ್ಟಕರ. ಸರ್ಕಾರ ದಸರಾ, ಕ್ರೀಡಾಕೂಟಗಳಿಗೆ ಅನುದಾನ ನೀಡುತ್ತದೆ. ಆದರೆ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಹಾಗೂ ಅವರ ಶೈಕ್ಷಣಿಕ ಪ್ರಗತಿಯೊಂದಿಗೆ ಭವಿಷ್ಯ ರೂಪಿಸುವ ವಿವಿಗಳಿಗೆ ಅನುದಾನ ನೀಡಲು ಮೀನಾ ಮೇಷ ಎಣಿಸುತ್ತಿರುವುದು ಸರಿಯಲ್ಲ. ವಿವಿ ಮುಚ್ಚುವ ನಿರ್ಧಾರ ಕೈಬಿಡಬೇಕು. ವಿವಿಯೊಂದಿಗೆ ಭಾವನಾತ್ಮಕ ಸಂಬಂಧ ಇದೆ. ಕೊಡಗಿನಲ್ಲಿ ವಿವಿ ಉಳಿಯಬೇಕು. ಉಳಿಸುವ ಪ್ರಯತ್ನ ಮಾಡಬೇಕು ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಸೆನೆಟ್ ಸದಸ್ಯರಾದ ದಯಾನಂದ ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆ ವ್ಯಕ್ತಪಡಿಸಿದರು.

ಮಾಜಿ ಸೆನೆಟ್ ಸದಸ್ಯ ಡಿ.ಆರ್.ಪ್ರೇಮ್‌ ಕುಮಾರ್ ಮಾತನಾಡಿ, ಸರ್ಕಾರಿ ಜಾಗವನ್ನು ಕೆಲವು ವ್ಯಕ್ತಿಗಳು ಅತಿಕ್ರಮಣ ಮಾಡಲು ಯತ್ನಿಸಿದಾಗ ಸಂಘಟಿತ ಹೋರಾಟ ನಡೆಸಿ ಜಾಗವನ್ನು ಉಳಿಸಿದ್ದೇವೆ. ಇದೇ ಜಾಗದಲ್ಲಿ ಈಗ ಸ್ನಾತಕೋತ್ತರ ಕೇಂದ್ರ ಹಾಗೂ ಕೊಡಗು ವಿವಿ ಸ್ಥಾಪನೆಯಾಗಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮನೆ ಬಾಗಿಲಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಎಂದರು.

ಹೆಬ್ಬಾಲೆ ಗ್ರಾಮದ ಮುಖಂಡ ಎಚ್.ಕೆ.ನಟೇಶ್ ಗೌಡ ಮಾತನಾಡಿ, ಕೊಡಗು ವಿಶ್ವವಿದ್ಯಾಲಯ ಉಳಿಸುವ ಸಂಬಂಧ ಜಿಲ್ಲೆಯಲ್ಲಿ ಮನೆ ಮನೆಯಿಂದ ಹೋರಾಟದ ಅಗತ್ಯತೆ ಉಂಟಾಗಿದೆ. ಮಂಗಳೂರು ವಿವಿ ವ್ಯಾಪ್ತಿಗೆ ಮತ್ತೆ ವಿಲೀನ ಗೊಳಿಸಲು ಅವಕಾಶ ನೀಡಬಾರದು. ಕೊಡಗು ವಿಶ್ವವಿದ್ಯಾಲಯ ಪ್ರತ್ಯೇಕ ವಿವಿ ಆಗಿ ಕೊಡಗಿನಲ್ಲಿಯೇ ಉಳಿಸಬೇಕು. ಇದಕ್ಕಾಗಿ ಸಂಘಟಿತ ಹೋರಾಟ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸುವುದು ಅಗತ್ಯವಾಗಿದೆ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ್, ತೊರೆನೂರು ವಿ.ಎಸ್.ಎಸ್.ಎನ್.ನಿರ್ದೇಶಕ ಎಚ್.ಬಿ.ಚಂದ್ರಪ್ಪ ಮಾತನಾಡಿದರು.

ಕೊಡಗು ವಿಶ್ವವಿದ್ಯಾಲಯ ಹಿತರಕ್ಷಣಾ ಬಳಗದ ಅಧ್ಯಕ್ಷ ಕೆ.ಎಸ್.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು.

ಅಳುವಾರದಮ್ಮ ದೇವಾಲಯ ಸಮಿತಿ ಅಧ್ಯಕ್ಷ ರಮೇಶ್, ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶೋಭಾ ಪ್ರಕಾಶ್, ಉಪಾಧ್ಯಕ್ಷ ಬೇಬಿ, ಸದಸ್ಯ ದೇವರಾಜ್, ಹೆಬ್ಬಾಲೆ ಗ್ರಾಮ ಪಂಚಾಯತಿ ಅಧ್ಯಕ್ಷ ಅರುಣಾಕುಮಾರಿ, ಸದಸ್ಯರಾದ ಮಹಾದೇವ್, ನಿಂಗಜಮ್ಮ, ದೇವಾಲಯ ಸಮಿತಿ ಅಧ್ಯಕ್ಷ ಎ.ಎನ್.ರಮೇಶ್ ಮುಖಂಡರಾದ ಎಸ್.ಎಸ್.ಚಂದ್ರಶೇಖರ್, ರಮೇಶ್, ಟಿ.ಕೆ.ಪಾಂಡುರಂಗ, ಲೋಕೇಶ್ ಸಾಗರ್, ಗಣೇಶ್, ಲೋಕೇಶ್, ಟಿ.ಪಿ.ಜಗದೀಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Share this article