ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸರ್ಕಾರ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಮುಂದಾಗಿರುವುದು ಪ್ರಕೃತಿ ಮೇಲಿನ ಬಹಿರಂಗ ಅತ್ಯಾಚಾರವಾಗಿದೆ. ಬಹುಶಃ ಕೆಲ ಅಧಿಕಾರಿಗಳಿಂದ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಈ ಯೋಜನೆಯ ಸಾಧಕ-ಬಾಧಕದ ಕುರಿತು ಪೂರ್ಣ ಅರಿವಿಲ್ಲದಂತೆ ತೋರುತ್ತದೆ. 10,700 ಕೋಟಿ ರು. ಲೂಟಿಮಾಡುವ ಸಂಚು ಈ ಯೋಜನೆಯಲ್ಲಿದ್ದಂತೆ ಕಾಣಿಸುತ್ತದೆ. ಈ ಯೋಜನೆಯಲ್ಲಿ ಇರಬೇಕಾದ ಸಂಗತಿಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಪತ್ರ ನೀಡಿದ್ದೇವೆ. ಫೆ.12ರೊಳಗೆ ಈ ಕುರಿತು ಕೆಪಿಸಿಎಲ್‌ನಿಂದ ಉತ್ತರ ಬರುವ ನಿರೀಕ್ಷೆಯಿದೆ ಎಂದರು.
ಈ ಕುರಿತಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪ್ರಲ್ಹಾದ್ ಜೋಷಿ, ರಾಜ್ಯ ಇಂಧನಸಚಿವ ಕೆ.ಜೆ. ಜಾರ್ಜ್ ಅವರನ್ನು ಭೇಟಿಮಾಡಿ, ಯೋಜನೆ ಸ್ಥಗಿತಗೊಳಿಸುವಂತೆ ಆಗ್ರಹಿಸಲಾಗುವುದು. ಪರಿಸರ ಹೋರಾಟಗಾರರ ಜೊತೆ ಚರ್ಚಿಸಿ, ನ್ಯಾಯಾಲಯದ ಮೊರೆ ಹೋಗಲು ಯೋಚಿಸಲಾಗುವುದು ಎಂದ ಅವರು, ಈ ಯೋಜನೆಯನ್ನು ಖಂಡಿತಾ ನಿಲ್ಲಿಸುತ್ತೇವೆ. ಯಾವುದೇ ಕಾರಣಕ್ಕೂ ಯೋಜನೆ ಜಾರಿಯಾಗಲು ಬಿಡುವುದಿಲ್ಲ ಎಂದು ಖಡಕ್ಕಾಗಿಯೇ ಪ್ರತಿಕ್ರಿಯಿಸಿದರು.ಪರಿಸರ ಹೋರಾಟಗಾರ ಪ್ರೊ.ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಅರಣ್ಯ ಸಂರಕ್ಷಣಾ ಕಾಯ್ದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಂತಹ ಕಠಿಣ ಕಾನೂನುಗಳಿದ್ದರೂ ಅಧಿಕಾರಿಗಳು ಈ ಪರಿಸರ ಮಾರಕ ಯೋಜನೆಯನ್ನು ಜಾರಿಗೊಳಿಸಲು ಮುಂದಾಗುತ್ತಿರುವುದು ಪರಿಸರದ ಮೇಲಿನ ಸಾಮೂಹಿಕ ಅತ್ಯಾಚಾರ ಎಂದು ಕಿಡಿಕಾರಿದರು.
ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯದ ಅಧಿಕಾರಿ ಪ್ರಣೀತಾಪೌಲ್, ಅಳಿವಿನಂಚಿನಲ್ಲಿರುವ ಸಿಂಗಳೀಕ, ಮಂಗಟ್ಟೆ ಪಕ್ಷಿಗಳು ಪಶ್ವಿಮಘಟ್ಟದ ಈ ಸಂರಕ್ಷಣಾ ಅರಣ್ಯ ವಲಯದಲ್ಲಿದ್ದು, ಇಲ್ಲಿ ಯಾವುದೇ ಕಾರಣಕ್ಕೂ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಬಾರದು ಎಂದು ವರದಿ ನೀಡಿದ್ದರೂ ಅದನ್ನು ಮೆಟ್ಟಿ ರಾಜ್ಯ ಅರಣ್ಯ ಅಧಿಕಾರಿ ಸೆಂಥಿಲ್‌ಕುಮಾರ್ ಎನ್ನುವವರು ಒಂದೇ ಪುಟದ ವರದಿಯನ್ನು ನೀಡಿ, ಇಲ್ಲಿ ಯಾವುದೇ ಪ್ರಾಣಿ, ಪಕ್ಷಿಗಳಿಗೆ ಹಾನಿಯಾಗುವುದಿಲ್ಲ. ಈ ಯೋಜನೆಯನ್ನು ಜಾರಿಗೊಳಿಸಬಹುದು ಎಂದು ವರದಿ ನೀಡಿದ್ದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅರಣ್ಯನಾಶ ಮಾಡಿ ಪಂಪ್ಡ್ ಸ್ಟೋರೇಜ್ ನಿರ್ಮಿಸುವ ಬದಲು ಬ್ಯಾಟರಿ ಸ್ಟೋರೇಜ್ ತಂತ್ರಜ್ಞಾನವನ್ನು ಬಳಸಿ ಪರಿಸರ ಹಾನಿಯನ್ನು ತಡೆಗಟ್ಟಬಹುದು. 135 ಕಿ.ಮೀ. ಹರಿಯುವ ನದಿಗೆ 25 ಕಿ.ಮೀ. ನಷ್ಟು ಸ್ವತಂತ್ರವಾಗಿ ಹರಿಯಲು ಬಿಡುತ್ತಿಲ್ಲ ಎಂದು ಸಿಡಿಮಿಡಿಗೊಂಡರು.
ಪರಿಸರ ಹೋರಾಟಗಾರ ಡಾ. ಎಲ್.ಕೆ.ಶ್ರೀಪತಿ ಮಾತನಾಡಿ, ವಿದ್ಯುತ್ತಿನ ಶೇಖರಣೆಯ ನೆಪದಲ್ಲಿ ಹರಿಯುವ ನೀರನ್ನು ಕಳೆದುಕೊಳ್ಳುತ್ತೇವೆ. 18,000 ಟನ್ ಜೆಲೆಟಿನ್‌ಗಳನ್ನು ಬಳಸಿ ಭೂಮಿಯನ್ನು ಸಿಡಿಸುತ್ತೇವೆ. ಜಲಚರ, ಕೃಷಿಭೂಮಿ, ಮತ್ಸೋದ್ಯಮ, ಸಸ್ಯ ಸಂಪತ್ತಿನ ಹಾನಿಗಳ ಬಗ್ಗೆ ಕೆಪಿಸಿಎಲ್ ನೀಡುವ ಪರಿಹಾರ ಏನು ಎಂಬುದರ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರಲ್ಲದೆ ಆಗುಂಬೆ ಘಾಟಿನಲ್ಲಿ ಸುರಂಗಮಾರ್ಗದಿಂದ ಪರಿಸರದ ಮೇಲೆ ಇನ್ನಿಲ್ಲದ ಹಾನಿ ಉಂಟಾಗುತ್ತದೆ. ಅದರ ಬದಲು ಈಗಿರುವ ರಸ್ತೆಯ ಅಗಲೀಕರಣವೇ ವಾಸಿ ಎಂದರು.ಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಕೆ.ಈ. ಕಾಂತೇಶ್, ಪ್ರಮುಖರಾದ ಎಂ. ಶಂಕರ್, ಈ. ವಿಶ್ವಾಸ್, ಡಾ.ಶೇಖರ್‌ಗೌಳೇರ್, ಮೋಹನ್ ಜಾದವ್, ಜನಾರ್ಧನ್ ಪೈ ಮೊದಲಾದವರಿದ್ದರು.