ಹೊಸೂರಿಗೆ ಮದ್ಯದಂಗಡಿ ಸ್ಥಳಾಂತರಕ್ಕೆ ವಿರೋಧ

KannadaprabhaNewsNetwork | Published : Jul 2, 2025 12:23 AM
ಫೋಟೊಪೈಲ್- ೧ಎಸ್ಡಿಪಿ೪- ಸಿದ್ದಾಪುರದ ಹೊಸೂರಿನಲ್ಲಿ ಮದ್ಯದಂಗಡಿ ತೆರೆಯುವ ವಿರುದ್ಧ ಅಲ್ಲಿನ ನಾಗರಿಕರು ಸುದ್ದಿಗೋಷ್ಟಿ ನಡೆಸಿದರು. | Kannada Prabha

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ಸೊರಬಾ ರಸ್ತೆಯಲ್ಲಿದ್ದ ಮದ್ಯದಂಗಡಿಯನ್ನು ಹೊಸೂರಿಗೆ ಸ್ಥಳಾಂತರಿಸಲು ಮುಂದಾಗಿರುವುದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಇಡೀ ಊರಿನ ಜನತೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಸಿದ್ದಾಪುರ: ಪಟ್ಟಣದ ಸೊರಬಾ ರಸ್ತೆಯಲ್ಲಿದ್ದ ಮದ್ಯದಂಗಡಿಯನ್ನು ಹೊಸೂರಿಗೆ ಸ್ಥಳಾಂತರಿಸಲು ಮುಂದಾಗಿರುವುದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಇಡೀ ಊರಿನ ಜನತೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹೊಸೂರಿನ ಗ್ರಾಮಸ್ಥರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಪಂ ಸದಸ್ಯ ಮಾರುತಿ ನಾಯ್ಕ ಮಾತನಾಡಿ, ಹೊಸೂರಿಗೆ ವೈನ್‌ಶಾಪ್ ಸ್ಥಳಾಂತರವಾಗಲಿದ್ದು, ಹೊಸೂರಿಗೆ ಮದ್ಯದ ಅಂಗಡಿ ಬೇಡ. ಕಾನೂನಾತ್ಮಕವಾಗಿ ಮದ್ಯದ ಅಂಗಡಿ ಕಮರ್ಷಿಯಲ್ ಎನ್‌ಎ ಆಗಿರಬೇಕು. ವಸತಿ ಎನ್‌ಎ ಆಗಿರುವ ಜಾಗದಲ್ಲಿ ವೈನ್‌ಶಾಪ್ ನಡೆಸುವುದು ಸರಿಯಲ್ಲ. ಹೆದ್ದಾರಿಯಿಂದ ಇಂತಿಷ್ಟು ದೂರ ಇರಬೇಕೆಂಬ ನಿಯಮವಿದೆ. ಸ್ಥಳೀಯರ ಒಪ್ಪಿಗೆ ಪತ್ರ ಪಡೆಯಬೇಕು. ಅಬಕಾರಿ ಇಲಾಖೆಯವರು ಸ್ಥಳ ಪರಿಶೀಲಿಸಿದ್ದಾರೆ. ಅಲ್ಲಿ ವೈನ್‌ಶಾಪ್ ಆರಂಭವಾದರೆ ಇಡೀ ಊರಿನ ಸಮಸ್ತ ಜನತೆ ಬೀದಿಗಿಳಿದು ಹೋರಾಟ ನಡೆಸಲಿದ್ದೇವೆ ಎಂದರು.

ತೋಟಪ್ಪ ನಾಯ್ಕ ಮಾತನಾಡಿ, ಹೊಸೂರಿನ ಚೌಡಪ್ಪ ನಾಯ್ಕ ಸರ್ಕಲ್ ಬಳಿ ವೈನ್‌ಶಾಪ್ ಸ್ಥಳಾಂತರಗೊಳ್ಳಲಿದೆ ಎಂಬ ಮಾಹಿತಿಯಿದೆ. ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಚೌಡಪ್ಪ ನಾಯ್ಕ ಸರ್ಕಲ್ ಬಳಿ ಮದ್ಯದಂಗಡಿ ಸ್ಥಳಾಂತರಕ್ಕೆ ನಮ್ಮ ವಿರೋಧವಿದೆ. ಆಸುಪಾಸು ಆಸ್ಪತ್ರೆ, ಪ್ರಶಾಂತಿ ಶಾಲೆ ಕೂಡ ಇದೆ. ಹೊಸೂರಿನಲ್ಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಬಾರದು. ಒಂದು ವೇಳೆ ಸ್ಥಳಾಂತರವಾದರೆ ಧರಣಿ ನಡೆಸಲಾಗುವುದು. ವಿದ್ಯಾರ್ಥಿಗಳು ಓಡಾಡುವ ಮುಖ್ಯ ಮಾರ್ಗ ಇದಾಗಿದ್ದು, ಇಲ್ಲಿ ತೆರೆಯುವುದು ಬೇಡ. ಫಾರ್ಮ್ ನಂ. ೩ ನೀಡಲು, ಬಡವರಿಗೆ ಮನೆ ನೀಡಲು ಸತಾಯಿಸುವ ಪಟ್ಟಣ ಪಂಚಾಯಿತಿ ಮದ್ಯದಂಗಡಿ ಸ್ಥಳಾಂತರಕ್ಕೆ ನಿರಾಕ್ಷೇಪಣಾ ಪತ್ರ ನೀಡಿದೆ. ಜನರ ಜೀವನಕ್ಕೆ ಮಾರಕವಾಗಿರುವ ವೈನ್‌ಶಾಪ್ ಸ್ಥಳಾಂತರಕ್ಕೆ ತೀವ್ರ ವಿರೋಧವಿದೆ. ವೈನ್‌ಶಾಪ್ ಪ್ರಾರಂಭವಾದರೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತೇವೆ ಎಂದರು.

ಪ್ರಮುಖರಾದ ರವಿ ಬಡಗಿ, ಕುಮಾರ ನಾಯ್ಕ, ಶ್ರೀನಿವಾಸ ಹೊಸೂರ, ಶಂಕರ ನಾಯ್ಕ, ಲಕ್ಷ್ಮಣ ನಾಯ್ಕ, ಸಂತೋಷ ನಾಯ್ಕ, ಉಮೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.