ಸಾಗರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ದ ಶಿವಮೊಗ್ಗ ಜಿಲ್ಲೆಯ ವಿವಿಧ ಧರ್ಮದ ಮಠಾಧೀಶರು, ಧರ್ಮಗುರುಗಳು, ಮೌಲಿಗಳು, ವಿವಿಧ ಸಂಘಸಂಸ್ಥೆಗಳ ಪ್ರಮುಖರ ನೇತೃತ್ವದಲ್ಲಿ ಆ.೨೫ರಂದು ಧರ್ಮಾತೀತ, ಪಕ್ಷಾತೀತ, ಜಾತ್ಯಾತೀತವಾದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟದ ಸಂಚಾಲಕ ಅಖಿಲೇಶ್ ಚಿಪ್ಪಳಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪರಿಸರಕ್ಕೆ ಮಾರಕವಾಗಿರುವ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿರುವ ಈ ಬೃಹತ್ ಹೋರಾಟದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು. ಮೆರವಣಿಗೆಯು ಬೆಳಿಗ್ಗೆ ೧೦ಕ್ಕೆ ಮಹಾಗಣಪತಿ ದೇವಸ್ಥಾನದ ಆವರಣದಿಂದ ಪ್ರಾರಂಭಗೊಳ್ಳಲಿದೆ ಎಂದರು.ಸದರಿ ಯೋಜನೆಯು ೨೦೧೭ರಲ್ಲಿ ಮೊದಲು ಪ್ರಸ್ತಾಪಕ್ಕೆ ಬಂದಿತ್ತು. ಅಂದಿನಿಂದಲೂ ಸರ್ಕಾರಕ್ಕೆ ಯೋಜನೆ ಪರಿಸರ ಮಾರಕ ಎಂದು ಮನವಿ ಕೊಡುತ್ತಾ ಬಂದಿದ್ದೇವೆ. ೨೦೧೭ರಲ್ಲಿ ೪ ಸಾವಿರ ಕೋಟಿ ವೆಚ್ಚದ ಯೋಜನೆ ಈಗ ೧೦೨೪೦ ಕೋಟಿ ರುಪಾಯಿ ತಲುಪಿದೆ. ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣದಿಂದಾದ ಶರಾವತಿ ಸಂತ್ರಸ್ತರಿಗೆ ಈತನಕ ಪರಿಹಾರ ನೀಡಿಲ್ಲ. ಈಗ ಮತ್ತೊಂದು ವಿದ್ಯುತ್ ಯೋಜನೆ ಜಾರಿಗೆ ತರಲಾಗುತ್ತಿದೆ. ಯೋಜನೆ ಪ್ರಾರಂಭವಾದರೆ ಹೊರರಾಜ್ಯದಿಂದ ಬರುವ ೩೭೦೦ ಕುಟುಂಬಗಳು ಬಂದು ಇಲ್ಲಿ ನೆಲೆಸುತ್ತದೆ. ಇದರಿಂದ ಇನ್ನಷ್ಟು ಪರಿಸರ ನಾಶವಾಗುತ್ತದೆ. ಪರಿಸರ ನಾಶ ಮಾಡದೆ ಬೇರೆ ಯೋಜನೆ ಮೂಲಕ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿದೆ. ಯೋಜನೆ ಅನುಷ್ಟಾನದ ಪ್ರಮುಖ ಉದ್ದೇಶ ಅಪಾರ ಪ್ರಮಾಣದ ಹಣ. ಹಣಕ್ಕಾಗಿ ಯೋಜನೆ ಅನುಷ್ಟಾನಕ್ಕೆ ಮುಂದಾಗಿರುವುದು ಸ್ಪಷ್ಟವಾಗುತ್ತಿದೆ. ಇದಕ್ಕೆ ವಿನೂತನ ರೀತಿಯಲ್ಲಿ ಎಲ್ಲರೂ ತಲೆಗೆ ಕರವಸ್ತ್ರ ಕಟ್ಟಿಕೊಂಡು ಪ್ರತಿಭಟನೆ ನಡೆಸಲಾಗುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ಕೆ.ವಿ.ಪ್ರವೀಣ್, ಎಲ್.ವಿ.ಅಕ್ಷರ, ಭಾಗಿರಥಿ, ನಾರಾಯಣಮೂರ್ತಿ ಕಾನುಗೋಡು, ಧನುಷ್ ಇನ್ನಿತರರು ಹಾಜರಿದ್ದರು.