ಬಜೆಟ್‌ಗೆ ವಿರೋಧ ಪಕ್ಷದವರ ವಿರೋಧ ಸಾಮಾನ್ಯ

KannadaprabhaNewsNetwork | Published : Mar 12, 2025 12:49 AM

ಸಾರಾಂಶ

ಪ್ರತಿ ಬಾರಿ ಬಜೆಟ್‌ ಮಂಡನೆ ಆದಾಗಲೂ ಆಡಳಿ ಪಕ್ಷದವರನ್ನು ಹೊರತುಪಡಿಸಿ ವಿರೋಧ ಪಕ್ಷದವರು ಟೀಕೆ ಮಾಡುವುದು ಸಾಮಾನ್ಯ. ಅವರು ಹೇಳುವಂತೆ ಬಜೆಟ್‌ನಲ್ಲಿ ಹಾಸನ ಜಿಲ್ಲೆಗೆ ಅನ್ಯಾಯ ಆಗಿಲ್ಲ ಎನ್ನುವ ಮೂಲಕ ಬಜೆಟ್‌ ಖಂಡಿಸಿದ್ದ ಜೆಡಿಎಸ್‌ ಮುಖಂಡ ಎಚ್.ಡಿ. ರೇವಣ್ಣ ಹೇಳಿಕೆಗೆ ಸಂಸದ ಶ್ರೇಯಸ್‌ ಪಟೇಲ್‌ ತಿರುಗೇಟು ನೀಡಿದರು. ಆನೆಧಾಮ ನಿರ್ಮಾಣಕ್ಕೆ ಯೋಜನೆ ಘೋಷಣೆ ಮಾಡಲಾಗಿದೆ. ಹಾಸನ ವಿಮಾನ ನಿಲ್ದಾಣಕ್ಕೂ ಮುಂದಿನ ದಿನದಲ್ಲಿ ೫೦ ಕೋಟಿ ಅನುದಾನ ಸಿಗಲಿದೆ. ಸದ್ಯ ವಿಮಾನ ನಿಲ್ದಾಣದ ಕಾಮಗಾರಿಗೆ ಹಣದ ಕೊರತೆ ಇರುವುದಿಲ್ಲ. ನಮ್ಮ ಬಜೆಟ್‌ನಲ್ಲಿ ಶೇಕಡ ೯೦ರಷ್ಟು ಬೇಡಿಕೆ ಈಡೇರಿಕೆ ಮಾಡಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಪ್ರತಿ ಬಾರಿ ಬಜೆಟ್‌ ಮಂಡನೆ ಆದಾಗಲೂ ಆಡಳಿ ಪಕ್ಷದವರನ್ನು ಹೊರತುಪಡಿಸಿ ವಿರೋಧ ಪಕ್ಷದವರು ಟೀಕೆ ಮಾಡುವುದು ಸಾಮಾನ್ಯ. ಅವರು ಹೇಳುವಂತೆ ಬಜೆಟ್‌ನಲ್ಲಿ ಹಾಸನ ಜಿಲ್ಲೆಗೆ ಅನ್ಯಾಯ ಆಗಿಲ್ಲ ಎನ್ನುವ ಮೂಲಕ ಬಜೆಟ್‌ ಖಂಡಿಸಿದ್ದ ಜೆಡಿಎಸ್‌ ಮುಖಂಡ ಎಚ್.ಡಿ. ರೇವಣ್ಣ ಹೇಳಿಕೆಗೆ ಸಂಸದ ಶ್ರೇಯಸ್‌ ಪಟೇಲ್‌ ತಿರುಗೇಟು ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿ, ಈ ಬಾರಿ ರಾಜ್ಯ ಬಜೆಟ್‌ನಲ್ಲಿ ಹಾಸನ ರೈಲ್ವೆ ಬ್ರಿಡ್ಜ್‌ ನಿರ್ಮಾಣಕ್ಕೆ ೩೭ ಕೋಟಿ ರು. ಹಣ ಬಿಡುಗಡೆಗೆ ಆದೇಶ ಆಗಿದ್ದು, ಬೇಲೂರು ಹಾಸನ ರೈಲ್ವೆ ಯೋಜನೆಗೆ ರಾಜ್ಯ ಕೇಂದ್ರ ೫೦-೫೦ ಅನುಪಾತ ಯೋಜನೆಗೆ ಅನುಮೋದನೆ ದೊರಕಿದೆ. ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಕೂಡ ಯೋಜನೆ ಜಾರಿ ಮಾಡಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಗರಸಭೆ ಮಹಾನಗರ ಪಾಲಿಕೆಯಾಗಿದೆ. ಮಹಾನಗರ ಪಾಲಿಕೆಗೆ ಅಗತ್ಯ ಅನುದಾನ ಕೊಡುವುದಾಗಿಯೂ ಬಜೆಟ್ ನಲ್ಲಿ ಹೇಳಲಾಗಿದೆ. ಏತ ನೀರಾವರಿ ಯೋಜನೆಗಳಿಗೆ ಅನುದಾನ ನೀಡಿ ಅನುಮೋದನೆ ನೀಡಲಾಗಿದೆ. ಕಾಡಾನೆ ದಾಳಿಗೆ ಪರಿಹಾರ ಮೊತ್ತವನ್ನು ೧೫ ಲಕ್ಷದಿಂದ ೨೦ ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಆನೆಧಾಮ ನಿರ್ಮಾಣಕ್ಕೆ ಯೋಜನೆ ಘೋಷಣೆ ಮಾಡಲಾಗಿದೆ. ಹಾಸನ ವಿಮಾನ ನಿಲ್ದಾಣಕ್ಕೂ ಮುಂದಿನ ದಿನದಲ್ಲಿ ೫೦ ಕೋಟಿ ಅನುದಾನ ಸಿಗಲಿದೆ. ಸದ್ಯ ವಿಮಾನ ನಿಲ್ದಾಣದ ಕಾಮಗಾರಿಗೆ ಹಣದ ಕೊರತೆ ಇರುವುದಿಲ್ಲ. ನಮ್ಮ ಬಜೆಟ್‌ನಲ್ಲಿ ಶೇಕಡ ೯೦ರಷ್ಟು ಬೇಡಿಕೆ ಈಡೇರಿಕೆ ಮಾಡಲಾಗಿದೆ ಎಂದರು.

ರಾಜೀ ಆಗುವುದಿಲ್ಲ:

ಹಾಸನದ ಪೊಲೀಸರು ಮದ್ಯ ಸೇವಿಸಿ ಡ್ಯೂಟಿ ಮಾಡ್ತಾರೆ ಎಂಬ ಎಚ್.ಡಿ. ರೇವಣ್ಣ ಹೇಳಿಕೆಯ ಟೀಕೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಂಸದರು, ಡ್ರಗ್ಸ್, ಮಟ್ಕ, ಜೂಜು, ವ್ಹೀಲಿಂಗ್ ವಿಚಾರದಲ್ಲಿ ಯಾರೇ ಆಗಿರಲಿ, ಎಂತಹವರೇ ಇರಲಿ ಯಾವುದೇ ಕಾರಣಕ್ಕೂ ರಾಜೀ ಆಗುವುದಿಲ್ಲ. ಪೊಲೀಸರು ದೂರುಗಳ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ನನ್ನ ಗಮನಕ್ಕೆ ತನ್ನಿ, ಅದನ್ನ ರಿಪೇರಿ ಮಾಡಿಸುವುದು ನನ್ನ ಜವಾಬ್ದಾರಿ. ಕ್ರಮ ತೆಗೆದುಕೊಳ್ಳದಿದ್ದರೇ ನನ್ನನ್ನು ಲೋಕಸಭಾ ಸದಸ್ಯರೆಂದು ಕರೆಯಬೇಡಿ ಎಂದರು. ಪೊಲೀಸರು ಜನರ ರಕ್ಷಣೆಗಾಗಿ ಇದ್ದಾರೆ. ದೂರಿನ ಬಗ್ಗೆ ಏನಾದರೂ ದಾಖಲೆ ಇದ್ದರೆ ಕೊಡಲಿ. ಅದು ಬಿಟ್ಟು ಸುಮ್ಮನೇ ಆರೋಪ ಮಾಡೋದು ಸರಿಯಲ್ಲ. ಸಾಫ್ಟ್ ಕಾರ್ನರ್‌ ಪೊಲೀಸ್ ಇಲಾಖೆ ಸೇರಿದಂತೆ ಯಾವ ಇಲಾಖೆ ಮೇಲೂ ಇಲ್ಲ ಎಂದು ರೇವಣ್ಣ ಹೇಳಿಕೆಗೆ ತಿರುಗೇಟು ನೀಡಿದರು.

ನನಗಿಂತ ಅವರಿಗೆ ಗೊತ್ತಾ?

ಎಣ್ಣೆ ಭಾಗ್ಯ ಅಂತಾ ಟೀಕೆ ಮಾಡೋರು ಅವರ ಕಾಲದಲ್ಲಿ ಏನು ಗ್ಯಾರಂಟಿ ಕೊಟ್ಟಿದ್ರು ಯೋಚನೆ ಮಾಡಲಿ. ಹಾಸನ ಬಜೆಟ್ ಲಿಸ್ಟ್‌ನಲ್ಲಿ ಇಲ್ಲ ಎಂದು ಯಾರು ಏನೇ ಹೇಳಬಹುದು! ಆದರೆ ಜನರು ಬುದ್ಧಿವಂತರು ಇದ್ದಾರೆ ಅವರು ಎಲ್ಲವನ್ನೂ ನೋಡುತ್ತಾರೆ. ಇನ್ನು ಕೇಂದ್ರದ ಬಜೆಟ್‌ನ ಬುಕ್‌ನಲ್ಲಿ ಹಾಸನ ಜಿಲ್ಲೆಯ ಹೆಸರೇ ಇಲ್ಲ. ಆದರೆ ಇದೆ ಎಂದಿದ್ದಾರೆ. ನನಗೆ ಕೇಂದ್ರದ ಬಜೆಟ್ ಪುಸ್ತಕ ಕೊಡುತ್ತಾರೆ. ನನಗಿಂತ ಅವರಿಗೆ ಗೊತ್ತಾ ಎಂದು ಪ್ರಶ್ನೆ ಮಾಡಿದರು. ರಾಜ್ಯದ ಬಜೆಟ್‌ನಲ್ಲಿ ಹಾಸನ ಜಿಲ್ಲೆಗೆ ಸಾಕಷ್ಟು ಕೊಡುಗೆ ಕೊಡಲಾಗಿದೆ. ಸುಮ್ಮನೆ ಇಲ್ಲಸಲ್ಲದ ಹೇಳಿಕೆ ನೀಡಬಾರದು ಎಂದು ಎಚ್ಚರಿಸಿದರು. ರೇವಣ್ಣ ಅವರು ಹಿರಿಯರಿದ್ದಾರೆ, ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡಲಿ. ಚುನಾವಣೆ ವೇಳೆಯಲ್ಲಿ ರಾಜಕೀಯ ಮಾಡೋದು ಇರುತ್ತೆ, ಆದರೆ ಅಭಿವೃದ್ಧಿ ವಿಚಾರ ಬಂದಾಗ ಒಟ್ಟಿಗೆ ಹೋಗಬೇಕು ಎಂದು ಸಹಕಾರ ಕೋರಿದರು.

ಏನಾದರೂ ಹೇಳಿಕೊಳ್ಳಲಿ:

ನಾಲ್ಕೈದು ತಿಂಗಳಲ್ಲಿ ಸರ್ಕಾರ ಬೀಳುತ್ತದೆ ಎನ್ನುವ ವಿಧಾನ ಪರಿಷತ್ತು ಸದಸ್ಯ ಸೂರಜ್ ರೇವಣ್ಣ ಹೇಳಿಕೆ ವಿಚಾರದ ಪ್ರಶ್ನೆಗೆ ಉತ್ತರಿಸಿದ ಸಂಸದರು, ವಿಷಯ ತಿಳಿದವರಿಗೆ, ಬುದ್ಧಿವಂತರಿಗೆ ಏನಾದರೂ ಉತ್ತರ ಕೊಡಬಹುದು, ಯಾವ ಮಾನದಂಡವನ್ನಿಟ್ಟು ಹೇಳಿಕೆ ನೀಡಿದ್ದಾರೆ ತಿಳಿದಿಲ್ಲ ಎಂದು ವ್ಯಂಗ್ಯವಾಡಿದರು. ಇನ್ನು ಕಾಂಗ್ರೆಸ್ ಸರಕಾರ ಬೀಳುವುದಾಗಿ ಯಾವ ಮಾನದಂಡವನ್ನಿಟ್ಟು ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ನಮ್ಮ ಸರ್ಕಾರದಲ್ಲಿ ೧೪೦ ಜನ ಶಾಸಕರು ಇದ್ದಾರೆ. ಇಡೀ ರಾಜ್ಯದ ಜನರು ಕಾಂಗ್ರೆಸ್‌ಗೆ ಆಶೀರ್ವಾದ ಮಾಡುತ್ತಿದ್ದಾರೆ. ಹೀಗಿರುವಾಗ ಏನಾದರೂ ಹೇಳಿಕೊಳ್ಳಲಿ ಎಂದು ಸೂರಜ್ ರೇವಣ್ಣ ಹೇಳಿಕೆಗೆ ಟಾಂಗ್ ನೀಡಿದರು.

ಇಬ್ಬರೂ ಜೋಡಿ ಎತ್ತುಗಳು:

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರೂ ಕೂಡ ಜೋಡಿ ಎತ್ತುಗಳು. ವಿರೋಧ ಪಕ್ಷದವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದರು. ಹಲಾಲ್ ಬಜೆಟ್ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಂಸದರು, ಅಲ್ಪಸಂಖ್ಯಾತರಿಗೆ ಬದುಕುವ ಹಕ್ಕು ಇಲ್ಲವಾ! ನಮ್ಮಲ್ಲೂ ಅವರಲ್ಲೂ ರಕ್ತವೇ ಹರಿಯುತ್ತಿರುವುದು. ಅಲ್ಪಸಂಖ್ಯಾತರಿಗೆ ಇನ್ನಷ್ಟು ಅನುದಾನ ಕೊಡಲಿ ಎಂದು ಆಗ್ರಹಿಸುತ್ತೇವೆ ಎಂದು ಹೇಳಿದರು.

ಶೀಘ್ರ ಆಯುಕ್ತರ ನೇಮಕ:

ನಗರಸಭೆಗೆ ಆಯುಕ್ತರು ಇಲ್ಲ, ಕೆಲಸಗಳು ಆಗುತ್ತಿಲ್ಲ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಪೌರಾಡಳಿತ ಅಧ್ಯಕ್ಷರ ಗಮನಕ್ಕೆ ತರಲು ಬೆಂಗಳೂರಿಗೆ ಹೋಗುತ್ತಿದ್ದೇನೆ. ಬಜೆಟ್ ಇದ್ದುದರಿಂದ ತಡವಾಗಿದೆ. ಮುಂದೆ ನೇಮಕವಾಗಲಿದೆ. ವಿದ್ಯುತ್ ಸಮಸ್ಯೆ ಬಗ್ಗೆ ಬುಧವಾರ ಸಭೆ ಕರೆಯಲಾಗಿದ್ದು, ಈ ಬಗೆ ಚರ್ಚೆ ಮಾಡಿ ಬಗೆಹರಿಸುವ ಕೆಲಸ ಮಾಡಲಾಗುವುದು ಎಂದರು. ಇನ್ನು ಒಂದೂವರೆ ತಿಂಗಳ ಒಳಗೆ ಹುಡಾ ಅಧ್ಯಕ್ಷರು ಸೇರಿದಂತೆ ಗ್ಯಾರಂಟಿ ಸಮಿತಿಗೆ ನೇಮಕ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ದೇವರಾಜು, ಯೂತ್‌ ಕಾಂಗ್ರೆಸ್ ಅಧ್ಯಕ್ಷ ರಂಜಿತ್ ಗೊರೂರು, ರವಿಕುಮಾರ್‌, ಇತರರು ಉಪಸ್ಥಿತರಿದ್ದರು.

Share this article