ರಾಣಿಬೆನ್ನೂರು: ಕೇಂದ್ರ ಸರ್ಕಾರ ನ. 21ರಂದು ಜಾರಿಗೆ ತಂದಿರುವ ಕಾರ್ಮಿಕ ಯೋಜನೆಗಳು ಜನ ಹಾಗೂ ಸಮಸ್ತ ಕಾರ್ಮಿಕ ವಿರೋಧಿ ಆಗಿದೆ ಎಂದು ಆರೋಪಿಸಿ ತಾಲೂಕಿನ ಕುಮಾರಪಟ್ಟಣ ಎಚ್.ಪಿ.ಎಫ್. ಮತ್ತು ಗ್ರಾಸಿಮ್ ಕಾರ್ಖಾನೆಯ ನೌಕರರು ಕಂಪನಿಯ ಮುಖ್ಯದ್ವಾರದ ಎದುರು ಕಾರ್ಮಿಕ ಸಂಹಿತೆಗಳ ಪ್ರತಿಗಳನ್ನು ದಹಿಸಿ ಪ್ರತಿಭಟನೆ ನಡೆಸಿದರು.
ಎಚ್.ಪಿ.ಎಫ್. ನೌಕರರ ಸಂಘದ ಅಧ್ಯಕ್ಷ ವಿ.ಜೆ.ಕೆ. ನಾಯರ್ ಮಾತನಾಡಿ, ಕಾರ್ಮಿಕ ಸಂಹಿತೆಗಳು ಸಂಪೂರ್ಣ ಕಾರ್ಮಿಕರ ಹಕ್ಕುಗಳನ್ನು ಕಸಿಯುತ್ತದೆ. ಈ ಸಂಹಿತೆಗಳು ಅನಿಯಂತ್ರಿತ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಮಾಲೀಕರ ಪರವಾಗಿವೆ. ಕೇಂದ್ರ ಸರ್ಕಾರ ತಕ್ಷಣವೆ ವಾಪಸ್ ಪಡೆಯಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರ ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಸಂಚಾಲಕ ಮುದಿಮಲ್ಲನಗೌಡ, ಎಚ್‌ಪಿಎಫ್ ನೌಕರರ ಸಂಘದ ಮುಖಂಡರಾದ ಕೊಟ್ರೇಶ್ ಓಲೆಕಾರ್, ಮಂಜುನಾಥ ಎನ್., ಸತೀಶ, ಮಾರುತಿ, ಬಸವರಾಜು, ಗ್ರಾಸಿಂ ನೌಕರರ ಸಂಘದ ಮುಖಂಡರಾದ ಶಿವಪ್ಪ ಕೊಲ್ಕರ್, ದೇವರಾಜ್, ಮಂಜುನಾಥ ವೈ.ಆರ್. ಪ್ರತಿಭಟನೆಯಲ್ಲಿದ್ದರು.