ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ವಿರೋಧ

KannadaprabhaNewsNetwork | Published : Sep 20, 2024 1:44 AM

ಸಾರಾಂಶ

ಸ್ಮಶಾನ ಜಾಗವನ್ನು ಶಾಸಕ ಪ್ರಸಾದ ಅಬ್ಬಯ್ಯ ಕಬಳಿಸಲು ಹುನ್ನಾರ ನಡೆಸಿದ್ದಾರೆ. 2019ರಲ್ಲಿ ಸ್ಥಳೀಯರು ವಿರೋಧ ಮಾಡಿದ ನಂತರ ಕೈಬಿಟ್ಟಿದ್ದರು. ಈಗ ವಾರ್ಡ್ ಸದಸ್ಯರ ಮಾತು ಕೇಳಿ ಕ್ಯಾಂಟೀನ್ ನಿರ್ಮಿಸಲಾಗಿದೆ.

ಹುಬ್ಬಳ್ಳಿ:

ನಗರದ ಮಂಟೂರು ರಸ್ತೆಯಲ್ಲಿರುವ ಸತ್ಯಹರಿಶ್ಚಂದ್ರ ಸ್ಮಶಾನ ಭೂಮಿಯಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಕಾರ್ಯ ವಿರೋಧಿಸಿ ಶ್ರೀ ಸತ್ಯಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ ಹಾಗೂ ರಕ್ಷಣಾ ಸಮಿತಿಯಿಂದ ಗುರುವಾರ ಸ್ಮಶಾನದಿಂದ ಮಹಾನಗರ ಪಾಲಿಕೆ ಕಚೇರಿ ವರೆಗೆ ಬೃಹತ್‌ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಯಿತು.

ಈ ಸ್ಮಶಾನ ಭೂಮಿಯನ್ನು ನೂರಕ್ಕೂ ಅಧಿಕ ವರ್ಷಗಳಿಂದ 30ಕ್ಕೂ ಅಧಿಕ ಬಡಾವಣೆಯ ಜನರು ಅಂತ್ಯ ಸಂಸ್ಕಾರಕ್ಕೆ ಬಳಸುತ್ತಿದ್ದಾರೆ. ಈ ಪ್ರದೇಶದಲ್ಲಿ ಶೇ. 80ರಷ್ಟು ದಲಿತ ಹಾಗೂ ಹಿಂದುಳಿದ ಸಮುದಾಯದವರು ವಾಸಿಸುತ್ತಿದ್ದಾರೆ. ಈಗ ಸ್ಮಶಾನ ಜಾಗವನ್ನು ಶಾಸಕ ಪ್ರಸಾದ ಅಬ್ಬಯ್ಯ ಕಬಳಿಸಲು ಹುನ್ನಾರ ನಡೆಸಿದ್ದಾರೆ. 2019ರಲ್ಲಿ ಸ್ಥಳೀಯರು ವಿರೋಧ ಮಾಡಿದ ನಂತರ ಕೈಬಿಟ್ಟಿದ್ದರು. ಈಗ ವಾರ್ಡ್ ಸದಸ್ಯರ ಮಾತು ಕೇಳಿ ಕ್ಯಾಂಟೀನ್ ನಿರ್ಮಿಸಲಾಗಿದೆ ಎಂದು ದೂರಿದರು.

ಸರ್ಕಾರದ ನಿಯಮಾವಳಿ ಪ್ರಕಾರ ಕೆರೆ ದಂಡೆ ಹಾಗೂ ಸ್ಮಶಾನ ಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಬಾರದು ಎಂಬ ನಿಯಮಾವಳಿ ಇದೆ. ಆದರೆ, ಅದನ್ನು ಉಲ್ಲಂಘಿಸಿ ಪಾಲಿಕೆ ಹಾಗೂ ಜಿಲ್ಲಾಧಿಕಾರಿ ಅನುಮತಿ ಇಲ್ಲದೇ ಸ್ಮಶಾನ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸುತ್ತಿರುವುದು ಖಂಡನೀಯ. ಇದನ್ನು ವಿರೋಧಿಸಿ ಈ ಭಾಗದ ಜನರೊಂದಿಗೆ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಿದ್ದು, ಪಾಲಿಕೆ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವುದಾಗಿ ಪ್ರತಿಭಟನಾ ನಿರತರು ತಿಳಿಸಿದರು.

ಈ ವೇಳೆ ಮುಖಂಡ ವಿಜಯ ಗುಂಟ್ರಾಳ, ರಂಗನಾಯಕ ತಪೇಲ್ಲಾ, ಬಸವರಾಜ ಜಾಧವ, ಡಾ. ರವೀಂದ್ರ ವೈ, ಅನೂಪ ಬಿಜವಾಡ, ಶ್ರೀನಿವಾಸ ರೆಟ್ಟಿ, ಶರವಣ ಸುಬ್ರಮಣ್ಯ, ಮುನಿಸ್ವಾಮಿ ಭಂಡಾರಿ, ಅರವಿಂದಕುಮಾರ ಹುದಲಿ, ಶಿವಶಂಕರ ಭಂಡಾರಿ, ಸುರೇಶಕುಮಾರ ಎಂ, ಸುನೀಲಕುಮಾರ ಮಂಡಾದಿ, ವಿಶಾಲ ಜಾಧವ, ವಿಶ್ವನಾಥ ಭೂದೂರ ಸೇರಿದಂತೆ ಹಲವರಿದ್ದರು.

Share this article