ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್
ಪ್ರಶ್ನೋತ್ತರ ವೇಳೆ ಬಿಜೆಪಿಯ ಪಿ.ಎಚ್.ಪೂಜಾರ್, ಡಾ.ತಳವಾರ ಸಾಬಣ್ಣ ಹಾಗೂ ಹಣಮಂತ ನಿರಾಣಿ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಬಾಗಲಕೋಟೆ ತೋಟಗಾರಿಕೆ ವಿವಿ ವ್ಯಾಪ್ತಿಯಲ್ಲಿರುವ ಕಾಲೇಜು, ವಿಸ್ತರಣಾ ಘಟಕ ಮುಂತಾದ ಸಂಸ್ಥೆಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು, ಮಂಡ್ಯಕ್ಕೆ ಪ್ರತ್ಯೇಕ ಕೃಷಿ ಮತ್ತು ತೋಟಗಾರಿಕೆ ವಿವಿ ಸ್ಥಾಪನೆಗೆ ತಮ್ಮ ತಕರಾರು ಇಲ್ಲ ಎಂದರು.
ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ, ಅವುಗಳನ್ನು ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು. ವಿವಿ ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವು, ಸೌಲಭ್ಯ ಕೊಡಬೇಕು. ಅದನ್ನು ಬಿಟ್ಟು ಹೊಸ ವಿವಿ ಸ್ಥಾಪನೆ ಮಾಡುವುದು ಸರಿಯಲ್ಲ ಎಂದರು.ಪಿ.ಎಚ್.ಪೂಜಾರ್ ಮಾತನಾಡಿ. ಬಾಗಲಕೋಟೆ ತೋಟಗಾರಿಕೆ ವಿವಿ ದೇಶದಲ್ಲೇ ಶೈಕ್ಷಣಿಕ, ಸಂಶೋಧನಾ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಾ ಬಂದಿದೆ. ಕಳೆದ ಏಳು ವರ್ಷಗಳಿಂದ ಐಸಿಎಆರ್ ನಡೆಸುವ ಕಿರಿಯ ಸಂಶೋಧನಾ ಫೆಲೋಶಿಪ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸುತ್ತಿದೆ. 46 ವಿವಿಧ ತೋಟಗಾರಿಕೆ ಬೆಳೆಗಳ ತಳಿಗಳನ್ನು ಅಭಿವೃದ್ಧಿ ಪಡಿಸಿದೆ, 300 ಆಧುನಿಕ ತಾಂತ್ರಿಕತೆ ಅಭಿವೃದ್ಧಿಗೊಳಿಸಿದೆ. ಹೀಗಿರುವಾಗ ವಿವಿಯನ್ನು ವಿಭಜಿಸುವುದು ಆ ಭಾಗದ ರೈತರಿಗೆ ಅನ್ಯಾಯ ಮಾಡಿದಂತೆ, ವಿವಿಗೆ ಸರ್ಕಾರ ಪೆಟ್ಟು ನೀಡಿದೆ ಎಂದರು.
ಡಾ.ತಳವಾರ ಸಾಬಣ್ಣ ಹಾಗೂ ಹಣಮಂತ ನಿರಾಣಿ ಮಾತನಾಡಿ, ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿದರಲ್ಲದೆ, ಇರುವ ವಿವಿಗಳ ಖಾಲಿ ಹುದ್ದೆ ತುಂಬದೇ ಹೊಸ ವಿವಿ ಸ್ಥಾಪನೆ ಸರಿಯಲ್ಲ ಎಂದು ಹೇಳಿದರು.
ಇದೇ ವಿಷಯವಾಗಿ ಮಾತನಾಡಲು ಅವಕಾಶ ನೀಡಬೇಕೆಂದು ಅನೇಕ ಸದಸ್ಯರು ಮಾಡಿದ ಮನವಿಗೆ ಸ್ಪಂದಿಸಿದ ಸಭಾಪತಿ ಹೊರಟ್ಟಿ ಅವರು ಈ ಬಗ್ಗೆ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿದರು.