ಆಲ್ದೂರು - ಮಲ್ಲಂದೂರು ಹೊಸ ವಿದ್ಯುತ್‌ ಲೈನ್‌ ಮಾರ್ಗಕ್ಕೆ ವಿರೋಧ

KannadaprabhaNewsNetwork |  
Published : May 07, 2025, 12:46 AM IST
ಚಿಕ್ಕಮಗಳೂರು ತಾಲೂಕಿನ ಆಣೂರಿನಲ್ಲಿ ಮಂಗಳವಾರ ಬೆಳೆಗಾರರು ಸಭೆಯನ್ನು ನಡೆಸಿ ಆಲ್ದೂರು - ಮಲ್ಲಂದೂರು ನೂತನ ವಿದ್ಯುತ್‌ ಲೈನ್‌ ಕಾಮಗಾರಿಯನ್ನು ವಿರೋಧಿಸಿದರು. | Kannada Prabha

ಸಾರಾಂಶ

ಆಲ್ದೂರಿನಿಂದ ಮಲ್ಲಂದೂರುವರೆಗೆ ಕೆಪಿಟಿಸಿಎಲ್‌ನಿಂದ ನಿರ್ಮಾಣಗೊಳ್ಳುತ್ತಿರುವ ವಿದ್ಯುತ್ ಲೈನ್ ಅಳವಡಿಕೆ ಮತ್ತು ವಿತರಣಾ ಕೇಂದ್ರದ ಯೋಜನೆಯನ್ನು ವಿರೋಧಿಸಿ ಆಣೂರು ಬೆಳೆಗಾರರ ಸಂಘದ ಆಶ್ರಯದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಂಡು ತಕ್ಷಣ ಕಾಮಗಾರಿ ಸ್ಥಗಿತಗೊಳಿಸಲು ಆಗ್ರಹಿಸಿದೆ.

ಕಾಮಗಾರಿ ಕೈಬಿಡಲು ಆಣೂರು ಬೆಳೆಗಾರರ ಸಂಘದ ಸಭೆಯಲ್ಲಿ ನಿರ್ಣಯ

ಚಿಕ್ಕಮಗಳೂರು, ಮೇ 6

ಆಲ್ದೂರಿನಿಂದ ಮಲ್ಲಂದೂರುವರೆಗೆ ಕೆಪಿಟಿಸಿಎಲ್‌ನಿಂದ ನಿರ್ಮಾಣಗೊಳ್ಳುತ್ತಿರುವ ವಿದ್ಯುತ್ ಲೈನ್ ಅಳವಡಿಕೆ ಮತ್ತು ವಿತರಣಾ ಕೇಂದ್ರದ ಯೋಜನೆಯನ್ನು ವಿರೋಧಿಸಿ ಆಣೂರು ಬೆಳೆಗಾರರ ಸಂಘದ ಆಶ್ರಯದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಂಡು ತಕ್ಷಣ ಕಾಮಗಾರಿ ಸ್ಥಗಿತಗೊಳಿಸಲು ಆಗ್ರಹಿಸಿದೆ.

ಆಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಭವನದಲ್ಲಿ ಮಂಗಳವಾರ ಸಭೆ ಸೇರಿದ ಬೆಳೆಗಾರರು ಯೋಜನೆಯಿಂದಾಗುವ ಪರಿಸರ ಹಾನಿ ಹಾಗೂ ರೈತರು ಬೆಳೆಗಾರರಿಗಾಗಿರುವ ಅನ್ಯಾಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜಿಲ್ಲಾಡಳಿತ ಕೂಡಲೇ ಮಧ್ಯ ಪ್ರವೇಶಿಸಿ ಕಾಮಗಾರಿ ಸ್ಥಗಿತಗೊಳಿಸಿ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ವಸ್ತಾರೆ ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಡಿ.ಮಲ್ಲೇಶ್ ಮಾತನಾಡಿ, ಆಲ್ದೂರಿನಿಂದ ಮಲ್ಲಂದೂರುವರೆಗೆ ಕೆಪಿಟಿಸಿಎಲ್ ನಿರ್ಮಾಣಗೊಳ್ಳುತ್ತಿರುವ ವಿದ್ಯುತ್‌ ಲೈನ್ ಅಳವಡಿಕೆಯಿಂದಾಗುವ ತೊಂದರೆಗಳ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳ ಸಭೆಯಲ್ಲಿ ತಿಳಿಸಿದ್ದೇವೆ. ಈ ಯೋಜನೆಯನ್ನು ನಾವು ವಿರೋಧಿಸುತ್ತೇವೆ ಎಂಬುದನ್ನು ತಿಳಿಸಿದ್ದೇವೆ ಎಂದರು.ಸುಮಾರು 13 ರಿಂದ 14 ಕಿ.ಮೀ.ನಷ್ಟು ಲೈನ್ ಅಳವಡಿಸಬೇಕಾಗುತ್ತದೆ. ಬಹಳಷ್ಟು ಜನರ ಜಮೀನು ಹೋಗುತ್ತದೆ. ಲಕ್ಷಾಂತರ ಮರಗಳು ನಾಶವಾಗುತ್ತವೆ. ಅಡಕೆ ತೋಟಗಳಿಗೆ ಹಾನಿಯಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಅರಣ್ಯಕ್ಕೆ ಹಾನಿ ಯುಂಟಾಗುತ್ತದೆ. ಇದಾವುದನ್ನೂ ಸರಿಯಾಗಿ ಸಮೀಕ್ಷೆ ಮಾಡಿಲ್ಲ, ಇದರ ಗುತ್ತಿಗೆದಾರರು ಯಾರೆಂದು ನಮಗೆ ಈವರೆಗೆ ಗೊತ್ತಿಲ್ಲ. ರೌಡಿಗಳ ರೀತಿ ದೌರ್ಜನ್ಯ ಮಾಡಿ ಕಾಮಗಾರಿ ನಡೆಸುವುದಕ್ಕೆ ನಾವು ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಯೋಜನೆ ಸ್ಥಗಿತಗೊಳಿಸಿ ಚಿಕ್ಕಮಗಳೂರಿನಿಂದ ಅಳವಡಿಸಲಾಗುತ್ತಿರುವ ಎಕ್ಸ್‌ಪ್ರೆಸ್‌ ಲೈನ್ ಮೂಲಕವೇ ವಿದ್ಯುತ್ ಪೂರೈಸಲು ಸಲಹೆ ಮಾಡಿದ್ದೆವಾದರೂ ಪರಿಗಣಿಸಿಲ್ಲ ಎಂದು ಹೇಳಿದರು.ಆಲ್ದೂರು - ಮಲ್ಲಂದೂರು ಮಾರ್ಗದಲ್ಲಿ ಮುತ್ತೋಡಿ ವನ್ಯಜೀವಿ ಅರಣ್ಯ ಬರುತ್ತದೆ. ಅರಣ್ಯ ಇಲಾಖೆ ಅನುಮತಿ ಪಡೆದಿಲ್ಲ. ಜಕ್ಕನಹಳ್ಳಿ ವರೆಗೆ ಕ್ಲಿಯರೆನ್ಸ್ ಇದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇದರ ಜೊತೆಗೆ ಬಫರ್‌ ಝೋನ್ ಬರುತ್ತದೆ. ಅಲ್ಲದೆ ಕಾಫಿ ಬೋರ್ಡ್, ತೋಟಗಾರಿಕೆ ಇಲಾಖೆ ಯಾವುದರಿಂದಲೂ ಕ್ಲಿಯರೆನ್ಸ್ ಪಡೆದಿಲ್ಲ ಇದರ ಜೊತೆಗೆ ಬೆಳೆಗಾರರು, ನಿವಾಸಿಗಳ ವಿರೋಧವೂ ಇದೆ. ಕೆಲವು ಬೆಳೆಗಾರರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಇಷ್ಟಾದರೂ ದಬ್ಬಾಳಿಕೆ ಮಾಡಿ, ಕೆಲವು ಕಡೆ ಗುಂಡಿ ತೆಗೆದು ಗೂಂಡಾಗಿರಿ ಮಾಡುವ ರೀತಿ ವರ್ತಿಸುತ್ತಿರುವುದನ್ನು ಖಂಡಿಸಿದರು.ಈ ಬಾರಿ ಉತ್ತಮ ಮಳೆ ಬಂದಿದೆ. ಕಾಫಿಗೆ ಉತ್ತಮ ಬೆಲೆ ಇದೆ. ಇಂತಹ ಸಂದರ್ಭದಲ್ಲಿ ಎಷ್ಟು ಜಮೀನು ಹೋಗುತ್ತದೆ, ಅದಕ್ಕೆ ಎಷ್ಟು ಬೆಲೆ ನಿಗಧಿಪಡಿಸಬೇಕು ಎನ್ನುವ ಯಾವ ಮಾಹಿತಿ ಇಲ್ಲದೆ ಕಾಮಗಾರಿ ಮಾಡಲಾಗುತ್ತಿದೆ. ಕೂಡಲೇ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಮತ್ತು ಜಿಲ್ಲಾಧಿಕಾರಿಗಳು ಗಮನಹರಿಸಿ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.ಆಣೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಪಿ. ರಾಜೇಂದ್ರ ಮಾತನಾಡಿ, ಈ ಯೋಜನೆ ಕೈಬಿಡಬೇಕೆಂದು ಒತ್ತಾಯಿಸಿ ಸಾಕಷ್ಟು ಪ್ರತಿಭಟನೆ ನಡೆಸಿದ್ದೆವು. ಕೆಪಿಟಿಸಿಎಲ್ ಆಗಲಿ, ಜಿಲ್ಲಾಡಳಿತವಾಗಲಿ ಸೂಕ್ತ ರೀತಿ ಸ್ಪಂದಿಸದ ಹಿನ್ನೆಲೆಯಲ್ಲಿ 9 ಮಂದಿ ಬೆಳೆಗಾರರು ಹೈಕೋರ್ಟ್‌ನಿಂದ ಯಥಾಸ್ಥಿತಿ ಆದೇಶ ತಂದಿದ್ದೇವೆ. ಮತ್ತೆ ಅಹವಾಲು ಆಲಿಸಬೇಕು ಎಂದು ಜಿಲ್ಲಾಧಿಕಾರಿ ಗಳಿಗೆ ಆದೇಶಿಸಿದೆ ಎಂದು ತಿಳಿಸಿದರು.

ಭೂಮಿಯೊಳಗೆ ಕೇಬಲ್ ಕೊಂಡೊಯ್ಯುವುದು ಹಾಗೂ ಎಕ್ಸ್‌ಪ್ರೆಸ್ ಲೈನನ್ನು ಅಭಿವೃದ್ಧಿಪಡಿಸಬಾರದೇಕೆ ಎಂದು ನ್ಯಾಯಾಲಯ ಮೌಖಿಕವಾಗಿ ಪ್ರಶ್ನಿಸಿರುವುದರಿಂದ ಜಿಲ್ಲಾಧಿಕಾರಿಗಳು ಆಲ್ದೂರು - ಮಲ್ಲಂದೂರು ವಿದ್ಯುತ್ ಲೈನ್‌ಅನ್ನು ಕೈಬಿಟ್ಟು ಭೂಮಿಯೊಳಗಿನಿಂದ ಅಥವಾ ಹಾಲಿ ಇರುವ ಎಕ್ಸ್‌ಪ್ರೆಸ್ ಲೈನ್‌ನನ್ನೇ ಅಭಿವೃದ್ಧಿಪಡಿಸಿ ಸಂಪರ್ಕ ಕೊಡಬೇಕು ಎಂದು ಒತ್ತಾಯಿಸುತ್ತೇವೆ ಎಂದರು.ಗ್ರಾ.ಪಂ.ಮಾಜಿ ಸದಸ್ಯ ತಿಮ್ಮಯ್ಯ ಮಾತನಾಡಿ, ನನಗಿರುವುದು ಅರ್ಧ ಎಕರೆ ಜಮೀನು ಮಾತ್ರ, ಅದು ಈಗ ಆಲ್ದೂರು - ಮಲ್ಲಂದೂರು ವಿದ್ಯುತ್‌ಲೈನ್ ಯೋಜನೆಗೆ ಹೋಗುತ್ತಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಸಾಕಷ್ಟು ವಿರೋಧಿಸಿ ಜಿಲ್ಲಾಡಳಿಕ್ಕೆ ಮನವಿ ಮಾಡಿದ್ದೇವೆ. ಹೋರಾಟ ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಯೋಜನೆಯಿಂದ ಪರಿಸರಕ್ಕೆ ಸಾಕಷ್ಟು ಹಾನಿ ಸಂಭವಿಸುವುದರಿಂದ ಪರಿಸರ ವಾದಿಗಳು ಇದರ ವಿರುದ್ಧ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಆಣೂರು ನಟರಾಜ್, ಕಟ್ರುಮನೆ ಮಂಜುನಾಥ್, ಚಂದನ್ ಆಶೋಕ್, ಸಾರ್ಥಕ್ ಮಾಗರಹಳ್ಳಿ, ಮಲ್ಲಂದೂರು ಪುಟ್ಟೇಗೌಡ, ತಳಿಹಳ್ಳ ಮಲ್ಲೇಶ್, ಪೂರ್ಣೇಶ್ ಕುಡುವಳ್ಳಿ, ಬ್ಯಾರವಳ್ಳಿ ಲಕ್ಷ್ಮಣ್, ಕಟ್ರುಮನೆ ರಘುನಾಥ್, ನಾರಾಯಣ್ ಹಾಜರಿದ್ದರು. 6 ಕೆಸಿಕೆಎಂ 1

ಚಿಕ್ಕಮಗಳೂರು ತಾಲೂಕಿನ ಆಣೂರಿನಲ್ಲಿ ಮಂಗಳವಾರ ಬೆಳೆಗಾರರು ಸಭೆ ನಡೆಸಿ ಆಲ್ದೂರು - ಮಲ್ಲಂದೂರು ನೂತನ ವಿದ್ಯುತ್‌ ಲೈನ್‌ ಕಾಮಗಾರಿಯನ್ನು ವಿರೋಧಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು
ಪರಂ ಸಿಎಂ ಆಗಲಿ : 25ಕ್ಕೂ ಹೆಚ್ಚು ಮಠಾಧೀಶರ ಆಗ್ರಹ