ಕನ್ನಡಪ್ರಭ ವಾರ್ತೆ ಹೊಸಕೋಟೆ
ನಗರದ ಪ್ರೆಸ್ ಕ್ಲಬ್‌ನಲ್ಲಿ ಕೋಳಿ ಸಾಕಾಣಿಕೆದಾರ ರೈತರ ಕ್ಷೇಮಾಭಿವೃದ್ಧಿ ಸಂಘದ ಹೊಸಕೋಟೆ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ಆರು ತಿಂಗಳಿನಿಂದ ರೈತರಿಗೆ ನ್ಯಾಯಯುತ ಸಾಕಾಣಿಕೆ ವೆಚ್ಚ ದೊರಕಿಸಿಕೊಡುವಂತೆ ಸಚಿವರು, ಶಾಸಕರು ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ರೈತರು ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ, 2020ರಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಪ್ರತಿ ಕೆಜಿ ಕೋಳಿಗೆ ₹6.20 ಸಾಕಾಣಿಕೆ ವೆಚ್ಚ ನಿಗದಿಪಡಿಸಲಾಗಿದ್ದು ಪ್ರತಿವರ್ಷ ಕೆಜಿಗೆ 50 ಪೈಸೆ ಹೆಚ್ಚಳಕ್ಕೆ ಆದೇಶವಿದ್ದು, ಕೋವಿಡ್ ಹಿನ್ನೆಲೆ ಆದೇಶ ನೆನೆಗುದಿಗೆ ಬಿದ್ದು ಸ್ಥಗಿತಗೊಂಡಿತ್ತು. ಕಳೆದ ಐದು ವರ್ಷಗಳಿಂದ ರೈತರಿಗೆ ದೊರೆಯುತ್ತಿರುವ ಸಾಕಾಣಿಕೆ ವೆಚ್ಚದಲ್ಲಿ ಗಮನಾರ್ಹ ಏರಿಕೆಯಾಗಿಲ್ಲ. ಆದರೆ ಕೋಳಿ ಸಾಕಲು ಅತ್ಯವಶ್ಯವಾದ ಮೇವು, ಕಾರ್ಮಿಕರ ಕೂಲಿ, ಇದ್ದಿಲು, ಭತ್ತದ ಹುಡಿ, ವಿದ್ಯುತ್ ದರ ಸೇರಿ ನಿರ್ವಹಣಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಪ್ರಸ್ತುತ ಕಂಪನಿಗಳು ಪ್ರತಿ ಕೆಜಿಗೆ ಕೇವಲ ₹6.20 ನೀಡುತ್ತಿದ್ದು, ಕೋಳಿ ಸಾಕಣೆದಾರರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ಕೋಳಿ ಸಾಕಾಣಿಕೆ ರೈತರಿದ್ದು, ಅನೇಕ ಕುಟುಂಬಗಳು ಲಕ್ಷಾಂತರ ರುಪಾಯಿ ಬಂಡವಾಳ ಹೂಡಿ, ಬ್ಯಾಂಕ್‌ಗಳಿಂದ ಸಾಲ ಪಡೆದು ಈ ಉದ್ಯಮ ಅವಲಂಬಿಸಿವೆ. ರೈತರಿಗೆ ನ್ಯಾಯಯುತ ಸಾಕಾಣಿಕೆ ವೆಚ್ಚ ದೊರೆಯದಿದ್ದರೆ ಉದ್ಯಮ ನಡೆಸುವುದು ಕಷ್ಟವಾಗಲಿದೆ. ಆದ್ದರಿಂದ ನವೆಂಬರ್ ೨೫ರಿಂದ ಯಾವುದೇ ರೈತರು ಕೋಳಿ ಮರಿಗಳನ್ನು ಸ್ವೀಕರಿಸಬಾರದು ಹಾಗೂ ಸಾಕಿರುವ ಕೋಳಿಗಳನ್ನು ಕಂಪನಿಗಳಿಗೆ ಹಸ್ತಾಂತರಿಸಬಾರದು. ನೂರಾರು ಕುಟುಂಬಗಳ ಬದುಕು ಮತ್ತು ಭವಿಷ್ಯಕ್ಕಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಎಲ್ಲಾ ರೈತರು ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಕೋಳಿ ಸಾಕಾಣಿಕೆದಾರ ರೈತರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎಸ್. ಮಂಜುನಾಥ್, ತಾಲೂಕು ಅಧ್ಯಕ್ಷ ನಂಜುಂಡಯ್ಯ, ಉಪಾಧ್ಯಕ್ಷ ಎ.ಆರ್. ಕೃಷ್ಣಪ್ಪ, ಕಾರ್ಯದರ್ಶಿ ಪಿ. ನಾರಾಯಣಸ್ವಾಮಿ, ಸದಸ್ಯರಾದ ಸೋಮಣ್ಣ, ರಮೇಶ್, ಸಿ.ಎಂ. ಚೇತನ್, ಮಹೇಶ್ ಕೋಟಿ, ಸುಬ್ರಮಣಿ, ಸುನೀಲ್, ಮಾರಣ್ಣ, ಮುರಳಿ, ನಾರಾಯಣ ಗೌಡ ಸೇರಿ ಮತ್ತಿತರರು ಉಪಸ್ಥಿತರಿದ್ದರು.