ಕನ್ನಡಪ್ರಭ ವಾರ್ತೆ ಮಂಡ್ಯ
ಪಡಿತರ ಆಹಾರ ಪದಾರ್ಥಗಳ ಪೂರೈಕೆಯಲ್ಲಿ ಈ ಬಾರಿ ಮೂರು ವಾರ ವಿಳಂಬವಾಗಿದೆ. ಜೂ.24 ರಿಂದ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಆಹಾರ ಪದಾರ್ಥಗಳನ್ನು ಪೂರೈಸಲಾಗುತ್ತಿದೆ. ಕೇವಲ 6 ದಿನಗಳೊಳಗೆ ಪಡಿತರ ವಿತರಣೆ ಮುಗಿಸಬೇಕೆಂದು ಆದೇಶಿಸಿರುವುದು ಅಂಗಡಿ ಮಾಲೀಕರನ್ನು ದಿಕ್ಕೆಡಿಸುವಂತೆ ಮಾಡಿದೆ.
ಪ್ರತಿ ತಿಂಗಳು ಹತ್ತನೇ ತಾರೀಖಿನೊಳಗೆ ಆಹಾರ ಪದಾರ್ಥಗಳು ನ್ಯಾಯಬೆಲೆ ಅಂಗಡಿಯನ್ನು ಬಂದು ಸೇರುತ್ತಿದ್ದವು. ಆಗ 20 ದಿನಗಳ ಕಾಲಾವಕಾಶ ದೊರೆತು ಪಡಿತರ ವಿತರಣೆ ಸುಗಮವಾಗಿ ನಡೆಯುತ್ತಿತ್ತು. ಜೂನ್ ಮಾಹೆ ಪಡಿತರ ಬಂದಿರುವುದೇ ಕೊನೆಯ ವಾರದಲ್ಲಿ. ಅದಕ್ಕೂ ಕಾಲಾವಕಾಶ ನೀಡದೆ ಆರು ದಿನದಲ್ಲೇ ವಿತರಣೆ ಮುಗಿಸುವಂತೆ ಆದೇಶ ಹೊರಡಿಸಿದೆ. ಹೇಗೋ ಇದೊಂದು ತಿಂಗಳು ಕೊಟ್ಟುಬಿಡೋಣವೆಂದರೆ ಸರ್ವರ್ ಭೂತ ಎದುರಾಗಿದೆ.ಸರ್ವರ್ ಸಮಸ್ಯೆಯಿಂದ ನಿತ್ಯ ಎಂಟರಿಂದ ಹತ್ತು ಮಂದಿಗೆ ಮಾತ್ರ ಬೆಳಗ್ಗೆಯಿಂದ ಸಂಜೆಯವರೆಗೂ ಕೊಡಲಾಗುತ್ತಿದೆ. ಒಂದು ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಕನಿಷ್ಠ 200 ರಿಂದ 1000 ಜನರಿದ್ದಾರೆ. ಕಡಿಮೆ ಪಡಿತರದಾರರಿರುವ ನ್ಯಾಯಬೆಲೆ ಅಂಗಡಿ ಮಾಲೀಕರು ಹೇಗೋ ಪರಿಸ್ಥಿತಿಯನ್ನು ನಿಭಾಯಿಸಬಲ್ಲರು. 700 ರಿಂದ 1000 ಕಾರ್ಡ್‌ದಾರರಿರುವ ಅಂಗಡಿಗಳ ವ್ಯಾಪ್ತಿಯಲ್ಲಿ ಪಡಿತರ ವಿತರಣೆ ತೀವ್ರ ತ್ರಾಸದಾಯವಾಗಿದೆ.
ಇನ್ನೂ ಅನ್ನಭಾಗ್ಯ ಅಕ್ಕಿ ಅಂಗಡಿಗಳಿಗೆ ಪೂರೈಕೆಯಾಗುತ್ತಲೇ ಇದೆ. ಪೂರೈಕೆಯಾದ ಅಕ್ಕಿಯನ್ನು ಸೋಮವಾರದೊಳಗೆ ವಿತರಿಸುವುದಾದರೂ ಹೇಗೆ. ಬಾಯಲ್ಲಿ ಆದೇಶ ಮಾಡುವುದು ಸುಲಭ. ಅದನ್ನು ಕಾರ್ಯಗತಗೊಳಿಸುವ ನಮಗೆ ಅದರ ಕಷ್ಟ ಏನೆಂದು ಗೊತ್ತಿದೆ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ಅಸಮಾಧಾನದಿಂದ ಹೇಳಿದ್ದಾರೆ.
ಕೆಲವು ಪ್ರಜ್ಞಾವಂತ ಪಡಿತರದಾರರು ನಮ್ಮ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುತ್ತಾರೆ. ಆದರೆ, ಮಹಿಳೆಯರು, ಅನಕ್ಷರಸ್ಥರಿಗೆ, ಬಡವರ್ಗದ ಜನರಿಗೆ ಸರ್ವರ್ ಸಮಸ್ಯೆ ಹೇಳಿದರೆ ಅದು ಅವರಿಗೆ ಅರ್ಥವಾಗುವುದಿಲ್ಲ. ಅಂಗಡಿ ಮಾಲೀಕರೇ ಪಡಿತರ ಪದಾರ್ಥಗಳನ್ನು ಏನೋ ಮಾಡಿಕೊಳ್ಳುತ್ತಿದ್ದಾರೆಂದು ದೂರುತ್ತಾರೆ. ನಾವು ಅನುಭವಿಸುವ ವೇದನೆ ಆಹಾರ ಇಲಾಖೆ ಅಧಿಕಾರಿಗಳಿಗೆ ಅರ್ಥವಾಗುವುದೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಅಂಗಡಿಗಳ ಎದುರು ಜನರ ಸಾಲು