ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಆದೇಶ, ವಿಜಯೋತ್ಸವ

KannadaprabhaNewsNetwork |  
Published : Feb 02, 2025, 11:46 PM IST
1ಕೆಪಿಎಲ್22 ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ವಿಜಯೋತ್ಸವ ಆಚರಿಸಲಾಯಿತು. | Kannada Prabha

ಸಾರಾಂಶ

ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ ಹಿನ್ನೆಲೆ ನಗರದಲ್ಲಿ ಕಟ್ಟಡ ಕಾರ್ಮಿಕರ ಸಂಘಟನೆಯಿಂದ ವಿಜಯೋತ್ಸವ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಕಟ್ಟಡ ಕಾರ್ಮಿಕರ ಎಲ್ಲ ಮಕ್ಕಳಿಗೂ ೨೦೨೧ ಅಧಿಸೂಚನೆ ಅನ್ವಯವೇ ಬಾಕಿ ಇರುವ ಮೂರು ವರ್ಷದ ಶೈಕ್ಷಣಿಕ ಧನಸಹಾಯ ವಿತರಿಸಲು ತ್ವರಿತಗತಿಯಲ್ಲಿ ಕ್ರಮವಹಿಸಬೇಕೆಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ ಹಿನ್ನೆಲೆ ನಗರದಲ್ಲಿ ಕಟ್ಟಡ ಕಾರ್ಮಿಕರ ಸಂಘಟನೆಯಿಂದ ವಿಜಯೋತ್ಸವ ಆಚರಿಸಲಾಯಿತು.

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು ೨೦೨೩ರಿಂದ ಶೇ. ೭೦ರಿಂದ ಶೇ. ೮೦ರಷ್ಟು ಕಡಿತ ಮಾಡಿತ್ತು. ಕಲ್ಯಾಣ ಮಂಡಳಿಯ ಈ ನಿರ್ಧಾರವನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಹೈಕೋರ್ಟ್ ಮೊರೆ ಹೋಗಿತ್ತು. ಈ ಅರ್ಜಿಯನ್ನು ಮಾನ್ಯಮಾಡಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು ೨೦೨೪ರ ಏಪ್ರಿಲ್ ನಲ್ಲೇ ಮಧ್ಯಂತರ ಆದೇಶ ನೀಡಿ, ಅರ್ಜಿ ಸಲ್ಲಿಸಿದ ಇಬ್ಬರು ವಿದ್ಯಾರ್ಥಿನಿಯರಿಗೆ ದಂಡ ಸಹಿತ ಶೈಕ್ಷಣಿಕ ಸಹಾಯಧನ ಪಾವತಿಸುವಂತೆ ಆದೇಶಿಸಿತ್ತು. ಇದೀಗ ಅಂತಿಮ ತೀರ್ಪು ಹೊರ ಬಂದಿದ್ದು, ಅದರ ಅನ್ವಯ ೨೦೨೦-೨೧, ೨೦೨೧-೨೨ ಹಾಗೂ ೨೦೨೨-೨೩ನೇ ಸಾಲಿನ ಶೈಕ್ಷಣಿಕ ಸಹಾಯಧನವನ್ನು ೨೦೨೧ರ ಅಧಿಸೂಚನೆ ಅನ್ವಯವೇ ಬಿಡುಗಡೆ ಮಾಡುವಂತೆ ಆದೇಶ ನೀಡಿದೆ. ಆದೇಶವನ್ನು ಜಾರಿ ಮಾಡಲು ಅಗತ್ಯ ಕ್ರಮವಹಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ ೨೦೨೩ರ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಿ ಈ ಹಿಂದಿನ ೨೦೨೧ರ ಅಧಿಸೂಚನೆ ಪ್ರಕಾರವೇ ವಿದ್ಯಾರ್ಥಿ ವೇತನ ಪಾವತಿಸಲು ಆದೇಶಿಸಿದೆ.

ಕಲ್ಯಾಣ ಮಂಡಳಿಯಾಗಲಿ ಅಥವಾ ಸರ್ಕಾರವು ಶೈಕ್ಷಣಿಕ ಸಹಾಯಧನದ ಮೊತ್ತವನ್ನು ಪರಿಷ್ಕರಿಸುವಾಗ ಹೈಕೋರ್ಟ್‌ನ ಈ ಆದೇಶಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಳ್ಳಬಹುದು ಎಂದು ಹೇಳಿದೆ. ಶೈಕ್ಷಣಿಕ ನೆರವಿನ ಯಾವುದೇ ಪರಿಷ್ಕರಣೆಯು ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬಗಳ ಕಲ್ಯಾಣವೇ ಅತ್ಯಂತ ಆದ್ಯತೆ ಆಗಿರಬೇಕೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ನ್ಯಾಯಾಲಯಕ್ಕೆ ಅಲೆದಾಡದಂತೆ ಭವಿಷ್ಯದಲ್ಲಿ ನೋಡಿಕೊಳ್ಳಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ ಎಂದು ಸಂಘಟನೆಯವರು ತಿಳಿಸಿದ್ದಾರೆ.

ಪ್ರಮುಖರಾದ ಖಾಸಿಂ ಸರ್ದಾರ್, ಮಂಜಪ್ಪ, ಹೊನ್ನೂರಸಾಬ್, ಶಿವಾನಂದಪ್ಪ, ಮಹಿಬೂಬ್, ಸಾವಿತ್ರಿ, ದುರ್ಗಮ್ಮ, ಅಲ್ಲಾಭಿ ಶಕ್ಷ ವಲಿ ಇನ್ನು ಮುಂತಾದವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ