ಮತ್ತೆ ತಮಿಳುನಾಡಿಗೆ 12 ದಿನ 6 ಸಾವಿರ ಕ್ಯುಸೆಕ್ ನೀರು ನೀಡಲು ಆದೇಶ: ಖಂಡನೆ

KannadaprabhaNewsNetwork |  
Published : Sep 09, 2026, 01:45 AM IST
8ಕೆಎಂಎನ್ ಡಿ28,29 | Kannada Prabha

ಸಾರಾಂಶ

ಕಾವೇರಿ ನೀರು ಸಮಿತಿ ಮತ್ತು ಪ್ರಾಧಿಕಾರವು ಮತ್ತೆ 15 ದಿನಗಳ ಕಾಲ ಪ್ರತಿನಿತ್ಯ 6 ಸಾವಿರ ಕ್ಯುಸೆಕ್ ನೀರು ಬಿಡಲು ಆದೇಶ ಮಾಡಿರುವುದು ಅವೈಜ್ಞಾನಿಕವಾಗಿದೆ. ಕರ್ನಾಟಕ ಪರ ಕಳೆದ ಹಲವು ವರ್ಷಗಳಿಂದಲೂ ಆದೇಶ ಮಾಡಲೇ ಇಲ್ಲ. ಸ್ಥಳೀಯ ವಿಚಾರವನ್ನು ತಿಳಿಯುವುದಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಆದೇಶ ನೀಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರಗಳ ಆದೇಶ ಖಂಡಿಸಿ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಸಂಜೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸೇರಿದ ಕನ್ನಡ ಸೇನೆ, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸಮಿತಿ ಮತ್ತು ಪ್ರಾಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಬೆಂಗಳೂರು- ಮೈಸೂರು ಹೆದ್ದಾರಿಗಳಿದು ಪ್ರತಿಭಟನೆ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ ಕಾರ್ಯಕರ್ತರು ಸಮಿತಿ ಮತ್ತು ಪ್ರಾಧಿಕಾರಿಗಳಿಂದ ಮತ್ತೆ ರಾಜ್ಯಕ್ಕೆ ಅನ್ಯಾಯವಾಗಿರುವುದನ್ನು ತೀವ್ರವಾಗಿ ಖಂಡಿಸಿದರು.

ಮಳೆ ಅಭಾವದಿಂದ ಕಾವೇರಿ ಜಲಾಯನ ಪ್ರದೇಶದ ವ್ಯಾಪ್ತಿಯ ಅಣೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ನಮ್ಮಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಆದರೆ, ತಮಿಳುನಾಡು ಕೃಷಿ ಚಟುವಟಿಕೆಗಳಿಗೆ ನೀರು ಕೊಡಲು ಆದೇಶ ಮಾಡಿದೆ ಎಂದು ದೂರಿದರು.

ಸಮಿತಿ ಮತ್ತು ಪ್ರಾಧಿಕಾರವು ಮತ್ತೆ 15 ದಿನಗಳ ಕಾಲ ಪ್ರತಿನಿತ್ಯ 6 ಸಾವಿರ ಕ್ಯುಸೆಕ್ ನೀರು ಬಿಡಲು ಆದೇಶ ಮಾಡಿರುವುದು ಅವೈಜ್ಞಾನಿಕವಾಗಿದೆ. ಕರ್ನಾಟಕ ಪರ ಕಳೆದ ಹಲವು ವರ್ಷಗಳಿಂದಲೂ ಆದೇಶ ಮಾಡಲೇ ಇಲ್ಲ. ಸ್ಥಳೀಯ ವಿಚಾರವನ್ನು ತಿಳಿಯುವುದಿಲ್ಲ ಎಂದು ಆರೋಪಿಸಿದರು.

ಈ ಆದೇಶ ರೈತರ ಪಾಲಿಗೆ ಮರಣ ಶಾಸನವಾಗಿದೆ. ಇಲ್ಲಿನ ವಸ್ತು ಸ್ಥಿತಿ ತಿಳಿಸಲು ರಾಜ್ಯ ಸರ್ಕಾರ, ಅಧಿಕಾರಿಗಳು, ಸಚಿವರು ವಿಫಲರಾಗಿದ್ದಾರೆ. ರೈತರ ಹಿತ ಕಾಯಲು ರಾಜ್ಯ ಸರ್ಕಾರ ವಿಫಲವಾಗಿದೆ. ಕೂಡಲೇ ರಾಜ್ಯದ ಜನತೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ತಮಿಳುನಾಡು ರೈತರು ಮೂರು ಬೆಳೆ ಬೆಳೆಯಲು ಅವಕಾಶ ನೀಡಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ರೈತರು ಒಂದು ಬೆಳೆ ಬೆಳೆಯಲು ಅವಕಾಶ ನೀಡಿಲ್ಲ. ಮುಂದೆ ಬೆಂಗಳೂರಿನ ಜನತೆಗೆ ಕುಡಿಯಲು ನೀರಿಗೂ ತಾತ್ಸಾರ ಉಂಟಾಗಲಿದೆ ಎಂದು ಎಚ್ಚರಿಸಿದರು.

ಈ ಹಿಂದೆ ಮೂರು ಬಾರಿಯೂ ಕರ್ನಾಟಕದ ವಿರುದ್ಧ ಸಮಿತಿ ಮತ್ತು ಪ್ರಾಧಿಕಾರಿಗಳು ಆದೇಶ ನೀಡಿವೆ. ಈಗ ನಾಲ್ಕನೇ ಬಾರಿಯೂ ರಾಜ್ಯಕ್ಕೆ ಅನ್ಯಾಯವಾಗಿದೆ. ತಮಿಳುನಾಡಿಗೆ ಮತ್ತೆ ಯಾವುದೇ ಕಾರಣಕ್ಕೂ ನೀರು ಬಿಡಬಾರದು. ಕೇಂದ್ರ ಪ್ರಾಧಿಕಾರ, ಸಮಿತಿಯ ತನಿಖಾ ತಂಡ ರಾಜ್ಯಕ್ಕೆ ಬಂದು ಇಲ್ಲಿನ ಪರಿಸ್ಥಿತಿ ಅರಿತು ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಆದೇಶ ಪಾಲಿಸಿ ನೀರು ಬಿಡುವ ಮೂಲಕ ರೈತರ ಎದೆ ಮೇಲೆ ಚಪ್ಪಡಿ ಎಳೆದಿದೆ. ರೈತರ ಬಾಯಿಗೆ ಮಣ್ಣು ಹಾಕಿದೆ. ಇದು ಸರ್ಕಾರದ 6ನೇ ಗ್ಯಾರಂಟಿ ಭಾಗ್ಯ. ಮತ್ತೆ ನೀರು ಬಿಡುವಂತೆ ನೀಡಿರುವ ಆದೇಶವನ್ನು ಮುಖ್ಯಮಂತ್ರಿಗಳು ಧಿಕ್ಕರಿಸಬೇಕು. ಒಂದು ವೇಳೆ ನೀರು ಬಿಡಲು ಮುಂದಾದರೆ ರಾಜ್ಯದ ರೈತರಿಗೆ ವಿಷಕೊಟ್ಟು ನೀರು ಬಿಡುಗಡೆ ಮಾಡುವಂತೆ ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ರೈತ ಮುಖಂಡ ಶಿವಳ್ಳಿ ಚಂದ್ರಶೇಖರ್, ಹೋರಾಟಗಾರರ ಶಿವಕುಮಾರ್ ಆರಾಧ್ಯ, ಸಿಟಿ ಮಂಜು ಸೇರಿದಂತೆ ಹಲವರು ರೈತರು, ಹೋರಾಟಗಾರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೋಷಿತ ಸಮುದಾಯದ ನೌಕರರು ಸಂಘಟಿತರಾಗಬೇಕು: ಕೆ.ಶೇಷಾದ್ರಿ
ಹನೂರು: ಹಳ್ಳದ ದಂಡೆಯಲ್ಲೇ ಅಂತ್ಯಸಂಸ್ಕಾರ