- ಎಸ್ಸೆಸ್ಸೆಲ್ಸಿ ಫಲಿತಾಂಶ ಕಳಪೆ ಹಿನ್ನೆಲೆಯಲ್ಲಿ ಒಂದು ವರ್ಷದ ಬಡ್ತಿ ತಡೆ
ಕನ್ನಡಪ್ರಭ ವಾರ್ತೆ ಯಾದಗಿರಿ
ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಯಾದಗಿರಿ ಜಿಲ್ಲೆಯ ಫಲಿತಾಂಶ ಗಣನೀಯವಾಗಿ ಕುಸಿದಿತ್ತು. ಈ ಹಿನ್ನಲೆ ಜಿಲ್ಲಾವಾರು ಸರಾಸರಿ (ಶೇ.54.43) ಗಿಂತ ಕಡಮೆ ಇರುವ ಅನುದಾನಿತ/ಸರ್ಕಾರಿ ಶಾಲಾ ಶಿಕ್ಷಕರ ಒಂದು ವರ್ಷದ ಬಡ್ತಿ (ಇನ್ಕ್ರಿಮೆಂಟ್)ಯನ್ನು ಜೂ. 24 ರಂದು ಕಡಿತಗೊಳಿಸಿ ಜಿ.ಪಂ ಆದೇಶ ಹೊರಡಿಸಿತ್ತು. ನಿರೀಕ್ಷಿತ ಟೀಕೆ ವ್ಯಕ್ತವಾದ ಬೆನ್ನಲ್ಲೇ ಜಿಲ್ಲಾ ಪಂಚಾಯಿತಿ ಸಿಇಓ ಗರೀಮಾ ಪನ್ವಾರ್ ಗುರುವಾರ ತಮ್ಮ ಆದೇಶವನ್ನು ಹಿಂಪಡೆದಿದ್ದಾರೆ.ಈ ಆದೇಶ ಕುರಿತು ಶಿಕ್ಷಕರ ವಲಯದಿಂದ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಫಲಿತಾಂಶ ಕುಸಿತಕ್ಕೆ ಶಿಕ್ಷಕರೇ ಕಾರಣ ಎಂಬ ಅಧಿಕಾರಿಗಳ ನಿರ್ಧಾರ ಸರಿಯಲ್ಲ ಎಂಬ ಆಕ್ರೋಶದ ನುಡಿಗಳು ವ್ಯಕ್ತವಾಗಿದ್ದವು. ಶಿಕ್ಷಕರ ಸಂಘದಿಂದ ಆದೇಶ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳುವ ರೂಪುರೇಷೆಗಳ ಸಿದ್ಧತೆಯೂ ನಡೆದಿತ್ತು. ಅಷ್ಟರಲ್ಲಿ ಜಿ.ಪಂ ತನ್ನ ಆದೇಶವನ್ನು ಹಿಂಪಡೆದಿದೆ.
ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಸಹ, ಸಿಇಓ ಗರೀಮಾ ಪನ್ವಾರ್ ಅವರ ಜೊತೆ ಆದೇಶ ಹಿಂಪಡೆಯುವ ಬಗ್ಗೆ ಮಾತನಾಡಿದ್ದರು. ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಕೆಂಭಾವಿ ನೇತೃತ್ವದಲ್ಲಿ, ಎಲ್ಲಾ ಪದಾಧಿಕಾರಿಗಳು ಸಚಿವ ದರ್ಶನಾಪುರ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಆದೇಶ ಕುರಿತು ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಸಚಿವರಿಂದಲೂ ಸಿಇಓ ಅವರಿಗೆ ಆದೇಶ ಹಿಂಪಡೆಯುವಂತೆ ಸೂಚನೆ ಬಂದಿತ್ತು ಎನ್ನಲಾಗಿದೆ.
-ಏನಾಗಿತ್ತು?
600ಕ್ಕೂ ಹೆಚ್ಚು ಶಿಕ್ಷಕರ ಕೊರತೆ ನಡುವೆಯೂ ಬಂದಿರುವ ಫಲಿತಾಂಶ ಸಮಾಧಾನಕರವಾಗಿದ್ದು, ಅವಶ್ಯಕ ಸೌಲಭ್ಯಗಳೇ ಇರದಿರುವಾಗ ಗುಣಮಟ್ಟದ ಫಲಿತಾಂಶ ತನ್ನಿ ಎಂದರೆ ಹೇಗೆ ಸಾಧ್ಯ? ಎಂದು ಅಧಿಕಾರಿಗಳ ಮನೋಭಾವ ಪ್ರಶ್ನಿಸಿ "ಕನ್ನಡಪ್ರಭ " ಬುಧವಾರ (ಜೂ.26) ರಂದು ವರದಿ ಪ್ರಕಟಿಸಿತ್ತು. ಈ ವರದಿ ಸಾರ್ವಜನಿಕರು ಹಾಗೂ ಶಿಕ್ಷಕರನ್ನು ಸಾಕಷ್ಟು ಚರ್ಚೆಗೊಳಪಡಿಸಿತ್ತು.
ಕೋಟ್: ಶಿಕ್ಷಕರ ಮನವಿಗೆ ಸ್ಪಂದಿಸಿದ ಸಚಿವರು, ಜನಪ್ರತಿನಿಧಿಗಳಿಗೆ ಹಾಗೂ ಮಾಧ್ಯಮಗಳಿಗೆ ಧನ್ಯವಾದಗಳು. ಫಲಿತಾಂಶ ಕುಂಠಿತವಾಗಿರುವ ಬಗ್ಗೆ ಅಧಿಕಾರಿಗಳು-ಶಿಕ್ಷಕರು ಆತ್ಮಾವಲೋಕನ ನಡೆಸೋಣ. ಕೊರತೆಗಳನ್ನು ಸರಿದೂಗಿಸಿದಲ್ಲಿ ಯಾದಗಿರಿ ಜಿಲ್ಲೆ ಮುಂಬರುವ ದಿನಗಳಲ್ಲಿ ಒಳ್ಳೆಯ-ಗುಣಮಟ್ಟದ ಫಲಿತಾಂಶಕ್ಕೆ ಸಾಕ್ಷಿಯಾಗಲಿದೆ. ಮುಂದಿನ ವರ್ಷ ಕೊನೆಯ ಸ್ಥಾನದ ಹಣೆಪಟ್ಟಿಯಿಂದ ಹೊರ ಬರೋಣ.
----
---
27ವೈಡಿಆರ್10: ಕನ್ನಡಪ್ರಭದಲ್ಲಿ ಜೂ.26 ರಂದು ಬಡ್ತಿ ತಡೆ ಕುರಿತು ಪ್ರಕಟಗೊಂಡಿದ್ದ ವರದಿ.----