ಸಂತೆಕಟ್ಟೆ ಶಾಲೆ ಮಕ್ಕಳಿಗೆ ಸಾವಯವ ಕೃಷಿ ಪಾಠ

KannadaprabhaNewsNetwork | Published : Mar 3, 2024 1:32 AM

ಸಾರಾಂಶ

ಬ್ರಹ್ಮಾವರ ತಾಲೂಕಿನ 38ನೇ ಕಳ್ತೂರು ಗ್ರಾಮದ ಸಂತೆಕಟ್ಟೆ ಹಿರಿಯ ಪ್ರಾಥಮಿಕ ಶಾಲೆ, ಸಾವಯವ ಕೃಷಿ ಮೂಲಕ ಜನರ ಮನಗೆಲ್ಲುವಂತೆ ಮಾಡಿದೆ. ಇಲ್ಲಿ ಪಾಠದ ಜೊತೆ ಕೃಷಿ ಪಾಠವು ಮಕ್ಕಳಿಗೆ ನಿತ್ಯ ಬೋಧಿಸಲಾಗುತ್ತಿದೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳಕೃಷಿಯಿಂದ ದೂರ ಸರಿಯುವ ಇಂದಿನ ಕಾಲಘಟ್ಟದಲ್ಲಿ ಕನ್ನಡ ಮಾಧ್ಯಮದ ಶಾಲೆಯ ವಿದ್ಯಾರ್ಥಿಗಳು ಸಾವಯವ ಮಿಶ್ರಕೃಷಿ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಬ್ರಹ್ಮಾವರ ತಾಲೂಕಿನ 38ನೇ ಕಳ್ತೂರು ಗ್ರಾಮದ ಸಂತೆಕಟ್ಟೆ ಹಿರಿಯ ಪ್ರಾಥಮಿಕ ಶಾಲೆ, ಸಾವಯವ ಕೃಷಿ ಮೂಲಕ ಜನರ ಮನಗೆಲ್ಲುವಂತೆ ಮಾಡಿದೆ. ಇಲ್ಲಿ ಪಾಠದ ಜೊತೆ ಕೃಷಿ ಪಾಠವು ಮಕ್ಕಳಿಗೆ ನಿತ್ಯ ಬೋಧಿಸಲಾಗುತ್ತಿದೆ.* ವಿದ್ಯಾರ್ಥಿಗಳೇ ಕೃಷಿಕರು

ಶಾಲೆಯಲ್ಲಿ ಸ್ಪಂದನ ಪರಿಸರ ಸಂಘ ಸ್ಥಾಪಿಸಿದ್ದು, ಎಸ್‌ಡಿಎಂಸಿ ಹಾಗೂ ಶಿಕ್ಷಕರ ಮಾರ್ಗದರ್ಶನ ಸ್ಥಳೀಯರ ಸಹಕಾರದಿಂದ ವಿದ್ಯಾರ್ಥಿಗಳೇ ಕೃಷಿಯನ್ನು ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಕೋಳಿಗೊಬ್ಬರ, ಹಟ್ಟಿ ಗೊಬ್ಬರವನ್ನು ಒದಗಿಸಿ ಸಾವಯವ ಕೃಷಿಗೆ ಒತ್ತುಕೊಟ್ಟಿದ್ದಾರೆ. ಗಂಜಳ, ಬೇವಿನ ರಸ ಸಿಂಪಡಿಸಿ ಗಿಡಗಳಿಗೆ ರೋಗಗಳು ಬರದಂತೆ ನೋಡಿಕೊಂಡಿದ್ದಾರೆ.

* ತುಂತುರು ನೀರಾವರಿ ಅಳವಡಿಕೆ

ತರಕಾರಿ ಗಿಡಗಳಿಗೆ ನೀರುಣಿಸಲು 25 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ ಮಾಡಿದ್ದು, ನೀರು ಪೋಲಾಗದಂತೆ ತಡೆಯಲು ಗಿಡಗಳಿಗೆ ತುಂತುರು ನೀರಾವರಿ ಅಳವಡಿಸಲಾಗಿದೆ. ಈಗಾಗಲೇ ಬೆಂಡೆ 150 ಗಿಡಗಳು, ಮೂಲಂಗಿ‌ 150 ಗಿಡಗಳು, 200ಕ್ಕೂ ಹೆಚ್ಚು ಬಸಳೆಯ ಬಳ್ಳಿಗಳನ್ನು ನೆಡಲಾಗಿದೆ. ವಾರಕ್ಕೆ ಸುಮಾರು 20 ಕೆ.ಜಿ. ಬಸಳೆ, 40 ಕೆ.ಜಿ. ಬೆಂಡೆ ಫಸಲು ಲಭಿಸುತ್ತದೆ. ಇದನ್ನು ಮಕ್ಕಳ ಬಿಸಿಯೂಟದ ಜೊತೆ ಪಲ್ಯಮಾಡಿ ಬಡಿಸಲಾಗುತ್ತದೆ.* ಪಾಠದ ಜೊತೆ ಕೆಸರು ಗದ್ದೆಯ ಆಟ

ಈ ಸರ್ಕಾರಿ ಶಾಲೆಯಲ್ಲಿ ಸ್ಪಂದನ ಪರಿಸರ ಸಂಘವನ್ನು ಸ್ಥಾಪಿಸುವ ಮೂಲಕ ಸಾಲು ಗದ್ದೆ ನಾಟಿ, ಕೆಸರುಗದ್ದೆ ಓಟ, ಅಡಕೆ ಹಾಳೆಯ ಓಟ, ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳನ್ನು ಕೃಷಿಗೆ ಹತ್ತಿರ ಮಾಡಲಾಗುತ್ತದೆ. ಕುದುರೆಮುಖ ವಲಯದ ವನ್ಯಜೀವಿ ವಿಭಾಗ ಹೆಬ್ರಿ ವಲಯದ ಮೂಲಕ ಚಿಣ್ಣರ ವನ ದರ್ಶನ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಪ್ರಾಣಿ ಪ್ರಭೇದಗಳು, ಗಿಡಮರಗಳ ಪರಿಚಯವನ್ನು ಮಾಡಿಸಲಾಗುತ್ತದೆ.* ವಿದ್ಯಾರ್ಥಿಗಳ ಸಂಖ್ಯೆ ಏರಿಕೆ

ಕಳೆದ ಬಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 169 ಇದ್ದು, ಈ ಬಾರಿ ‌ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 187ಕ್ಕೆ ಏರಿಕೆಯಾಗಿದೆ. ಹೊಸೂರು, ಸಂತೆಕಟ್ಟೆ, ಶಿವಪುರ, ನಾಲ್ಕೂರು, ಕೆಂಜೂರು, ಕೆರೆಬೆಟ್ಟು ಗ್ರಾಮಗಳ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಮೂರು ಜನ ಶಿಕ್ಷಕರು ಮತ್ತು 6 ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಪಾಠ, ಕೃಷಿ, ಪಠ್ಯೇತರ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

* ಕ್ರೀಡೆಗೆ ಹೆಚ್ಚು ಒತ್ತು

ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಈ ಶಾಲಾ ವಿದ್ಯಾರ್ಥಿಗಳು ಸಾಧನೆ ತೋರಿದ್ದಾರೆ‌. ರಂಜಿತಾ ಯೋಗದಲ್ಲಿ ರಾಷ್ಟ್ರಮಟ್ಟ, ದೇವಣ್ಣ ನಾಯ್ಕ ಮತ್ತು ಸಂದೀಪ್ ಮತ್ತಿತರರು ಅಥ್ಲೆಟಿಕ್ಸ್ ರಾಜ್ಯಮಟ್ಟದಲ್ಲಿ ಭಾಗಿಯಾಗಿದ್ದಾರೆ. ಗಣರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಉಡುಪಿ ಜಿಲ್ಲಾ ಪಥಸಂಚಲನದಲ್ಲಿ ಶಾಲೆ ಸತತ 15 ವರ್ಷಗಳಿಂದ ಮೊದಲ ಸ್ಥಾನದ ಪ್ರಶಸ್ತಿ ಪಡೆಯುತ್ತಿದೆ. ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿ ಬ್ಯಾಂಡ್ ತಂಡವನ್ನು ಹೊಂದಿದ್ದು, ತಾಲೂಕು, ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಹಿಮ್ಮೇಳದಲ್ಲಿ ಬ್ಯಾಂಡ್ ತಂಡವು ಭಾಗವಹಿಸುತ್ತಿದೆ. ಶಿಕ್ಷಣದಲ್ಲಿ ವಲಯ ಮಟ್ಟದಲ್ಲಿ ಉತ್ತಮ ಶಾಲಾ ಪ್ರಶಸ್ತಿ ಪಡೆದಿದೆ.ಮುಂದಿನ 2028ಕ್ಕೆ ಶಾಲೆಯು ಶತಮಾನೋತ್ಸವ ಆಚರಿಸಲಿದೆ.

-------------ಪಾಠದ ಜೊತೆ ಕೃಷಿ ಸ್ನೇಹಿ ಪರಿಸರ ನಿರ್ಮಾಣ ಮಾಡುವ ಮೂಲಕ ವಿದ್ಯಾರ್ಥಿಗಳ ಮನೋವಿಕಸನಕ್ಕೆ ದಾರಿಯಾಗುತ್ತದೆ. ಕ್ರೀಡೆಯಲ್ಲಿಯೂ ಶಾಲಾ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ.। ಸುರೇಶ್ ಚಂದ್ರ ಬಾಬು, ದೈಹಿಕ ಶಿಕ್ಷಕರು, ಸ್ಪಂದನ ಶಾಲಾ ಪರಿಸರ ಸಂಘ ನೋಡಲ್ ಅಧಿಕಾರಿ ------------

ಶಾಲೆಯ ಸಾಧನೆಯನ್ನು ಜೆಸಿಐ ಹೆಬ್ರಿ, ಲಯನ್ಸ್ ಕ್ಲಬ್, ಗಣೇಶೋತ್ಸವ ಸಮಿತಿಗಳು ಗುರುತಿಸಿವೆ. ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ಇನ್ನೂ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಕೃಷಿಯಿಂದ ರೈತರು ವಿಮುಖರಾಗಬಾರದು, ಅದಕ್ಕಾಗಿ ಕೃಷಿ ಪಾಠವನ್ನು ವಿದ್ಯಾರ್ಥಿಗಳ ಎಳವೆಯಲ್ಲಿ ಹೇಳಿಕೊಟ್ಟರೆ ಒಳ್ಳೆಯದು.

। ಮಾಧವ, ಮುಖ್ಯೋಪಾಧ್ಯಾಯರು, ಸಂತೆಕಟ್ಟೆ ಹಿರಿಯ ಪ್ರಾಥಮಿಕ ಶಾಲೆ----------------

ಹಳ್ಳಿಯ ಕೃಷಿ ಕುಟುಂಬದ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಆದ್ದರಿಂದ ಪಾಠದ ಜೊತೆ ಕೃಷಿಯಲ್ಲಿ ಖುಷಿಯಿಂದ ತೊಡಗಿಕೊಳ್ಳುತ್ತಾರೆ. ಪೋಷಕರು ಕೂಡ ಸಾವಯವ ಕೃಷಿಗೆ ಒತ್ತು ನೀಡುತಿದ್ದಾರೆ‌.। ರಾಜೇಶ್ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ.

Share this article