ಚಂದ್ರು ಕೊಂಚಿಗೇರಿ
ಈ ಹಿಂದೆ ಹೂವಿನಹಡಗಲಿಯ ಮಲ್ಲಿಗೆ ಹೂವಿನ ಸುವಾಸನೆ ಎಲ್ಲೆಡೆ ಪಸರಿಸಿತ್ತು. ಈ ಹಿನ್ನೆಲೆಯಲ್ಲಿ ಮಲ್ಲಿಗೆ ಬೆಳೆಗೆ ಭೌಗೋಳಿಕ ಸೂಚ್ಯಂಕದ ಮಾನ್ಯತೆ ಪಡೆದು ಸುದ್ದಿಯಲ್ಲಿತ್ತು. ಈಗ ಘನ ತ್ಯಾಜ್ಯ ವಸ್ತು ನಿರ್ವಹಣೆ ಘಟಕ ಇಡೀ ವಿಜಯನಗರ ಜಿಲ್ಲೆಯಲ್ಲೇ ಮಾದರಿಯಾಗಿದೆ. ಈ ಘನತ್ಯಾಜ್ಯ ವಸ್ತು ವಿರ್ವಹಣೆ ಘಟಕವು 10 ಎಕರೆ ಪ್ರದೇಶದಲ್ಲಿದೆ. ಕಸ ವಿಲೇವಾರಿ ಘಟಕ ದುರ್ನಾತ ಬೀರುವ ಕೇಂದ್ರವಾಗಿಲ್ಲ. ಬದಲಾಗಿ ಸುವಾಸನೆ ಬೀರುವ ಹೂವಿನ ಗಿಡಗಳಿವೆ. ಎಲ್ಲ ಕಡೆಗೂ 5 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಡಲಾಗಿದೆ.
ಸುಂದರ ಸ್ವಾಗತ ಕಮಾನು, ಸುಂದರ ಉದ್ಯಾನವನ, ನೂರಾರು ರೀತಿಯ ಅಲಂಕಾರಿಕ ಸಸ್ಯಗಳು, ನಾನಾ ಜಾತಿಯ ಹೂವಿನಗಿಡಗಳಿಂದ ಕಂಗೊಳಿಸುತ್ತಿದೆ. ಸಿಸಿ ರಸ್ತೆ ನಿರ್ಮಾಣ, ವೇಸ್ಟ್ ಟು ವಂಡರ್ ಎನ್ನುವ ರೀತಿಯಲ್ಲಿ ಕಸದಲ್ಲಿ ಹಾಕಿದ್ದ ನಾನಾ ರೀತಿಯ ಬಿಯರ್ ಬಾಟಲಿ, ಚಿಪ್ಪುಗಳನ್ನು ಬಳಸಿಕೊಂಡು ಅಲಂಕಾರ ಮಾಡಿರುವುದು ಎಲ್ಲರ ಗಮನ ಸೆಳೆಯುತ್ತಿದೆ.ಪುರಸಭೆ ಸಿಬ್ಬಂದಿ ಮನೆ ಮತ್ತು ಹೊಟೇಲ್‌ಗಳಿಂದ ನಿತ್ಯ ಹಸಿ ಮತ್ತು ಒಣ ಕಸ ಸೇರಿ 7 ಟನ್ ತ್ಯಾಜ್ಯ ಸಂಗ್ರಹಿಸುತ್ತಿದ್ದಾರೆ. ಕಸ ಬೇರ್ಪಡಿಸಿ ಕೊಳೆ ಹಾಕುವ ಮೂಲಕ ನಿತ್ಯ ಸಾವಯವ, ಎರೆಹುಳು ಗೊಬ್ಬರ ತಯಾರಿ, ಜರಡಿ ಯಂತ್ರದ ಮೂಲಕ ನಾನಾ ರೀತಿಯ ಗೊಬ್ಬರ ಉತ್ಪಾದನೆ ಮಾಡುತ್ತಾರೆ.
ಹಲಿಗುಡ್ಡದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಪಠ್ಯ ಕ್ರಮಕ್ಕೆ ಸಂಬಂಧಪಟ್ಟ ವಿಷಯ ಇರುವ ಕಾರಣ, ನೂರಾರು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಈ ಘನ ತ್ಯಾಜ್ಯ ವಸ್ತು ನಿರ್ವಹಣೆ ಘಟಕಕ್ಕೆ ಭೇಟಿ ನೀಡಿದ್ದಾರೆ. ಆ ವಿದ್ಯಾರ್ಥಿಗಳಿಗೆ ಇದೊಂದು ಪ್ರಯೋಗ ಶಾಲೆಯಂತಿದೆ.
ಜಿಲ್ಲೆಯಲ್ಲೇ ಹೂವಿನಹಡಗಲಿ ಘನ ತ್ಯಾಜ್ಯ ವಸ್ತು ವಿರ್ವಹಣೆ ಘಟಕ ಮಾದರಿಯಾಗಿದೆ. 12 ಕಾರ್ಮಿಕರು ಕೆಲಸ ಮಾಡುತ್ತಾರೆ. ಸುಂದರ ಪಟ್ಟಣ ನಿರ್ಮಾಣಕ್ಕಾಗಿ ಸ್ವಚ್ಛತೆ ಕಾಪಾಡಲು ಪುರಸಭೆ ವಾಹನಗಳಿಗೆ ಕಸ ನೀಡಬೇಕಿದೆ. ಹಾಳಾಗಿರುವ ವಸ್ತುಗಳಿಂದ ವೇಸ್ಟ್ ಟು ವಂಡರ್ ನಿರ್ಮಾಣ ಮಾಡಲಾಗಿದೆ ಎನ್ನುತ್ತಾರೆ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಸೋಮಶೇಖರ.