ಹೊರಗುತ್ತಿಗೆ ನೌಕರರ ಹಿತರಕ್ಷಣೆಗೆ ಸಂಘಟನೆ ಬದ್ಧ

KannadaprabhaNewsNetwork |  
Published : Jun 18, 2025, 12:21 AM IST
ಸಿಕೆಬಿ-2  ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಹೊರಗುತ್ತಿಗೆ ನೌಕರರ ಜಿಲ್ಲಾ ಸಮಾವೇಶದಲ್ಲಿ ನೇಮಕಾದೇಶ ಪತ್ರವನ್ನು   ರಾಜ್ಯಾಧ್ಯಕ್ಷ ಸುಧಾಕರ್ ವಿತರಿಸಿದರು.  | Kannada Prabha

ಸಾರಾಂಶ

ಪ್ರತಿಯೊಬ್ಬ ಹೊರಗುತ್ತಿಗೆ ನೇಮಕಾತಿ ಏಜೆನ್ಸಿಯವರು ಕೂಡ ಕೆಲಸ ಮಾಡುವ ನೌಕರರಿಗೆ ಕನಿಷ್ಠವೇತನ ನೀಡಲೇಬೇಕು. ಯಾವ ಏಜೆನ್ಸಿ ಹೀಗೆ ಮಾಡುತ್ತಿಲ್ಲವೋ ಹೊರಗುತ್ತಿಗೆ ನೌಕರರಸಂಘಕ್ಕೆ ದೂರು ನೀಡಿದರೆ ಖಂಡಿತವಾಗಿ ನಿಮಗೆ ನ್ಯಾಯಕೊಡಿಸಿ ಏಜೆನ್ಸಿ ಪರವಾನಗಿ ರದ್ದು ಮಾಡುವ ಕೆಲಸ ಮಾಡಲಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸರ್ಕಾರಿ ಕೆಲಸ ಮಾಡುವವರೆಲ್ಲರೂ ಸರ್ಕಾರಿ ನೌಕರರೇ ಎನ್ನುವ ಮನೋಭಾವ ಹೊರಗುತ್ತಿಗೆ ನೌಕರರಲ್ಲಿ ಬಂದಾಗ ಮಾತ್ರ ಸ್ವಾಭಿಮಾನದಿಂದ ನಮ್ಮ ಹಕ್ಕುಗಳಿಗಾಗಿ ಹೋರಾಡಲು ಸಾಧ್ಯ ಎಂದು ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಸುಧಾಕರ್ ಹೇಳಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಹೊರಗುತ್ತಿಗೆ ನೌಕರರ ಸಮಾವೇಶದಲ್ಲಿ ಮಾತನಾಡಿ, ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವವರೆಲ್ಲರೂ ಸರ್ಕಾರಿ ನೌಕರರೇ ಆಗಿರುತ್ತಾರೆ. ಅವರವರ ಹುದ್ದೆ ಪದನಾಮಗಳು ಬದಲಾಗಿರಬಹುದು ಅಷ್ಟೇ. ನಾವು ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿದ್ದರೂ ದುರುದ್ದೇಶದಿಂದ ತೊಂದರೆ ನೀಡಿದಾಗ ಹೊರಗುತ್ತಿಗೆ ನೌಕರರ ಸಂಘವು ನೆರವಿಗೆ ನಿಲ್ಲುತ್ತದೆ ಎಂದು ಅಭಯ ನೀಡಿದರು. ಕನಿಷ್ಠವೇತನ ನೀಡಬೇಕು

ಪ್ರತಿಯೊಬ್ಬ ಹೊರಗುತ್ತಿಗೆ ನೇಮಕಾತಿ ಏಜೆನ್ಸಿಯವರು ಕೂಡ ಕೆಲಸ ಮಾಡುವ ನೌಕರರಿಗೆ ಕನಿಷ್ಠವೇತನ ನೀಡಲೇಬೇಕು. ಯಾವ ಏಜೆನ್ಸಿ ಹೀಗೆ ಮಾಡುತ್ತಿಲ್ಲವೋ ನಮ್ಮ ಸಂಘಕ್ಕೆ ದೂರು ನೀಡಿದರೆ ಖಂಡಿತವಾಗಿ ನಿಮಗೆ ನ್ಯಾಯಕೊಡಿಸಿ ಏಜೆನ್ಸಿ ಪರವಾನಗಿ ರದ್ದು ಮಾಡುವ ಕೆಲಸ ಮಾಡುತ್ತೇವೆ ಎಂದರು.

ಪ್ರತಿಯೊಬ್ಬ ಹೊರಗುತ್ತಿಗೆ ನೌಕರರ ಸಂಬಳದಲ್ಲಿ ಶೇ 25 ರಷ್ಟು ಪಿಎಫ್‌ ಶೇ. 4ರಷ್ಟು ಇಎಸ್‌ಐ ಕಟಾವು ಆಗಲಿದೆ. ಹೊರಗುತ್ತಿಗೆ ನೌಕರರ ವೇತನದಲ್ಲಿ ಶೇ. 13 ರಷ್ಟು ಪಿಎಫ್‌ಗೆ ಕಟಾವು ಆದರೆ ಸರಕಾರ ಶೇ 12 ರಷ್ಟು ತನ್ನ ವಂತಿಗೆ ಸೇರಿಸಿದರೆ ಒಟ್ಟು 25 ರಷ್ಟು ಪಿಎಫ್ ನಿಮಗೆ ದೊರೆಯಲಿದೆ ಎಂದರು.

ನೌಕರರಿಗೆ ಸಂಘದ ಬೆಂಬಲ

ಉಪಾಧ್ಯಕ್ಷ ಗಂಗಾಧರ್ ಯಾದವ್ ಮಾತನಾಡಿ, ಹೊರಗುತ್ತಿಗೆ ನೌಕರರ ಸಂಘವು ನೌಕರರ ಹಿತರಕ್ಷನಾಗಿ ಕೆಲಸ ಮಾಡಲಿದೆ. ಜಿಲ್ಲೆಯ ಪ್ರತಿಯೊಂದು ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರು ಸಂಘದ ಸದಸ್ಯತ್ವ ಪಡೆಯುವ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಬೇಕು.ಈ ನಿಟ್ಟನಲ್ಲಿ ಜಿಲ್ಲಾ ಸಂಘದೊಟ್ಟಿಗೆ ರಾಜ್ಯ ಸಂಘಟನೆ ಸೇತುವೆಯಾಗಿ ಕೆಲಸ ಮಾಡಲಿದೆ ಎಂದರು.

ಜಿಲ್ಲಾ ನೂತನ ಪದಾಧಿಕಾರಿಗಳು

ಈ ವೇಳೆ ನೂತನ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಜಿಲ್ಲಾ ಗೌರವಾಧ್ಯಕ್ಷರಾಗಿ ಎಂ. ಮುನಿರಾಜು, ಜಿಲ್ಲಾಧ್ಯಕ್ಷರಾಗಿ ರಾಜೇಶ್ ವೈ.ವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನರಸಿಂಹಮೂರ್ತಿ.ಡಿ.ಎನ್, ಜಿಲ್ಲಾ ಉಪಾಧ್ಯಕ್ಷರಾಗಿ ಸುಧಾಕರ್.ಎಸ್, ಜಿಲ್ಲಾ ಕಾರ್ಯದರ್ಶಿ ಕಿಶೋರ್.ಎನ್, ನಾಗರಾಜ್.ಎಸ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಕಾಂತ್,ಶಾಂತ, ರಾಜೇಶ್,ಟಿ.ಎಸ್.ಶ್ರೀನಾಥ,ಸವಿತಾ, ಜಿಲ್ಲಾ ಸಹ ಕಾರ್ಯದರ್ಶಿ-ದೇವರಾಜು ಜಿ ಎನ್, ನರಸಿಂಹಗೌಡ.ಎನ್. ಆಯ್ಕೆಯಾದರು.

ಈ ವೇಳೆ ರಾಜ್ಯ ವಕ್ತಾರರಾದ ಸುನಿಲ್ ಕೆ.ಸಿ,ಜಿಲ್ಲಾ ಕಾನೂನು ಸಲಹೆಗಾರ ಮುನಿರಾಜು.ಎನ್, ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ