ಕನ್ನಡಪ್ರಭ ವಾರ್ತೆ ಮಾಲೂರು
ತಾಲೂಕಿನ ಸೀತಾನಾಯಕನಹಳ್ಳಿ ಬಳಿಯ ಖಾಸಗಿ ರೆಸಾರ್ಟ್ ನಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳ ಚುನಾವಣೆಯ ಪೂರ್ವಭಾವಿ ಸಭೆಗೆ ಚಾಲನೆ ನೀಡಿ ಮಾತನಾಡಿ, ಈ ತಿಂಗಳ ೨೩ರಂದು ನಡೆಯಲಿರುವ ಆಗ್ನೇಯ ಪದವೀಧರರ ಚುನಾವಣೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿಧರ್ ಹುಲಿಕುಂಟೆಯವರನ್ನು ಗೆಲ್ಲಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಡಿಸೆಂಬರ್ ಅಥವಾ ಜನವರಿಯಲ್ಲಿ ಜಿಪಂ, ತಾಪಂ ಚುನಾವಣೆ ನಡೆಯುವ ಸಂಭವ ಇದೆ. ಈ ಹಿಂದೆ ಆಪರೇಷನ್ ಕಮಲ ನಡೆದಾಗ ಯಾವುದೇ ಅಮಿಷಕ್ಕೆ ಒಳಗಾಗದೆ ಕಾಂಗ್ರೆಸ್ ಕಾರ್ಯಕರ್ತರ ಸಹಕಾರದಿಂದ ತಾಲೂಕಿನಲ್ಲಿ ಕಾಂಗ್ರೆಸ್ ಅನ್ನು ಹೆಚ್ಚು ಶಕ್ತಿಯುತವಾಗಿ ಬೆಳೆಸಿದ್ದೇವೆ. ಅಭಿವೃದ್ಧಿಯಲ್ಲಿ ನಮ್ಮ ತಾಲೂಕು ಮಾದರಿಯಾಗಿದೆ ಎಂದ ಶಾಸಕರು, ಅದನ್ನು ಉಳಿಸಿಕೊಂಡು ಮುಂದುವರಿಯಬೇಕಾದರೆ ಮುಂದಿನ ಎಲ್ಲ ಚುನಾವಣೆಗಳನ್ನು ಕಾಂಗ್ರೆಸ್ ಗೆಲ್ಲಬೇಕು ಎಂದರು.ಕಳೆದ ಚುನಾವಣೆಯಲ್ಲಿ ನನಗೆ ಬಂದ ಮತಗಳ ಸಂಖ್ಯೆ ನನಗೆ ಬೇಸರ ತಂದಿದೆ. ಮುಂದೆ ಅದು ಮರುಕಳಿಸಬಾರದು ಎಂಬ ಉದ್ದೇಶದಿಂದ ಪ್ರತಿ ಬೂತ್ ಮಟ್ಟದಲ್ಲಿ ಗಟ್ಟಿಗೊಳಿಸಲು ಬೇಕಾದ ಕ್ರಮ ಕೈಗೊಳ್ಳುವಂತೆ ಮುಖಂಡರಿಗೆ ತಿಳಿಸಲಾಗಿದೆ ಎಂದರು. ಪ್ರತಿ ಮತದಾರರನ್ನು ಭೇಟಿ ಮಾಡಿ ಕಾಂಗ್ರೆಸ್ ಗೆ ಮತ ನೀಡುವಂತೆ ಪ್ರೇರೇಪಿಸಬೇಕು, ಸಮಸ್ಯೆ ಇದ್ದ ಗ್ರಾಮಗಳ ಬಗ್ಗೆ ಮಾಹಿತಿ ನೀಡಿ, ನಾನೇ ಖುದ್ದು ಮತದಾರರನ್ನು ಭೇಟಿ ಮಾಡುವೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಾಪುರ ಕಿಟ್ಟಿ, ಶೆಟ್ಟಿ ಹಳ್ಳಿ ರಾಮಮೂರ್ತಿ, ಮಾಜಿ ಶಾಸಕ ಎ.ನಾಗರಾಜ್ , ಅಭ್ಯರ್ಥಿ ಶಶಿಧರ್ ಹುಲಿಕುಂಟೆ, ಎಂಎಲ್ಸಿ ಅನಿಲ್ ಕುಮಾರ್, ಪ್ರಾಧಿಕಾರದ ಅಧ್ಯಕ್ಷ ವಿಜಯನರಸಿಂಹ, ಹೇಮಾಮಾಲಿನಿ, ಪಿ.ನಾರಾಯಣಸ್ವಾಮಿ, ಚಂದ್ರೇಗೌಡ, ಬಾಳಿಗಾನಹಳ್ಳಿ ಶ್ರೀನಿವಾಸ್, ಕ್ಷೇತ್ರನ ಹಳ್ಳಿ ವೆಂಕಟೇಶ್ ಗೌಡ , ದಿನ್ನಹಳ್ಳಿ ರಮೇಶ್, ಕಸಾಪ ಅಧ್ಯಕ್ಷ ಹನುಮಂತಯ್ಯ, ಆನೇಪುರ ಹನುಮಂತಪ್ಪ, ಅಂಜನಿ ಸೋಮಣ್ಣ, ಚೆನ್ನರಾಯಪ್ಪ ಆಂಜಿನಪ್ಪ, ಗೋವರ್ಧನ್ ರೆಡ್ಡಿ, ಸುನೀಲ್ ನಂಜೇಗೌಡ, ಬನಹಳ್ಳಿ ಸತೀಶ್, ಮಾಸ್ತಿ ಚೇತನ್, ಎಟ್ಟುಕೋಡಿ ವೀರಭದ್ರಪ್ಪ ಇನ್ನಿತರರು ಇದ್ದರು.