ಟಿಎಲ್‌ಬಿಸಿ ಮೇಲ್ಭಾಗ ನೀರಿನ ಕಳ್ಳಾಟ ಬಯಲು

KannadaprabhaNewsNetwork |  
Published : Oct 15, 2026, 01:15 AM IST
14ಕೆಪಿಆರ್‌ಸಿಆರ್‌ 06ರಿಂದ 08: | Kannada Prabha

ಸಾರಾಂಶ

ತುಂಗಭದ್ರಾ ಎಡದಂಡೆ ಕಾಲುವೆಯ ಮೇಲ್ಭಾಗದಲ್ಲಿ ನೀರಿನ ಕಳ್ಳಾಟವು ಇದೀಗ ಬಟಾಬಯಲಾಗುತ್ತಿದ್ದು, ಅಕ್ರಮವಾಗಿ ನೀರಾವರಿ ಮಾಡಿಕೊಂಡವರು, ನಿಷೇಧದ ನಡುವೆಯೂ ನೀರು ಪಡೆಯಲು ಯತ್ನಿಸಿದವರ ವಿರುದ್ಧ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 10 ಪ್ರಕರಣಗಳು ದಾಖಲಾಗಿವೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ತುಂಗಭದ್ರಾ ಎಡದಂಡೆ ಕಾಲುವೆಯ ಮೇಲ್ಭಾಗದಲ್ಲಿ ನೀರಿನ ಕಳ್ಳಾಟವು ಇದೀಗ ಬಟಾಬಯಲಾಗುತ್ತಿದ್ದು, ಅಕ್ರಮವಾಗಿ ನೀರಾವರಿ ಮಾಡಿಕೊಂಡವರು, ನಿಷೇಧದ ನಡುವೆಯೂ ನೀರು ಪಡೆಯಲು ಯತ್ನಿಸಿದವರ ವಿರುದ್ಧ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 10 ಪ್ರಕರಣಗಳು ದಾಖಲಾಗಿವೆ.

ಮಳೆ ಕೊರತೆ, ತೀವ್ರ ಬರಗಾಲ, ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆ ಇರುವ ಕಾರಣಕ್ಕೆ ಟಿಎಲ್‌ಬಿಸಿ ಮೇಲ್ಭಾಗಕ್ಕೆ ನೀರಿನ ಲಭ್ಯತೆ ಅನುಸಾರ ಕೃಷಿಗೆ ಅದೇ ರೀತಿ ಕೆಳಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡಬೇಕು ಎಂದು ತುಂಗಭದ್ರಾ ಐಸಿಸಿ ಸಭೆಯಲ್ಲಿ ತೀರ್ಮಾನಿ ಸಲಾಗಿತ್ತು. ಆದರೆ, ಮೇಲ್ಭಾಗದಲ್ಲಿ ಅಕ್ರಮ ನೀರಾವರಿ, ನೀರಿನ ಕಳ್ಳತನದಿಂದಾಗಿ ಕೆಳಭಾಗಕ್ಕೆ ನೀರು ತಲುಪುತ್ತಿರಲಿಲ್ಲ ಇದರಿಂದಾಗಿ ಮೇಲ್ಭಾಗ ಹಾಗೂ ಕೆಳಭಾಗದ ರೈತರು, ರಾಜಕೀಯ ನಾಯಕರ ನಡುವೆ ಸಂಘರ್ಷ ಉಂಟಾಗಿರುವ ಸಮಯದಲ್ಲಿ ಕೆಳಭಾಗಕ್ಕೆ ನಿಗದಿತ ಪ್ರಮಾಣದಲ್ಲಿ ನೀರು ಹರಿಸುವುದಕ್ಕಾಗಿ ಮೇಲ್ಭಾಗದಲ್ಲಿ ನೀರಿನ ಕಳ್ಳತನವನ್ನು ತಡೆಯಲಾಗುತ್ತಿದೆ ಆ ನಿಟ್ಟಿನಲ್ಲಿ ತುಂಗಭದ್ರಾ ನೀರಾವರಿ ಇಲಾಖೆಯ ಅಧಿಕಾರಿ,ಸಿಬ್ಬಂದಿ ವರ್ಗವು ಪೊಲೀಸ್‌ ನೆರವಿನಿಂದ ಟಿಎಲ್‌ಬಿಸಿ ವ್ಯಾಪ್ತಿಯ ವಿವಿಧ ವಿಭಾಗಗಳಲ್ಲಿರುವ ಮುಖ್ಯಕಾಲುವೆ ಹಾಗೂ ಉಪಕಾಲುವೆ ವ್ಯಾಪ್ತಿಯಲ್ಲಿ ನೀರು ಕಳ್ಳತನ, ಅಕ್ರಮ ಪೈಪ್‌ ಲೈನ್‌, ಪಂಪ್‌ಸೆಟ್ಟನ್ನು ತೆರವುಗೊಳಿಸಲಾಗುತ್ತಿದಿದ್ದು ಅಷ್ಟೇ ಅಲ್ಲದೇ ರೈತರ ಮೇಲೂ ಪ್ರಕರಣಗಳನ್ನು ದಾಖಲಿಸಲಾಗಿದೆ.

ವಿವಿಧ ಠಾಣೆಯಲ್ಲಿ 10 ಪ್ರಕರಣಗಳ ದಾಖಲು: ಟಿಎಲ್‌ಬಿಸಿ ವ್ಯಾಪ್ತಿಗೆ ಬರುವ ಜಿಲ್ಲೆಯ ಮಸ್ಕಿ ತಾಲೂಕಿನ ತುರ್ವಿಹಾಳ ಠಾಣೆಯಲ್ಲಿ 4, ಬಳಗಾನೂರು ಠಾಣೆಯಲ್ಲಿ 2, ಸಿರವಾರ ತಾಲೂಕಿನ ಕವಿತಾಳ ಠಾಣೆಯಲ್ಲಿ 2 ಮತ್ತು ಸಿರವಾರ ಪಟ್ಟಣ ಹಾಗೂ ಸಿಂಧನೂರು ಗ್ರಾಮೀಣ ಪೊಲೀಸ್‌ ಠಾಣೆಗಳಲ್ಲಿ ತಲಾ 1 ಸೇರಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಕರ್ನಾಟಕ ನೀರಾವರಿ ಅಧಿನಿಯಮ 1965 ಸೆಕ್ಷನ್ 28 (ಸಿ) 55, 55 (2), 55 (6), ನೀರಾವರಿ ಕಾಯ್ದೆ 1963 ಸೆಕ್ಷನ್ 55, ಭಾರತೀ ಯ ನ್ಯಾಯ ಸಂಹಿತೆ ಬಿಎನ್‌ಎಸ್‌ 2023 ಸೆಕ್ಷನ್‌ 221, 3 (5) ಮತ್ತು 326 (ಎ) ಪ್ರಕಾರ ಟಿಬಿ ಯೋಜನೆಯ ನೀರಾವರಿ ಇಲಾಖೆಯ ಅಧಿಕಾರಿಗಳು ನೀಡಿದ ದೂರಿನ ಮೆರೆಗೆ ವಿವಿಧ ಠಾಣೆಗಳಲ್ಲಿ ರೈತರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮವನ್ನು ಕೈಗೊಳ್ಳಲಾಗಿದೆ.

ಹಗಲಿರುಳು ಪರಿಶ್ರಮ: ಆದ್ಯತೆ ಮೆರೆಗೆ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಟಿಎಲ್‌ಬಿಸಿ ಕೆಳಭಾಗಕ್ಕೆ ನೀರು ತಲುಪದ ಕಾರಣಕ್ಕೆ, ಅಚ್ಚುಕಟ್ಟು ಪ್ರದೇಶದಲ್ಲಿ ಸೆಕ್ಷನ್ 144 ರ ನಿಷೇಧಾಜ್ಞೆ ಜಾರಿ ಮಾಡಿ, ಹಗಲು ರಾತ್ರಿ ಕಾಲುವೆ ಮೇಲೆ ಪೊಲೀಸ್‌ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ತೀವ್ರ ನಿಗಾ ವಹಿಸಿದ ಪರಿಣಾಮ ಇದೀಗ ನಿಗದಿತ ಪ್ರಮಾಣದಲ್ಲಿ ಕೆಳಭಾಗಕ್ಕೆ ನೀರು ತಲುಪುತ್ತಿದೆ. ಕಾಲುವೆ ವ್ಯಾಪ್ತಿಯ ಸಿಂಧನೂರು, ಮಸ್ಕಿ ತಾಲೂಕುಗಳ ರೈತರು ಭತ್ತ ಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಪಡೆಯುವುದರ ಜೊತೆಗೆ ಅನಧಿಕೃತ, ಅಕ್ರಮ ನೀರಾವರಿಯನ್ನು ಮಾಡಿಕೊಂಡಿದ್ದರು, ಅಷ್ಟೇ ಅಲ್ಲದೇ ಕಾಲುವೆಗಳಿಗೆ ರಂದ್ರ ಕೊರೆದು ಪೈಪ್‌ಗಳನ್ನು ಹಾಕಿ ನೀರನ್ನು ಕದಿಯುತ್ತಿದ್ದರು ಇದೀಗ ನೀರಾವರಿ ಇಲಾಖೆಯ ಅಧಿಕಾರಿಗಳು ಅಂತಹ ಸ್ಥಳಗಳನ್ನು ಗುರುತಿಸಿ ಅಕ್ರಮ ಪೈಪ್‌ ಲೈಜ್‌ ಗಳನ್ನು ಜೆಸಿಬಿಯಿಂದ ತೆಗೆಯುವುದರ ಜೊತೆಗೆ ಅವರ ವಿರುದ್ಧವು ಪ್ರಕರಣ ದಾಖಲಿಸುತ್ತಿದ್ದು, ಈ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಕೆಳಭಾಗದ ರೈತರು ಒತ್ತಾಯಿಸುತ್ತಿದ್ದಾರೆ.

ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಅಕ್ರಮ ನೀರಾವರಿಗೆ ಸಂಬಂಧಿಸಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ನೀಡಿದ ದೂರಿನ ಮೆರೆಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 10 ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ಕ್ರಮಕ್ಕೆ ಮುಂದಾಗಿದ್ದು, ಕೆಳಭಾಗಕ್ಕೆ ಸರಿಯಾಗಿ ನೀರು ತಲುಪಿಸುವುದಕ್ಕಾಗಿ ಅಚ್ಚುಕಟ್ಟಿನ ಮೇಲೆ ಸುಮಾರು 350ಕ್ಕೂ ಹೆಚ್ಚು ಪೊಲೀಸ್‌ ಅಧಿಕಾರಿ, ಸಿಬ್ಬಂದಿ ನಿಯೋಜಿಸಿ ನಿರಂತರವಾಗಿ ನಿಗಾ ವಹಿಸಲಾಗುತ್ತಿದೆ ಎಂದು ರಾಯಚೂರು ಎಸ್ಪಿ ಅರುಣಾಂಗ್ಷು ಗಿರಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸದ ತಿಪ್ಪೆಯಲ್ಲಿ ಅವಧಿ ಮುಗಿದ ಔಷಧಿ ಡಬ್ಬಿಗಳು ಪತ್ತೆ
20 ದಿನಗಳಾದರೂ ನಿರಂತರ ನೀರು ಕೊಡಿ