ನಾಡಿನ ಜನಪದ ಕಲೆಗಳು ಉಳಿಯಲು ನುರಿತ ಜಾನಪದ ಕಲಾವಿದರ ಸಂಘಟನೆಗಳಿಂದ ಮಾತ್ರ ಸಾಧ್ಯ. ನಶಿಸಿ ಹೋಗುತ್ತಿರುವ ಗ್ರಾಮೀಣ ಭಾಗದ ಕಲೆಗಳನ್ನು ಸಂಘ-ಸಂಸ್ಥೆಗಳು ಪ್ರೋತ್ಸಾಹಿಸುವುದು ಅಗತ್ಯವಿದೆ.
ಧಾರವಾಡ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ರೈಸಿಂಗ್ ಸ್ಟಾರ್ಸ್ ಆರ್ಟ್ ಮತ್ತು ಕಲ್ಚರಲ್ ಅಕಾಡೆಮಿ ಏರ್ಪಡಿಸಿದ್ದ ಸಾಂಸ್ಕೃತಿಕ ವೈಭವ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಯಶಸ್ವಿಯಾಗಿ ಜರುಗಿತು.ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ಚಾಲನೆ ನೀಡಿ, ನಾಡಿನ ಜನಪದ ಕಲೆಗಳು ಉಳಿಯಲು ನುರಿತ ಜಾನಪದ ಕಲಾವಿದರ ಸಂಘಟನೆಗಳಿಂದ ಮಾತ್ರ ಸಾಧ್ಯ. ನಶಿಸಿ ಹೋಗುತ್ತಿರುವ ಗ್ರಾಮೀಣ ಭಾಗದ ಕಲೆಗಳನ್ನು ಸಂಘ-ಸಂಸ್ಥೆಗಳು ಪ್ರೋತ್ಸಾಹಿಸುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ರೈಸಿಂಗ್ ಸ್ಟಾರ್ ವಿವಿಧ ರೀತಿಯ ಶಿಬಿರ ಹಾಗೂ ಕಾರ್ಯಕ್ರಮಗಳ ಮೂಲಕ ಯುವ ಕಲಾವಿದರು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಿದೆ ಎಂದರು. ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕ ಆಶಿಶ್, ರಾಜ್ಯದ ಎಲ್ಲರ ರೀತಿಯ ಅದರಲ್ಲೂ ಜನಪದ ಕಲಾ ಪ್ರಕಾರಗಳನ್ನು ನೋಡಿ ಕಣ್ತುಂಬಿಕೊಳ್ಳುವುದೇ ಮಹಾ ಖುಷಿ. ಈ ನಿಟ್ಟಿನಲ್ಲಿ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಿಸದೇ ಭಾರತದ ಜನಪದ ಕಲೆಗಳನ್ನು ಬೆಳೆಸುವಲ್ಲಿ ನಿರತರಾಗಬೇಕು. ದೇಸಿ ಸಾಂಸ್ಕೃತಿ ಕಲೆಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಮಾರ್ತಾಂಡಪ್ಪ ಕತ್ತಿ, ನಾಡಿನ ಹಿರಿಯರು, ದಾರ್ಶನಿಕರು ಹಾಗೂ ಸಂತರು ರಚಿಸಿರುವ ತತ್ವ ಪದ, ಗೀತೆ, ಸೋಬಾನ ಪದ, ಸಾಂಪ್ರದಾಯಕ ಪದ, ಬೀಸುವ ಪದ, ಕುಟ್ಟುವ ಪದ ಹಾಗೂ ಹಲವಾರು ಗ್ರಾಮೀಣ ಕಲೆಗಳ ಕುರಿತು ಯುವ ಪೀಳಿಗೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ವಿದ್ಯಾವರ್ಧಕ ಸಂಘದ ಕೋಶ್ಯಾಧ್ಯಕ್ಷ ಸತೀಶ್ ತುರುಮರಿ, ಎಂ.ಎಸ್. ಪರಾಸ್, ಬಸವರಾಜ್ ಹಲಗಿ ಮಾತನಾಡಿದರು. ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಇಮಾಮಸಾಬ್ ವಲ್ಲೆಪ್ಪನವರ್, ಎಂ.ಜಿ. ನೂಲಕರ, ಶಿವಾನಂದ ಅಮರಶೆಟ್ಟಿ, ಪ್ರಭು ಕುಂದರಗಿ, ಅರ್ಜುನ್ ಮಾದರ, ಮಲ್ಲಪ್ಪ ಲಕ್ಕಣ್ಣವರ, ಮಂಜುನಾಥ ಕೊಣ್ಣೂರ, ಗಂಗವ್ವ ಆಡಿನವರ, ಚೆನ್ನವ್ವ ಹರಿಜನ ಅವರನ್ನು ಸನ್ಮಾನಿಸಲಾಯಿತು.
ಕಲಾವಿದ ಡಾ. ಪ್ರಕಾಶ ಮಲ್ಲಿಗವಾಡ ಸ್ವಾಗತಿಸಿದರು. ಸಾಲಿಯಾನ್ ಸಂತೋಷ ನಿರೂಪಿಸಿದರು. ಪುಂಡಲೀಕ್ ಸಾಗರೇಕರ ವಂದಿಸಿದರು. ಮೂಲ ಸಂಪ್ರದಾಯ ಪದ, ಸೋಬಾನೆ ಪದ, ಜನಪದ ನೃತ್ಯ, ಶಾಸ್ತ್ರೀಯ ನೃತ್ಯ, ಡೊಳ್ಳು ಕುಣಿತ, ತತ್ವಪದಗಳು, ರೈತಾಪಿ ಹಾಡು ಹಾಗೂ ವಿವಿಧ ನೃತ್ಯ ಪ್ರಕಾರಗಳ ಪ್ರದರ್ಶನ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.