ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಕೆಲ ಕಾಲ ರಸ್ತೆತಡೆ ನಡೆಸಿ ಹೆದ್ದಾರಿ ಸಂಚಾರಕ್ಕೆ ಅಡ್ಡಿಪಡಿಸಿದರು. ಬಳಿಕ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತ ಬೆಳೆಗಳಿಗೆ ನೀರು ಒದಗಿಸಲು ಸಾಧ್ಯವಾಗದೆ ಸಂಪೂರ್ಣವಾಗಿ ಒಣಗಿ ನಿಂತಿವೆ. ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ರೈತರು ಮನವಿ ಮಾಡುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಕೊಡಗು, ಕೇರಳದ ವೈನಾಡು ಪ್ರದೇಶದಲ್ಲಿ ಮಳೆ ಬೀಳುತ್ತಿತ್ತು. ಇದೀಗ ಅದೂ ಸಹ ಕಡಿಮೆಯಾಗಿದೆ. ಇನ್ನು ಮಳೆಯ ನಿರೀಕ್ಷೆ ಕಡಿಮೆಯಾಗಿದೆ. ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.ಕೆಆರ್‌ಎಸ್‌ನಲ್ಲಿ ಸದ್ಯ ೧೦೯ ಅಡಿ ನೀರಿನ ಸಂಗ್ರಹವಿದೆ. ಅಂದರೆ, ಸುಮಾರು ೩೦ ಟಿಎಂಸಿ ನೀರಿದೆ. ಇದರಲ್ಲಿ ತಮಿಳುನಾಡಿಗೆ ೧೬ ಟಿಎಂಸಿಯಷ್ಟು ನೀರು ಹರಿಸಿದರೆ ಇಲ್ಲಿನ ರೈತರ ಬೆಳೆಗಳಿಗೆ ನೀರು ಬೇಡವೇ, ತಮಿಳುನಾಡಿನಲ್ಲಿರುವವರಷ್ಟೇ ರೈತರು, ಅವರು ಮಾತ್ರ ಬೆಳೆ ಬೆಳೆಯಬೇಕು. ಆದರೆ ರಾಜ್ಯದ ಕಾವೇರಿ ಕಣಿವೆ ರೈತರು ಮಾತ್ರ ಬೆಳೆ ಬೆಳೆಯುವಂತಿಲ್ಲ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಹಾಲಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಕೊಡದೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದ ಕಾರಣ ರೈತರು ನಷ್ಟ ಅನುಭವಿಸುವಂತಾಗಿದೆ. ಮಳೆ ಪ್ರಮಾಣ ಕಡಿಯಾಗಲಿದೆ ಎಂಬ ಹವಾಮಾನ ಇಲಾಖೆಯ ವರದಿಯನ್ವಯ ಮುಖ್ಯಮಂತ್ರಿಗಳು ಈ ಬಾರಿ ಬೆಳ ಬೆಳೆಯದಂತೆ ತಿಳಿಸಿದ್ದರು. ಇದರ ಉದ್ದೇಶ ಮಾತ್ರ ತಮಿಳುನಾಡಿಗೆ ನೀರು ಹರಿಸುವುದಾಗಿದೆ ಎಂದು ಕಿಡಿಕಾರಿದರು.
ಮುಖಂಡರಾದ ಅಣ್ಣಯ್ಯ, ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು, ಮಂಜುನಾಥ್, ಎಂ.ವಿ.ಕೃಷ್ಣ, ಎಚ್.ಡಿ.ಜಯರಾಂ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.